ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ 2021ಕ್ಕೆ ಕ್ಷಣ ಗಣನೆ ಆರಂಭವಾಗಿದೆ. ಇಂದು ದಸರಾದ ಮೊದಲ ಕಾರ್ಯಕ್ರಮ ಗಜಪಯಣ ಶುರುವಾಗಲಿದೆ.
ದಸರಾ ಗಜಪಡೆಗೆ ವೀರನ ಹೊಸಹಳ್ಳಿಯಲ್ಲಿ ಪೂಜೆ ನೆರವೇರಿಸಲಾಗುವುದು; ಇಂದು ಬೆಳಗ್ಗೆ 9:30 ರ ಶುಭ ಮುಹೂರ್ತದಲ್ಲಿ ಗಜಪಡೆಗೆ ಪೂಜೆ ಸಲ್ಲಿಸಲಾಗುವುದು. ಗಜಪಯಣ ಕಾರ್ಯಕ್ರಮಕ್ಕೆ ಸಚಿವ ಎಸ್.ಟಿ ಸೋಮಶೇಖರ್ ಚಾಲನೆ ನೀಡಲಿದ್ದಾರೆ.
ನಾಗರಹೊಳೆ ವ್ಯಾಪ್ತಿಯ ಹುಣಸೂರಿನ ವೀರನಹೊಸಹಳ್ಳಿ ಅರಣ್ಯ ಪ್ರದೇಶದಲ್ಲಿ ಈ ಕಾರ್ಯಕ್ರಮ ಶುರುವಾಗಲಿದೆ. ಇದಾಗಲೇ ಆನೆಗಳ ಸ್ವಾಗತಕ್ಕೆ ಅರಣ್ಯಾಧಿಕಾರಿಗಳ ಸಿದ್ಧತೆ ನಡೆಸಿದ್ದಾರೆ. ಮೊದಲಿಗೆ ದಸರಾಗೆ ಆಯ್ಕೆಯಾಗಿರುವ ಆನೆಗಳಿಗೆ ವಿಶೇಷ ಪೂಜೆಯನ್ನು ಜಿಲ್ಲಾಡಳಿತ ನಡೆಸಲಿದ್ದು, ನಂತರ ಕಾರ್ಯಕ್ರಮ ಶುರುವಾಗಲಿದೆ.
ವಿವಿಧ ಶಿಬಿರಗಳಿಂದ ವೀರನಹೊಸಹಳ್ಳಿಗೆ ಆನೆಗಳು.ಆಗಮಿಸಲಿವೆ. ಮಾವುತ, ಕಾವಾಡಿಗಳ ಕುಟುಂಬದೊಂದಿಗೆ ಆನೆಗಳು ಮೈಸೂರಿನತ್ತ ಪ್ರಯಾಣ ಬೆಳೆಸಿವೆ. ಅಂಬಾರಿ ಹೊರುವ ಅಭಿಮನ್ಯು ನೇತೃತ್ವದಲ್ಲಿ ಮೈಸೂರಿಗೆ ಗಜಪಡೆ ಬರಲಿದೆ.
ಸದ್ಯ ಈ ಆನೆಗಳು ಮೈಸೂರಿನ ಅರಣ್ಯ ಭವನದ ಆವರಣದಲ್ಲಿ ಬೀಡು ಬಿಟ್ಟಿದ್ದು, ಇಂದು ಸಂಜೆ ವೇಳೆ ಕಾಡಿನಿಂದ ಹೊರಟು ಮೈಸೂರು ಅರಮನೆ ಆವರಣ ಸೇರಲಿವೆ.