ಮೈಸೂರು: ಯೋಗ ಮತ್ತು ಮೈಸೂರಿಗೆ ವಿಶೇಷವಾದ ನಂಟು ಇದ್ದು, ಯೋಗ ಪರಂಪರೆಯನ್ನು ಎತ್ತರಕ್ಕೆ ಕೊಂಡೊಯ್ಯಲು ಇಲ್ಲಿನ ಯೋಗ ಗುರುಗಳ ಅಪಾರ ಕೊಡುಗೆ ನೀಡಿದ್ದಾರೆ ಎಂದು ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಹೇಳಿದರು.
ಯೋಗ ದಸರಾ ಉಪ ಸಮಿತಿ ವತಿಯಿಂದ ನಗರದ ಜೆಕೆ ಮೈದಾನದ ಎಂಎಂಸಿ ಅಮೃತ ಮಹೋತ್ಸವ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಯೋಗ ವೈಜ್ಞಾನಿಕ ವಿಚಾರ ಸಂಕಿರಣದಲ್ಲಿ ಮಾತನಾಡಿ, ನಗರಕ್ಕೆ ಯೋಗ ಕಲಿಯಲು ದೇಶ ವಿದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ವಿದೇಶಿಗರು ಹೆಚ್ಚಿನ ಸಂಖ್ಯೆಯಲ್ಲಿ ಕಾಶಿ ಹಾಗೂ ಮೈಸೂರಿಗೆ ಯೋಗ ಕಲಿಯಲು ಆಗಮಿಸುತ್ತಾರೆ. ಮೈಸೂರಿನ ಗೋಕುಲಂಗೆ ಭೇಟಿ ನೀಡಿದರೆ ವಿದೇಶಕ್ಕೆ ಭೇಟಿ ನೀಡಿದ ಅನುಭವ ಆಗುತ್ತದೆ. ಅಷ್ಟರ ಮಟ್ಟಿಗೆ ಅಲ್ಲಿ ವಿದೇಶಿಯರು ಯೋಗ ಕಲಿಯಲು ನೆರೆದಿರುತ್ತಾರೆ ಎಂದರು.
ಯೋಗ ಹಾಗೂ ಆಯುರ್ವೇದ ಜತೆಯಾಗಿ ಸಾಗುತ್ತಿರುವುದು ಸಂತಸದ ವಿಚಾರ. ಯೋಗ ಕಲಿಯುವವರು ಆಯುರ್ವೇದ ಕಡೆಗೂ ಆಕರ್ಷಿತರಾಗುತ್ತಿದ್ದಾರೆ. ನಮ್ಮ ಋಷಿ ಮುನಿಗಳ ಕಾಲದಿಂದ ಪ್ರಾರಂಭವಾದ ಯೋಗ ಪರಂಪರೆ ಇದೀಗ ವಿಶ್ವವ್ಯಾಪಿಯಾಗಿದೆ ಎಂಬುದು ಸಂತಸದ ವಿಚಾರ. ಯೋಗ ಎಲ್ಲರಿಗೂ ಯೋಗ ತಲುಪಿಸಬೇಕು. ಆ ಮೂಲಕ ಎಲ್ಲರ ಆರೋಗ್ಯ ವೃದ್ಧಿಯಾಗಬೇಕು ಎಂದು ಹೇಳಿದರು.
ಎಂಐಟಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಂಶುಪಾಲ ಎನ್.ವಿ. ಕೃಷ್ಣಮೂರ್ತಿ ಮಾತನಾಡಿ, ಪತಂಜಲಿ ಮಹರ್ಷಿ ಪ್ರಕಾರ ನಿರಂತರವಾಗಿ ಒಂದು ತಿಂಗಳು ಯೋಗಾಭ್ಯಾಸ ಮಾಡಿದರೆ ನಿಮಗೆ ಸಣ್ಣ ಪ್ರಮಾಣದ ಆರೋಗ್ಯದ ಪ್ರಯೋಜನ ದೊರೆಯುತ್ತದೆ. 6 ತಿಂಗಳು ನಿರಂತರ ಯೋಗ ಮಾಡಿದರೆ ಶೇ.50 ರಷ್ಟು ಲಾಭ, ಒಂದು ಸಂವತ್ಸರ ಅಭ್ಯಾಸ ಮಾಡಿದರೆ ಪೂರ್ಣ ಪ್ರಮಾಣದ ಲಾಭ ದೊರೆಯುತ್ತದೆ. ಹಾಗಾಗಿ ಎಲ್ಲರು ಯೋಗವನ್ನು ನಿರಂತರವಾಗಿ ಅಭ್ಯಾಸ ಮಾಡಬೇಕು ಎಂದು ಮನವಿ ಮಾಡಿದರು.
ಯೋಗ ದಸರಾ ಉಪ ಸಮಿತಿ ವಿಶೇಷಾಧಿಕಾರಿ ರಮ್ಯಾ, ಎನ್.ಆರ್.ನಾಗೇಶ್, ಉಪಾಧ್ಯಕ್ಷ ದೇವರಾಜ್, ಅನೂಪ್, ಮಹೇಶ್, ಮನಶಾಸ್ತ್ರಜ್ಞೆ ಡಾ.ದೇವಕಿ, ತಜ್ಞ ವೈದ್ಯರಾದ ಡಾ.ರಾಜಶೇಖರ್ ರೆಡ್ಡಿ, ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಸದಾಶಿವೇಗೌಡ, ಅಮೃತ ಸಿಂಚನ ಆಧ್ಯಾತ್ಮಿಕ ವಿಶ್ವ ವಿದ್ಯಾಲದ ಸ್ಥಾಪಕ ಕುಲಪತಿ ಡಾ.ಹರೀಶ್, ಮೈಸೂರು ವೈದ್ಯಕೀಯ ಮಹಾವಿದ್ಯಾ ಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಹೇಮಲತಾ, ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ ಪ್ರಾಂಶುಪಾಲ ಡಾ.ಸುಧಾಕರ್ ರೆಡ್ಡಿ, ಕಾವೇರಿ ಆಯುರ್ವೇದ ಆಸ್ಪತ್ರೆಯ ಪ್ರಾಂಶುಪಾಲ ಡಾ. ಕೃಷ್ಣ ಪ್ರಸಾದ್ ಹಾಗೂ ಇತರರು ಇದ್ದರು.