ಜಿಲ್ಲೆ

ಮೈಸೂರು ಪಾಲಿಕೆ: ತೆರಿಗೆ ವಸೂಲಾತಿಗೆ ನಾರಿಶಕ್ತಿ

ನಗರ ಪಾಲಿಕೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ತೆರಿಗೆ ವಸೂಲಾತಿ ಆಗದೆ ಇರುವುದು ಹಾಗೂ ನೀರಿನ ಬಿಲ್ ವಸೂಲಾತಿಯಲ್ಲಿ ಆಗಿ ರುವ ಗೋಲ್‌ಮಾಲ್ ನಂತರ ಎಚ್ಚೆತ್ತುಕೊಂಡಿರುವ ನಗರ ಪಾಲಿಕೆಯು ತೆರಿಗೆ ವಸೂಲಾತಿ ಜವಾಬ್ದಾರಿಯನ್ನು ಮಹಿಳಾ ಸಂಘಗಳಿಗೆ ವಹಿಸಲು ತೀರ್ಮಾನಿಸಿದೆ. ಇನ್ನು ಮುಂದೆ ಮಹಿಳೆಯರು ಮನೆ ಮನೆಗೆ ತೆರಳಿ ತೆರಿಗೆ ವಸೂಲಾತಿ ಮಾಡಲಿದ್ದಾರೆ.

ನಗರದಲ್ಲಿ ನೀರಿನ ತೆರಿಗೆ ಹಾಗೂ ಆಸ್ತಿ ತೆರಿಗೆ ಸಮರ್ಪಕವಾಗಿ ವಸೂಲಾತಿಯಾಗುತ್ತಿಲ್ಲ. ಅಲ್ಲದೆ, ಇತ್ತೀಚೆಗೆ ಸಂಗ್ರಹವಾದ ನೀರಿನ ಬಿಲ್‌ನಲ್ಲೂ ಪಾಲಿಕೆ ಸಿಬ್ಬಂದಿ ಗೋಲ್‌ಮಾಲ್ ನಡೆಸಿದ್ದರು. ಗ್ರಾಹಕರು ನೀರಿನ ಬಿಲ್ ಪಾವತಿಸಿದ್ದರೂ ಪಾಲಿಕೆ ಸಿಬ್ಬಂದಿ ಪಾಲಿಕೆಗೆ ನೀಡದೆ ಬರೋಬ್ಬರಿ 1.25 ಕೋಟಿ ರೂ.ಗಳನ್ನು ದುರುಪಯೋಗ ಪಡಿಸಿಕೊಂಡಿದ್ದರು. ಈ ಬಗ್ಗೆ ತನಿಖೆ ಸಂದರ್ಭ ಪಾಲಿಕೆ ಸಿಬ್ಬಂದಿಯ ಕರ್ಮಕಾಂಡ ಬಯಲಾಗಿ 20 ಮೀಟರ್ ರೀಡರ್‌ಗಳನ್ನು ಸೇವೆಯಿಂದ ವಜಾಗೊಳಿಸಲಾಯಿತು. ಬಳಕೆದಾರರಿಂದ ನೀರಿನ ಬಿಲ್ಲಿನ ಮೊತ್ತ ಸ್ವಿಕರಿಸಿ ನಂತರ ಪಾಲಿಕೆಯ ಖಾತೆಗೆ ಜಮಾ ಮಾಡದೆ ಅನಧಿಕೃತವಾಗಿ ಮ್ಯಾನುವಲ್ ಬಿಲ್ ನಮೂದು ಮಾಡುವ ಮುಖಾಂತರ ನೀರಿನ ಬಿಲ್ಲನ್ನು ಕಡಿಮೆ ಮಾಡಿದ್ದರು. ಆ ಮೂಲಕ ಪಾಲಿಕೆಯ ಬೊಕ್ಕಸಕ್ಕೆ ಆರ್ಥಿಕ ನಷ್ಟವುಂಟು ಮಾಡಿದ್ದರು. ಈ ಎಲ್ಲ ಬೆಳವಣಿಗೆ ಹಿನ್ನೆಲೆಯಲ್ಲಿ ತೆರಿಗೆ ವಸೂಲಾತಿ ಮಾಡುವ ಜವಾಬ್ದಾರಿ ಯನ್ನು ಮಹಿಳಾ ಸಂಘಗಳಿಗೆ ವಹಿಸಲು ಪಾಲಿಕೆ ನಿರ್ಧಾರ ಮಾಡಿದೆ.

