ಜಿಲ್ಲೆ

ತೆರಿಗೆ ಸಂಗ್ರಹದಲ್ಲಿ ದಾಖಲೆ ನಿರ್ಮಿಸಿದ ಮೈಸೂರು ನಗರ ಪಾಲಿಕೆ..!

  • ತೆರಿಗೆ ಸಂಗ್ರಹದಲ್ಲಿ 200 ಕೋಟಿ ರೂ. ಗಡಿದಾಟಿದ ಪಾಲಿಕೆ
  • ಈ ಬಾರಿಯ ಜೂನ್ ಅಂತ್ಯಕ್ಕೆ 123.31 ಕೋಟಿ ರೂ. ವಸೂಲಾತಿ

ಸದೇಶ್ ಕಾರ್ಮಾಡ್ ಮೈಸೂರು
ಪ್ರತಿ ಬಾರಿ ತೆರಿಗೆ ವಸೂಲಾತಿಯಲ್ಲಿ ಹಿಂದೆ ಬೀಳುತ್ತಿದ್ದ ನಗರ ಪಾಲಿಕೆ ಕಳೆದ ಮೂರು ವರ್ಷಗಳಿಂದ ತೆರಿಗೆ ವಸೂಲಾತಿಯಲ್ಲಿ ಗಣನಿ ೀಯ ಸಾಧನೆ ತೋರುತ್ತಿದ್ದು, 2021-22ನೇ ಸಾಲಿನಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಯಾವ ವರ್ಷದಲ್ಲೂ ಪಾಲಿಕೆ ತೆರಿಗೆ ಸಂಗ್ರಹದಲ್ಲಿ 200 ಕೋಟಿ ರೂ. ಗಡಿ ದಾಟಿರಲಿಲ್ಲ. ಆದರೆ, ಕಳೆದ ಆರ್ಥಿಕ ಸಾಲಿನಲ್ಲಿ 200 ಗಡಿ ದಾಟಿ ದಾಟಿದೆ.

ಪ್ರತಿ ವರ್ಷ ಆಸ್ತಿ ತೆರಿಗೆ, ಉದ್ದಿಮೆ ಪರವಾನಗಿ ಹಾಗೂ ನೀರಿನ ಶುಲ್ಕ ವಸೂಲಾತಿ ಸಮರ್ಪಕವಾಗಿ ನಡೆಯದೆ ದೊಡ್ಡ ಪ್ರಮಾಣದಲ್ಲಿ ತೆರಿಗೆ ಬಾಕಿ ಉಳಿಯುತಿತ್ತು. ಇದು ನಗರದ ಅಭಿವೃದ್ಧಿಗೆ ದೊಡ್ಡ ಪ್ರಮಾಣದಲ್ಲಿ ಹಿನ್ನಡೆ ಉಂಟಾಗುತಿತ್ತು. ಹೀಗಾಗಿ ತೆರಿಗೆ ವಸೂಲಾತಿಯನ್ನು ಚುರುಕುಗೊಳಿಸುವಂತೆ ನಗರ ಪಾಲಿಕೆಗೆ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಇದರ ಪರಿಣಾಮ ನಗರ ಪಾಲಿಕೆ ತೆರಿಗೆ ವಸೂ ಲಾತಿಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲು ಪ್ರಾರಂಭಿಸಿದ ನಂತರ ತೆರಿಗೆ ವಸೂಲಾತಿ ಚುರುಕುಗೊಂಡಿದೆ.

ಆಸ್ತಿ ತೆರಿಗೆ: 2017-18ನೇ ಸಾಲಿನಲ್ಲಿ 107.21 ಕೋಟಿ ರೂ., 2018-19ರಲ್ಲಿ 116.96 ಕೋಟಿ ರೂ., 2019-20ರಲ್ಲಿ 121.42 ಕೋಟಿ ರೂ., 2020-21ರಲ್ಲಿ 119.03 ಕೋಟಿ ರೂ., 2021-22ರಲ್ಲಿ 162.43 ಕೋಟಿ ರೂ., 2022-23ರ ಜೂನ್ ಅಂತ್ಯಕ್ಕೆ 104.44 ಕೋಟಿ ರೂ. ಆಸ್ತಿ ತೆರಿಗೆ ವಸೂಲಾತಿಯಾಗಿದೆ.

ಉದ್ದಿಮೆ ಪರವಾನಗಿ: 2017-18ನೇ ಸಾಲಿನಲ್ಲಿ 3.10 ಕೋಟಿ ರೂ., 2018-19ರಲ್ಲಿ 3.59 ಕೋಟಿ ರೂ. 2019-20ರಲ್ಲಿ 3.68 ಕೋಟಿ ರೂ., 2020-21ರಲ್ಲಿ 4.96 ಕೋಟಿ ರೂ., 2021-22ರಲ್ಲಿ 7.83 ಕೋಟಿ ರೂ., 2022-23ರ ಜೂನ್ ಅಂತ್ಯಕ್ಕೆ 1.66 ಕೋಟಿ ರೂ. ಉದ್ದಿಮೆ ಪರವಾನಗಿ ಶುಲ್ಕ ಸಂಗ್ರಹಿಸಲಾಗಿದೆ.

