ಜಿಲ್ಲೆ

ಮೈಸೂರು ನಗರ ಪಾಲಿಕೆ : ಜನಪ್ರತಿನಿಧಿಗಳಿಲ್ಲದೆ ಕಳೆಯಿತು ವರ್ಷ..!

ಸದೇಶ್ ಕಾರ್ಮಾಡ್ ಮೈಸೂರು

ನಗರ ಪಾಲಿಕೆಯ ಅಧಿಕಾರಾವಧಿ ಮುಕ್ತಾಯಗೊಂಡು ಒಂದು ವರ್ಷ ಪೂರ್ಣಗೊಂಡಿದ್ದು, ನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳು ಇಲ್ಲದೆ ಜನರ ಸಮಸ್ಯೆಗಳಿಗೆ ಸ್ಪಂದಿಸುವವರು ಇಲ್ಲದಂತಾಗಿದೆ. ಹೀಗಾಗಿ ಪಾಲಿಕೆಗೆ ಚುನಾವಣೆ ಎಂದು ನಡೆಯಲಿದೆ ಎಂಬ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದೆ.

ಕಳೆದ ಕೌನ್ಸಿಲ್‌ನ ಅಧಿಕಾರಾವಧಿ 16 ನವೆಂಬರ್ 2023ಕ್ಕೆ ಮುಕ್ತಾಯಗೊಂಡಿತ್ತು. ನಗರ ಪಾಲಿಕೆಯ 65 ವಾರ್ಡ್‌ಗಳಿಗೆ 31 ಆಗಸ್ಟ್ 2018ರಂದು ಚುನಾವಣೆ ನಡೆದಿತ್ತು. ನವೆಂಬರ್ 17 ರಂದು ಆ ಅವಧಿಯ ಮೊದಲ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಿತು. ಅದೇ ದಿನ ಪಾಲಿಕೆ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಪಾಲಿಕೆ ಅಧಿಕಾರಾವಧಿ 16 ನವೆಂಬರ್ 2023ಕ್ಕೆ ಮುಕ್ತಾಯಗೊಂಡಿತ್ತು.

ಅಧಿಕಾರಾವಧಿ ಮುಕ್ತಾಯಗೊಂಡ ನಂತರ ನಗರ ಪಾಲಿಕೆಗೆ ಚುನಾವಣೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಸಕ್ತಿ ತೋರಿ ದ್ದರು. ಬೆಂಗಳೂರಿನಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರುಗಳು ಸಭೆ ಕರೆದು ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು. ಅಲ್ಲದೆ, ನಗರದಲ್ಲಿ ನಗರ ಪಾಲಿಕೆ ಕಾಂಗ್ರೆಸ್ ಸದಸ್ಯರಿಂದಲೂ ಮಾಹಿತಿ ಕಲೆ ಹಾಕಿದ್ದರು. ಆ ನಂತರ ಲೋಕಸಭೆ, ವಿಧಾನ ಪರಿಷತ್ ಚುನಾವಣೆ ತಯಾರಿ ಹಿನ್ನೆಲೆಯಲ್ಲಿ ಪಾಲಿಕೆ ಚುನಾವಣೆ ಕಡೆಗೆ ಸರ್ಕಾರ ಆಸಕ್ತಿ ತೋರಲಿಲ್ಲ. ಅಲ್ಲದೆ, ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಏರ್ಪಟ್ಟಿರುವುದು ಸಹ ಚುನಾವಣೆ ನಡೆಸಲು ಕಾಂಗ್ರೆಸ್ ಸರ್ಕಾರ ಹಿಂದೇಟು ಹಾಕಲು ಒಂದು ಕಾರಣ ಎಂಬ ಮಾತುಗಳು ರಾಜಕೀಯ ವಲದಯಲ್ಲಿ ಕೇಳಿ ಬರುತ್ತಿದೆ.

ಅಧಿಕಾರಾವಧಿ ಮುಕ್ತಾಯಗೊಂಡಿರುವ ಮೈಸೂರು, ತುಮಕೂರು ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ಸದ್ಯದಲ್ಲಿಯೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಆಗಸ್ಟ್‌ನಲ್ಲಿ ರಾಜ್ಯ ಮುಕ್ತ ಚುನಾವಣಾ ಆಯುಕ್ತ ಗದಿಗೆಪ್ಪ ಸಣ್ಣಬಸಪ್ಪ ಸಂಗ್ರೇಶಿ ಹೇಳಿಕೆ ನೀಡಿದ್ದರು. ಆದರೆ, ಸದ್ಯಕ್ಕೆ ಚುನಾವಣೆಯ ಯಾವುದೇ ಮುನ್ಸೂಚನೆ ಕಂಡು ಬರುತ್ತಿಲ್ಲ.