ತೆರಿಗೆ ವಸೂಲಾತಿಗೆ ನಗರ ಪಾಲಿಕೆ ಸಾಕಷ್ಟು ಶ್ರಮ ವಹಿಸಿದರೂ ಜನರು ನಿರೀಕ್ಷಿತ ಪ್ರಮಾಣದಲ್ಲಿ ಪಾವತಿ ಮಾಡುತ್ತಿಲ್ಲ. ಹೀಗಾಗಿ ನಗರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನಗರ ಪಾಲಿಕೆಗೆ ಪ್ರತಿ ಬಾರಿ ಆರ್ಥಿಕ ಸಮಸ್ಯೆ ಎದುರಾಗುತ್ತಿದೆ. ಸಮರ್ಪಕವಾಗಿ ತೆರಿಗೆ ವಸೂಲಾತಿಯಾದರೆ ಅಭಿವೃದ್ಧಿ ಕಾರ್ಯಗಳನ್ನು ಚುರುಕುಗೊಳಿಸಬಹುದು. ಈ ಕುರಿತು ಜನರಲ್ಲಿ ಸಾಕಷ್ಟು ಜಾಗೃತಿ ಮೂಡಿಸಿದರೂ ಸಾಕಷ್ಟು ಜನರು ತೆರಿಗೆ ಪಾವತಿಗೆ ಹಿಂದೇಟು ಹಾಕುತ್ತಲೇ ಇದ್ದಾರೆ. ತೆರಿಗೆ ಪಾವತಿಗೆ ಆನ್‌ಲೈನ್ ವ್ಯವಸ್ಥೆ ಇದ್ದರೂ ಜನರು ಪಾವತಿಗೆ ಆಸಕ್ತಿತೋರುತ್ತಿಲ್ಲ. ಮಹಿಳಾ ಸಂಘಗಳಿಗೆ ತೆರಿಗೆ ವಸೂಲಾತಿ ಜವಾಬ್ದಾರಿ ವಹಿಸಿದರೆ ವಸೂಲಾತಿ ಪ್ರಮಾಣ ಹೆಚ್ಚಾಗುವುದು ಮಾತ್ರವಲ್ಲದೆ ಯಾವುದೇ ಗೋಲ್‌ಮಾಲ್‌ಗೆ ಅವಕಾಶ ಇರುವುದಿಲ್ಲ ಎಂಬ ಕಾರಣಕ್ಕೆ ಪಾಲಿಕೆ ಇಂತಹ ಒಂದು ಪ್ರಯೋಗ ಮಾಡುತ್ತಿದೆ.

ತೆರಿಗೆ ವಸೂಲಾತಿ ಮಾಡಲು ಆಸಕ್ತಿ ತೋರುವ ಸ್ತ್ರೀ ಶಕ್ತಿ ಹಾಗೂ ಮಹಿಳಾ ಸ್ವ ಸಹಾಯ ಸಂಘಗಳು ಪಾಲಿಕೆಗೆ ಅರ್ಜಿ ಸಲ್ಲಿಸಬೇಕು. ಡೇ ನಲ್ಮ್ ಯೋಜ ನೆಯಡಿ ರಚಿಸಲಾದ ಸ್ವ ಸಹಾಯ ಸಂಘಗಳಿಗೆ ಬಿಲ್ ವಸೂಲಾತಿ ಜವಾಬ್ದಾರಿ ನೀಡಲಾಗುವುದು. ಸಂಘದಲ್ಲಿರುವ ಒಟ್ಟು ಸದಸ್ಯರ ಪೈಕಿ ಕನಿಷ್ಠ ಒಬ್ಬ ಸದಸ್ಯರಾದರೂ 7ನೇ ತರಗತಿವರೆಗೆ ಶಿಕ್ಷಣ ಪಡೆದಿರುಬೇಕು ಹಾಗೂ ಡಿಜಿಟಲ್ ಸಾಕ್ಷರತೆ ಹೊಂದಿರಬೇಕು. ತೆರಿಗೆ ಸಂಗ್ರಹಿ ಸುವ ಸಂಘಗಳಿಗೆ ಶೇ.5 ರಷ್ಟು ಕಮಿಷನ್‌ಅನ್ನು ಪ್ರೋತ್ಸಾಹ ಧನ ರೂಪದಲ್ಲಿ ನೀಡಲಾಗುವುದು. ವಾರ್ಡ್‌ವಾರು ಮಹಿಳಾ ಸಂಘಗಳನ್ನು ಗುರುತಿಸಿ ಅವರಿಗೆ ತೆರಿಗೆ ಸಂಗ್ರಹಿಸುವ ಜವಾಬ್ದಾರಿ ವಹಿಸಲು ಉದ್ದೇಶಿಸಲಾಗಿದೆ. ಮಹಿಳೆಯರಿಗೆ ತೆರಿಗೆ ವಸೂಲಾತಿ ಜವಾಬ್ದಾರಿ ವಹಿಸಿದ ನಂತರವಾದರೂ ನಗರದಲ್ಲಿ ತೆರಿಗೆ ವಸೂಲಾತಿಯ ಪ್ರಮಾಣ ಹೆಚ್ಚಾಗುವುದೋ ಕಾದು ನೋಡಬೇಕಾಗಿದೆ.