ನೀರಿನ ಶುಲ್ಕ : 2017-18ರಲ್ಲಿ 45.74 ಕೋಟಿ ರೂ., 2018-19ರಲ್ಲಿ 45.63 ಕೋಟಿ ರೂ., 2019-20ರಲ್ಲಿ 48.73 ಕೋಟಿ ರೂ. 2020-21 ರಲ್ಲಿ 51.96 ಕೋಟಿ ರೂ., 2021-22ರಲ್ಲಿ 66.65 ಕೋಟಿ ರೂ., 2022-23ರ ಜೂನ್ ಅಂತ್ಯಕ್ಕೆ 17.16 ಕೊಟಿ ರೂ. ಸಂಗ್ರಹವಾಗಿದೆ. ವಿವಿಧ ತೆರಿಗೆ ಮೂಲಗಳಿಂದ ನಗರ ಪಾಲಿಕೆ 2017-18ರಲ್ಲಿ ಒಟ್ಟು 156.06 ಕೋಟಿ ರೂ., 2018-19ರಲ್ಲಿ 166.20 ಕೋಟಿ ರೂ., 2019-20ರಲ್ಲಿ 173.84 ಕೋಟಿ ರೂ., 2020-21ರಲ್ಲಿ 175.96 ಕೋಟಿ ರೂ., 2021-22ರಲ್ಲಿ 236.92 ಕೋಟಿ ರೂ., 2022-23ರ ಜೂನ್ ಅಂತ್ಯಕ್ಕೆ 123.31 ಕೋಟಿ ರೂ. ತೆರಿಗೆ ವಸೂಲಾತಿಯಾಗಿದೆ.

ನಗರ ಅಭಿವೃದ್ಧಿ ಹೊಂದಲು ತೆರಿಗೆ ವಸೂಲಾತಿ ಪ್ರಮಾಣ ಉತ್ತಮವಾಗಿರಬೇಕು. ಆದರೆ, ನಗರ ಪಾಲಿಕೆ ಹಲವಾರು ವರ್ಷಗಳಿಂದ ತೆರಿಗೆ ವಸೂಲಾತಿಯ ಕಡೆಗೆ ಹೆಚ್ಚಿನ ಆಸಕ್ತಿ ತೋರದೆ ಕೇವಲ ಸರ್ಕಾರದ ಅನುದಾನವನ್ನೇ ನೆಚ್ಚಿಕೊಂಡು ಕುಳಿತಿತ್ತು. ನರ್ಮ್ ಯೋಜನೆಯ ನಂತರ ನಗರಕ್ಕೆ ದೊಡ್ಡ ಪ್ರಮಾಣದಲ್ಲಿ ಅನುದಾನ ಹರಿದು ಬರಲಿಲ್ಲ. ಹೀಗಾಗಿ ನಗರ ಪಾಲಿಕೆ ಗುತ್ತಿಗೆದಾರರ ಬಿಲ್ ಪಾವತಿಗೂ ಸಮಸ್ಯೆ ಎದುರಿಸುವ ಪರಿಸ್ಥಿತಿ ನಿರ್ಮಾಣವಾಯಿತು. ನಂತರ ಎಚ್ಚೆತ್ತುಕೊಂಡ ಪಾಲಿಕೆ ಅಧಿಕಾರಿಗಳು ತೆರಿಗೆ ವಸೂಲಾತಿಗೆ ಕಟ್ಟುನಿಟ್ಟಿನ ಕ್ರಮ ಗಳನ್ನು ಕೈಗೊಳ್ಳಲು ಪ್ರಾರಂಭಿಸಿದರು. ಕಳೆದ ಎರಡು ವರ್ಷಗಳಲ್ಲಿ ಕೋವಿಡ್‌ನಿಂದ ನಗರ ತತ್ತರಿಸಿದರೂ ತೆರಿಗೆ ವಸೂಲಾತಿಯಲ್ಲಿ ನಗರ ಪಾಲಿಕೆ ಗಮನಾರ್ಹ ಸಾಧನೆ ತೋರಿದೆ. ಕೋವಿಡ್ ಸಂದರ್ಭದಲ್ಲಿ ತೆರಿಗೆ ಪಾವತಿಗೆ ಸಾಕಷ್ಟು ಕಾಲಾವಕಾಶಗಳನ್ನು ನೀಡಿ ತೆರಿಗೆ ಪಾವತಿಗೆ ಉತ್ತೇಜನ ನೀಡಿದ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ತೆರಿಗೆ ಪಾವತಿಸಿದ್ದಾರೆ.

