ಮೈಸೂರು: ನಗರ ಪಾಲಿಕೆಯು ತೆರಿಗೆ ವಸೂಲಾತಿಗೆ ಹೆಚ್ಚಿನ ಆದ್ಯತೆ ನೀಡುವ ಜತೆಗೆ ಹೊಸ ಆದಾಯ ಮೂಲಗಳನ್ನು ಕಂಡುಕೊಂಡು ಹೆಚ್ಚಿನ ಸಂಪನ್ಮೂಲಗಳನ್ನು ಕ್ರೋಢೀಕರಿಸಬೇಕು. ಆ ಮೂಲಕ ನಗರದ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಜಾರಿಗೆ ತರಬೇಕು ಎಂದು ಮಾಜಿ ಮೇಯರ್, ಉಪ ಮೇಯರ್‌ಗಳು ಹಾಗೂ ಸಂಘ ಸಂಸ್ಥೆಗಳ ಮುಖಂಡರು ಪಾಲಿಕೆಗೆ ಸಲಹೆ ನೀಡಿದ್ದಾರೆ.
ನಗರ ಪಾಲಿಕೆ ಬಜೆಟ್ ಕುರಿತು ಮಾಜಿ ಮೇಯರ್, ಉಪ ಮೇಯರ್‌ಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರೊಂದಿಗೆ ಪಾಲಿಕೆಯ ಜಯಚಾಮರಾಜೇಂದ್ರ ಒಡೆಯರ್ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಹಲವು ಗಣ್ಯರು ಹಲವು ಉಪಯುಕ್ತ ಸಲಹೆಗಳನ್ನು ನೀಡಿದರು.
ಮಾಜಿ ಮೇಯರ್ ಆರ್. ಲಿಂಗಪ್ಪ ಮಾತನಾಡಿ, ನಗರ ಪಾಲಿಕೆಯ ಮಾರುಕಟ್ಟೆಗಳಿಂದ ಪಾಲಿಕೆಗೆ ಅತ್ಯಲ್ಪ ಪ್ರಮಾಣದಲ್ಲಿ ಬಾಡಿಗೆ ಬರುತ್ತಿದೆ. ಪಾಲಿಕೆಯಿಂದ ಕಡಿಮೆ ಬಾಡಿಗೆಗೆ ಮಳಿಗೆಯನ್ನು ಪಡೆದವರು ಆ ಮಳಿಗೆಯನ್ನು ಬೇರೆಯವರಿಗೆ ನೀಡಿ ವಾರ್ಷಿಕವಾಗಿ ಲಕ್ಷಾಂತರ ರೂ. ಸಂಪಾದನೆ ಮಾಡುತ್ತಿದ್ದಾರೆ. ಹಾಗಾಗಿ ಮಳಿಗೆಯ ಬಾಡಿಗೆ ಹೆಚ್ಚಿಸಿ ಪ್ರಸ್ತುತ ವ್ಯಾಪಾರ ಮಾಡುತ್ತಿರುವ ವರ್ತರಿಗೆ ನೇರವಾಗಿ ನೀಡಬೇಕು ಎಂದು ಸಲಹೆ ನೀಡಿದರು.
ಮೈಸೂರು ಗ್ರಾಹಕರ ಪರಿಷತ್ ಅಧ್ಯಕ್ಷ ಭಾಮಿಶೆಣೈ ಮಾತನಾಡಿ, ನಗರ ಪಾಲಿಕೆಯು ಸರಿಯಾಗಿ ಆಸ್ತಿ ತೆರಿಗೆಯನ್ನು ಸಂಗ್ರಹಿಸಿದರೆ ನಗರದಲ್ಲಿ ವಾರ್ಷಿಕವಾಗಿ 400 ರಿಂದ 500 ಕೋಟಿ ರೂ.ಗಳನ್ನು ಸಂಗ್ರಹಿಸಬಹುದು. ಆದರೆ, ನಗರದಲ್ಲಿ ಆಸ್ತಿ ತೆರಿಗೆ ಸರಿಯಾಗಿ ವಸೂಲಾತಿ ಆಗುತ್ತಿಲ್ಲ. ಈ ಬಗ್ಗೆ ಗಮನ ಹರಿಸಿದರೆ ನಗರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಸಭೆಯಲ್ಲಿ ನಗರ ಪಾಲಿಕೆ ಆಯುಕ್ತ ಆಸಾದ್ ಉರ್ ರೆಹಮಾನ್, ಹೆಚ್ಚುವರಿ ಆಯುಕ್ತೆ ಕುಸುಮ ಕುಮಾರಿ, ಉಪ ಆಯುಕ್ತ (ಕಂದಾಯ) ಸೋಮಶೇಖರ್, ಉಪ ಆಯುಕ್ತೆ ಸಿಂಧು (ಅಭಿವೃದ್ಧಿ), ಮಾಜಿ ಮೇಯರ್‌ಗಳಾದ ಬಿ.ಎಲ್. ಭೈರಪ್ಪ, ಆರ್. ಲಿಂಗಪ್ಪ, ಅಯೂಬ್ ಖಾನ್, ವಿಶ್ವನಾಥ್, ಶ್ರೀಕಂಠಯ್ಯ, ಪುಷ್ಪಲತಾ ಜಗನ್ನಾಥ್, ಶಿವಕುಮಾರ್ ಹಾಗೂ ಇತರರು ಇದ್ದರು.