ಯಾವುದೇ ನಗರ ಸ್ಥಳೀಯ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಸಲು ಸರ್ಕಾರದಿಂದ ಕಾಲ ಕಾಲಕ್ಕೆ ಅಗತ್ಯಕ್ಕೆ ತಕ್ಕಷ್ಟು ಅಭಿವೃದ್ಧಿ ಅನುದಾನ ಬಿಡುಗಡೆಯಾಗುವ ಜತೆಗೆ ನಗರದಲ್ಲಿ ತೆರಿಗೆ ಸಂಗ್ರಹ ಪ್ರಮಾಣವೂ ಹೆಚ್ಚಾಗಬೇಕು. ಆದರೆ, ನಗರದಲ್ಲಿ ತೆರಿಗೆ ಪಾವತಿಸದವರ ಸಂಖ್ಯೆ ಯೇ ಹೆಚ್ಚು ಇದೆ.

ನಗರ ವ್ಯಾಪ್ತಿಯಲ್ಲಿ ತೆರಿಗೆಯನ್ನು ಸಮರ್ಪಕವಾಗಿ ಸಂಗ್ರಹಿಸುವ ಉದ್ದೇಶದಿಂದ ಮಹಿಳಾ ಸ್ವ ಸಹಾಯ ಸಂಘಗಳಿಗೆ ತೆರಿಗೆ ಸಂಗ್ರಹಿಸುವ ಜವಾಬ್ದಾರಿ ನೀಡಲು ನಿರ್ಧರಿಸಲಾಗಿದೆ. ಅರ್ಜಿ ಸಲ್ಲಿಸುವ ಅರ್ಹ ಸಂಘಗಳನ್ನು ಗುರುತಿಸಿ ಅವರಿಗೆ ತರಬೇತಿ ನೀಡಲಾಗುವುದು. ಆಯ್ಕೆಯಾಗುವ ಸಂಘಗಳಿಗೆ ಪ್ರೋತ್ಸಾಹ ಧನ ನೀಡಲಾಗುವುದು.

ಆಸಾದ್ ಉರ್ ರೆಹಮಾನ್ ಷರೀಫ್, ನಗರ ಪಾಲಿಕೆ ಆಯುಕ್ತ

ಮಹಿಳಾ ಸಂಘಗಳಿಗೆ ತೆರಿಗೆ ವಸೂಲಾತಿಯ ಜವಾಬ್ದಾರಿ ವಹಿಸುತ್ತಿರುವುದು ಉತ್ತಮ ಬೆಳವಣಿಗೆ. ಮಹಿಳೆಯರು ಮನೆ ಮನೆಗೆ ತೆರಳಿ ಜನರಿಂದ ಪರಿಣಾಮಕಾರಿಯಾಗಿ ತೆರಿಗೆ ವಸೂಲಾತಿ ಮಾಡುವ ನಿರೀಕ್ಷೆ ಇದೆ. ಆದರೆ, ಜವಾಬ್ದಾರಿ ವಹಿಸಿಕೊಳ್ಳುವ ಮಹಿಳೆಯರಿಗೆ ಸಾರ್ವಜನಿಕರೊಂದಿಗೆ ಯಾವ ರೀತಿ ನಡೆದುಕೊಳ್ಳಬೇಕು ಹಾಗೂ ತೆರಿಗೆಯನ್ನು ಯಾವ ರೀತಿ ವಸೂಲಾತಿ ಮಾಡಬೇಕು ಎಂಬ ಕುರಿತು ತರಬೇತಿ ನೀಡುವ ಅವಶ್ಯಕತೆ ಇದೆ. ಒಟ್ಟಾರೆ ತೆರಿಗೆ ವಸೂಲಾತಿ ವಿಚಾರದಲ್ಲಿ ನಗರ ಪಾಲಿಕೆಯ ನಡೆ ಉತ್ತಮವಾಗಿದೆ.

ಶ್ರೀಕಂಠಯ್ಯ, ಮಾಜಿ ಮೇಯರ್

--------------------