ವಿಶೇಷವಾಗಿ ನೀರಿನ ಶುಲ್ಕ ವಸೂಲಾತಿ ಮಾಡುವುದು ಪಾಲಿಕೆಯ ಮುಂದಿರುವ ಬಹುದೊಡ್ಡ ಸವಾಲಾಗಿದೆ. ಒಟ್ಟು 220 ಕೋಟಿ ರೂ. ನೀರಿನ ಶುಲ್ಕ ವಸೂಲಾತಿಗೆ ಬಾಕಿ ಇದೆ. ನೀರಿನ ಶುಲ್ಕ ನಿಗದಿತ ಸಮಯದೊಳಗೆ ಪಾವತಿ ಮಾಡದೆ ಇರುವವರ ಮನೆಗಳ ನೀರಿನ ಸಂಪರ್ಕಗಳನ್ನು ಕಡಿತಗೊಳಿಸುವ ಕಾರ್ಯವನ್ನು ಪಾಲಿಕೆ ಮಾಡುತ್ತಿದ್ದು, ಇದರ ಪರಿಣಾಮ ನಗರದಲ್ಲಿ ಇತ್ತೀಚೆಗೆ ನೀರಿನ ಬಿಲ್ ಪಾವತಿ ಪ್ರಮಾಣ ಹೆಚ್ಚಾಗಿದೆ. ಅಲ್ಲದೆ, ಹಲವಾರು ಮನೆಗಳಲ್ಲಿ ನೀರಿನ ಮೀಟರ್ ‘ನಾಟ್ ವರ್ಕಿಂಗ್’ ಸ್ಥಿತಿಯಲ್ಲಿ ಇದೆ. ಮೂರು ತಿಂಗಳು ನಿರಂತರವಾಗಿ ನಾಟ್ ವರ್ಕಿಂಗ್ ಸ್ಥಿತಿಯಲ್ಲಿ ಮೀಟರ್ ಇದ್ದರೆ ಅಂತಹ ಮನೆಗೆ ನೀರಿನ ಶುಲ್ಕವನ್ನು ಎರಡು ಪಟ್ಟು ವಿಧಿಸಲು ಪ್ರಾರಂಭಿಸ ಲಾಗಿದೆ. ಈ ಭಯದಿಂದ ಕೂಡ ಜನರು ಸಾಕಲದಲ್ಲಿ ನೀರಿನ ಬಿಲ್ ಪಾವತಿಸುತ್ತಿದ್ದಾರೆ.

ತೆರಿಗೆ ವಸೂಲಾತಿ ಒಂದೆಡೆಯಾದರೆ ಮತ್ತೊಂದೆಡೆ ಹಲವಾರು ವರ್ಷಗಳಿಂದ ನೀರಿನ ಶುಲ್ಕ ಹಾಗೂ ಪಾಲಿಕೆಯ ವಿವಿಧ ಮಳಿಗೆಗಳ ಬಾಡಿಗೆ ದರವನ್ನು ಪರಿಷ್ಕರಣೆ ಮಾಡಿಲ್ಲ. ಇದೀಗ ದರ ಪರಿಷ್ಕರಣೆಗೂ ಪಾಲಿಕೆ ಸಿದ್ಧತೆ ಕೈಗೊಳ್ಳುತ್ತಿದೆ. ದರ ಪರಿಷ್ಕರಣೆ ಜಾರಿಗೆ ಬಂದರೆ ಪಾಲಿಕೆಯ ಆದಾಯ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆ ಇದೆ.

ನಗರ ಪಾಲಿಕೆಯಲ್ಲಿ ತೆರಿಗೆಯನ್ನು ಪರಿಣಾಮಕಾರಿಯಾಗಿ ವಸೂಲಾತಿ ಮಾಡಲು ಸರ್ಕಾರ ನಿರ್ದೇಶನ ನೀಡಿದ್ದು, ಇದಕ್ಕೆ ಪೂರಕ ವಾಗಿ ತೆರಿಗೆ ವಸೂಲಾತಿ ಚುರುಕುಗೊಳಿಸಲಾಗಿದೆ. ಈ ಹಿಂದಿನ ವರ್ಷಗಳಿಗೆ ಹೋಲಿಕೆ ಮಾಡಿದರೆ ಕಳೆದ ಬಾರಿ ತೆರಿಗೆ ಸಂಗ್ರಹದಲ್ಲಿ ಉತ್ತಮ ಸಾಧನೆ ತೋರಲಾಗಿದೆ. ನೀರಿನ ಶುಲ್ಕ ಪಾವತಿಸದವರ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುತ್ತಿದೆ. ಈ ರೀತಿಯ ಕಟ್ಟುನಿಟ್ಟಿನ ಕ್ರಮದ ನಂತರ ತೆರಿಗೆ ವಸೂಲಾತಿ ಚುರುಕುಗೊಂಡಿದೆ.

ಲಕ್ಷ್ಮೀಕಾಂತ್ ರೆಡ್ಡಿ, ನಗರ ಪಾಲಿಕೆ ಆಯುಕ್ತ