ಜಿಲ್ಲೆ

ಮೈಸೂರು ಪಾಲಿಕೆಯಲ್ಲಿ ಮತ್ತೆ ಸ್ಥಾಯಿ ಸಮಿತಿ ಚುನಾವಣೆ ಕುತೂಹಲ..!

ಸದೇಶ್ ಕಾರ್ಮಾಡ್ ಮೈಸೂರು
ವಿಧಾನಸಭೆ ಚುನಾವಣೆಯ ನಂತರ ನಗರ ಪಾಲಿಕೆಯು ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಹಾಗೂ ಬಜೆಟ್ ಮಂಡಿ ಸಲು ಸಿದ್ಧತೆ ಪ್ರಾರಂಭಿಸಿದೆ. ರಾಜಕೀಯ ಕಾರಣಗಳಿಗೋಸ್ಕರ ಮೂರು ಬಾರಿ ಸ್ಥಾಯಿ ಸಮಿತಿ ಚುನಾವಣೆಯನ್ನು ದಿಢೀರಾಗಿ ಮುಂದೂಡಲಾಗಿತ್ತು. ಇದೀಗ 4ನೇ ಬಾರಿ ಚುನಾವಣೆಗೆ ದಿನಾಂಕ ನಿಗದಿ ಪಡಿಸಲಾಗಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಡೆ ಕುತೂಹಲ ಮೂಡಿಸಿದೆ.

ಪಾಲಿಕೆಯಲ್ಲಿ ಯಾವುದೇ ಪಕ್ಷಗಳಿಗೂ ಸ್ಪಷ್ಟ ಬಹುಮತ ಇಲ್ಲವಾದ ಹಿನ್ನೆಲೆಯಲ್ಲಿ ಈ ಬಾರಿ ಬಿಜೆಪಿ ಜೆಡಿಎಸ್‌ನ ಬೆಂಬಲದೊಂದಿಗೆ ಮೇಯರ್ ಹಾಗೂ ಉಪ ಮೇಯರ್ ಸ್ಥಾನ ಪಡೆದುಕೊಂಡಿತ್ತು. ಹಾಗಾಗಿ 4 ಸ್ಥಾಯಿ ಸಮಿತಿಗಳ ಎಲ್ಲ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದಾಗಿ ಬಿಜೆಪಿ ಮಾತು ಕೊಟ್ಟಿತ್ತು. ಆದರೆ, ಸ್ಥಾಯಿ ಸಮಿತಿ ಚುನಾವಣೆ ಮೂರು ಬಾರಿ ಹಮ್ಮಿಕೊಂಡ ಸಂದರ್ಭದಲ್ಲಿ ನಾನಾ ರಾಜಕೀಯ ಬೆಳವಣಿಗೆಗಳು ನಡೆದು ಚುನಾವಣೆಯನ್ನು ಮೇಯರ್ ಶಿವಕುಮಾರ್ ದಿಢೀರಾಗಿ ಮುಂದೂಡಿ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಆಕ್ರೋಶಕ್ಕೆ ಗುರಿಯಾಗಿದ್ದರು.

ಮೇ 25ಕ್ಕೆ ಚುನಾವಣೆ

ಇದೀಗ ವಿಧಾನಸಭೆ ಚುನಾವಣೆ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಮೇಯರ್ ಮೇ 25 ರಂದು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ಸಭೆ ಕರೆದಿದ್ದಾರೆ. ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸ್ಥಾಯಿ ಸಮಿತಿ, ಪಟ್ಟಣ ಯೋಜನೆ ಮತ್ತು ಸುಧಾರಣೆಗಾಗಿ ಸ್ಥಾಯಿ ಸಮಿತಿ, ಲೆಕ್ಕಪತ್ರಗಳಿಗಾಗಿ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಬಜೆಟ್‌ಗೆ ತಯಾರಿ

ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡದೆ ಬಜೆಟ್ ಮಂಡಿಸಲು ಸಾಧ್ಯವಿಲ್ಲ. ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲು ಗಳ ಸ್ಥಾಯಿ ಸಮಿತಿ ಅಧ್ಯಕ್ಷರು ಬಜೆಟ್ ಮಂಡಿಸುತ್ತಾರೆ. ಹೀಗಾಗಿ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡದೆ ಬಜೆಟ್ ಮಂಡಿಸಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಮೇ 25 ರಂದು ಸ್ಥಾಯಿ ಸಮಿತಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಿ ನಂತರ ಮೇ ಅಂತ್ಯ ಅಥವಾ ಜೂನ್ ಮೊದಲ ವಾರದಲ್ಲಿ ಬಜೆಟ್ ಮಂಡಿಸಲು ಸಿದ್ಧತೆ ಕೈಗೊಳ್ಳಲಾಗಿದೆ.

ಮೂರು ಬಾರಿ ಮುಂದೂಡಿದ ಸಭೆ

ಬಿಜೆಪಿ ತಾನು ನೀಡಿದ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ ಫೆ.2 ರಂದು ಸ್ಥಾಯಿ ಸಮಿತಿ ಚುನಾವಣೆ ನಡೆಸಲು ಮುಂದಾಯಿತು. ಆದರೆ ಆ ಸಂದರ್ಭ ಪಕ್ಷೇತರ ಸದಸ್ಯರನ್ನು ಸೆಳೆದು ಅಧಿಕಾರ ಪಡೆಯಲು ಕಾಂಗ್ರೆಸ್ ಕಾರ್ಯತಂತ್ರ ರೂಪಿಸಿತು. ಹೀಗಾಗಿ ಜೆಡಿಎಸ್ ಸದಸ್ಯರ ಕೋರಿಕೆಯ ಮೇರೆಗೆ ಮೇಯರ್ ಚುನಾವಣೆಯನ್ನು ಮುಂದೂಡಿದರು. ಇದಾದ ನಂತರ ಮಾ.13 ರಂದು ಮತ್ತೆ ಚುನಾವಣೆ ನಡೆಸಲು ಮೇಯರ್ ಸಭೆ ಕರೆದರು. ಆದರೆ, ಅಷ್ಟುಹೊತ್ತಿಗೆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಾವು ಪ್ರಾರಂಭದ ಹಿನ್ನೆಲೆಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿಗೆ ಬಿಜೆಪಿ ವರಿಷ್ಠರು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಮೇಯರ್ ಅನಾರೋಗ್ಯ ಕಾರಣ ಮುಂದೊಡ್ಡಿ ಸಭೆಯನ್ನು ಮುಂದೂಡಿದ್ದರು. ಅದಾದ ನಂತರ ಮಾ.23 ರಂದು ಹಮ್ಮಿಕೊಂಡ ಸಭೆಯಲ್ಲಿ ಬಿಜೆಪಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ನೊಂದಿಗೆ ಅಂತರ ಕಾಯ್ದುಕೊಳ್ಳುವ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಕಳವಳಗೊಂಡ ಜೆಡಿಎಸ್ ಚುನಾವಣೆಯ ಸಭೆಯನ್ನು ಮುಂದೂಡಿಸುವಲ್ಲಿ ಯಶಸ್ವಿಯಾಯಿತು.

ಇದೀಗ ವಿಧಾನಸಭೆ ಚುನಾವಣೆ ಮುಗಿದಿದ್ದು, ಬಿಜೆಪಿ ಕೊಟ್ಟ ಮಾತಿನ ಪ್ರಕಾರ ಜೆಡಿಎಸ್‌ಗೆ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುವುದೇ ಎಂಬುದು ಎಲ್ಲರ ಕುತೂಹಲದ ಪ್ರಶ್ನೆಯಾಗಿದೆ. ಒಂದುವೇಳೆ ಬಿಜೆಪಿ ಈ ಬಾರಿಯೂ ತಟಸ್ಥರಾಗಿ ಉಳಿದರೆ ಸ್ಥಾಯಿ ಸಮಿತಿಗಳಲ್ಲಿ ಕಾಂಗ್ರೆಸ್ ಕೈ ಮೇಲಾಗುವ ಸಾಧ್ಯತೆ ಇದೆ.

ಯಾರಿಗೆ ಎಷ್ಟು ಸದಸ್ಯರ ಬಲ?

ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿಯಲ್ಲಿ 3 ಬಿಜೆಪಿ, 2 ಜೆಡಿಎಸ್, 2 ಕಾಂಗ್ರೆಸ್, ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸ್ಥಾಯಿ ಸಮಿತಿಯಲ್ಲಿ 2 ಕಾಂಗ್ರೆಸ್, 2 ಬಿಜೆಪಿ, 2 ಜೆಡಿಎಸ್ ಹಾಗೂ 1 ಪಕ್ಷೇತರ, ಪಟ್ಟಣ ಯೋಜನೆ ಮತ್ತು ಸುಧಾರಣೆಗಾಗಿ ಸ್ಥಾಯಿ ಸಮಿತಿಯಲ್ಲಿ 2 ಕಾಂಗ್ರೆಸ್, ತಲಾ 1 ಬಿಜೆಪಿ, ಬಿಎಸ್‌ಪಿ ಮತ್ತು ಜೆಡಿಎಸ್, 2 ಪಕ್ಷೇತರರು, ಲೆಕ್ಕಪತ್ರಗಳಿಗಾಗಿ ಸ್ಥಾಯಿ ಸಮಿತಿಯಲ್ಲಿ 3 ಕಾಂಗ್ರೆಸ್, 2 ಬಿಜೆಪಿ, 1 ಜೆಡಿಎಸ್ , 1ಪಕ್ಷೇತರ ಸದಸ್ಯರು ಇದ್ದಾರೆ.

8 ತಿಂಗಳ ನಂತರ ಚುನಾವಣೆ

ಪಾಲಿಕೆಯ ಮೇಯರ್ ಚುನಾವಣೆ 6 ಸೆಪ್ಟೆಂಬರ್ 2022 ರಂದು ನಡೆಯಿತು. ಮೇಯರ್ ಆಗಿ ಬಿಜೆಪಿಯ ಶಿವಕುಮಾರ್, ಉಪ ಮೇಯರ್ ಬಿಜೆಪಿಯ ಆಗಿ ಡಾ.ಜಿ.ರೂಪಾ ಆಯ್ಕೆಗೊಂಡರು. ಮೇಯರ್, ಉಪ ಮೇಯರ್ ಚುನಾವಣೆ ನಡೆದು 8 ತಿಂಗಳ ನಂತರ ಸ್ಥಾಯಿ ಸಮಿತಿ ಚುನಾವಣೆ ನಡೆಯುತ್ತಿದೆ.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಜೆಟ್ ಹಾಗೂ ಸ್ಥಾಯಿ ಸಮಿತಿ ಚುನಾವಣೆ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಚುನಾವಣೆ ಮುಗಿದಿರುವ ಹಿನ್ನೆಲೆಯಲ್ಲಿ ಮೇ 25 ರಂದು ಸ್ಥಾಯಿ ಸಮಿತಿ ಚುನಾವಣೆಗೆ ಸಭೆ ಕರೆಯಲಾಗಿದೆ. ಇದಾದ ನಂತರ ಮೇ ಅಂತ್ಯಕ್ಕೆ ಅಥವಾ ಜೂನ್ ಮೊದಲ ವಾರದಲ್ಲಿ ಬಜೆಟ್ ಮಂಡಿಸಲಾಗುವುದು.
ಶಿವಕುಮಾರ್, ಮೇಯರ್