ಮೈತ್ರಿ ನಡೆಯುವುದೇ?: ಕಳೆದ ಐದು ವರ್ಷಗಳ ಅವಧಿಯಲ್ಲಿ ನಗರ ಪಾಲಿಕೆಯು ಹಲವು ರಾಜಕೀಯ ವಿದ್ಯಮಾನಗಳಿಗೆ ಸಾಕ್ಷಿಯಾಯಿತು. ಕಳೆದ ಬಾರಿ ಎಲ್ಲ ಪ್ರಮುಖ ರಾಜಕೀಯ ಪಕ್ಷಗಳು (ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್) ಅಧಿಕಾರ ಅನುಭವಿಸಿದ್ದು ವಿಶೇಷವಾಗಿತ್ತು. ಕಳೆದ 5 ವರ್ಷಗಳಲ್ಲಿ ರಾಜ್ಯ ಹಾಗೂ ಜಿಲ್ಲೆಯ ರಾಜಕೀಯ ಚಿತ್ರಣ ಮತ್ತಷ್ಟು ಬದಲಾಗಿದೆ. 2018ರಲ್ಲಿ ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಸರ್ಕಾ ಅಸ್ತಿತ್ವದಲ್ಲಿ ಇತ್ತು. ಹೀಗಾಗಿ ಪಾಲಿಕೆ ಚುನಾವಣೆ ನಂತರ ಮೇಯರ್ ಚುನಾವಣೆ ಸಂದರ್ಭ ಕಾಂಗ್ರೆಸ್-ಜೆಡಿಎಸ್ ನಡುವೆ ಮೈತ್ರಿ ಏರ್ಪಟ್ಟಿತ್ತು. ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಪಥನವಾದ ನಂತರ ಜೆಡಿಎಸ್‌ನ ಪರೋಕ್ಷ ಬೆಂಬಲದೊಂದಿಗೆ ಪಾಲಿಕೆ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಏರಿತ್ತು. ಈ ಬಾರಿಯ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಎನ್‌ಡಿಎ ಮೈತ್ರಿಕೂಟ ಸೇರಿಕೊಂಡಿತು. ಅಲ್ಲದೆ, ಇದೀಗ ನಡೆದ ವಿಧಾನಸಭೆ ಉಪ ಚುನಾವಣೆಯಲ್ಲೂ ಮೈತ್ರಿ ಮುಂದುವರೆದಿದೆ. ಹಾಗಾಗಿ ಈ ಮೈತ್ರಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಮುಂದುವರೆಯುವ ಸಾಧ್ಯತೆ ಇದೆ.

ಕಳೆದ ಬಾರಿ 4 ಅವಧಿಯಲ್ಲಿ 6 ಮೇಯರ್..!

ನಗರ ಪಾಲಿಕೆಯಲ್ಲಿ ಪ್ರತಿ ವರ್ಷ ಒಬ್ಬರು ಮೇಯರ್ ಹಾಗೂ ಉಪ ಮೇಯರ್ ಆಯ್ಕೆಗೊಳ್ಳಬೇಕು. ಕಳೆದ ಕೌನ್ಸಿಲ್‌ನಲ್ಲಿ 5 ವರ್ಷಗಳ ಅವಧಿಗೆ 5 ಮೇಯರ್ ಹಾಗೂ 5 ಉಪ ಮೇಯರ್‌ಗಳು ಆಯ್ಕೆಗೊಳ್ಳಬೇಕಾಗಿತ್ತು. ಆದರೆ, ಹಲವು ರಾಜಕೀಯ ಕಾರಣಗಳಿಗೊಸ್ಕರ ಕಳೆದ ಬಾರಿ ಕೇವಲ 4 ಅವಧಿಯಲ್ಲಿಯೇ 6 ಮೇಯರ್‌ಗಳು ಹಾಗೂ 5 ಉಪ ಮೇಯರ್‌ಗಳನ್ನು ನಗರ ಪಾಲಿಕೆ ಕಂಡಿತು. 4ನೇ ಅವಧಿಯ ಮೇಯರ್ ಸ್ಥಾನಕ್ಕೆ ಸಕಾಲದಲ್ಲಿ ಚುನಾವಣೆ ನಡೆಸದ ಹಿನ್ನೆಲೆಯಲ್ಲಿ 3ನೇ ಅವಧಿ ವಿಸ್ತರಣೆಗೊಂಡು ಮೂವರು ಮೇಯರ್‌ಗಳು ಅಧಿಕಾರ ಅನುಭವಿಸಿದರು. 3ನೇ ಅವಧಿ ಒಂದು ವರ್ಷಕ್ಕೆ ಮುಕ್ತಾಯಗೊಳ್ಳಬೇಕಾಗಿತ್ತು. ಆದರೆ, ಈ ಅವಧಿಯಲ್ಲಿ ವಿವಿಧ ಕಾರಣಗಳಿಗೋಸ್ಕರ ಮೂವರು ಮೇಯರ್‌ಗಳು (ರುಕ್ಮಿಣಿ ಮಾದೇಗೌಡ, ಅನ್ವರ್ ಬೇಗ್, ಸುನಂದ ಪಾಲನೇತ್ರ) ಒಟ್ಟಾರೆ 1 ವರ್ಷ 6 ತಿಂಗಳು ಅಧಿಕಾರ ನಡೆಸಿದರು. ಅಲ್ಲದೆ 2 ಹಾಗೂ 3ನೇ ಅವಧಿಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಡೆಸಲು ಕ್ರಮವಾಗಿ 2 ಮತ್ತು 1 ತಿಂಗಳು ವಿಳಂಬವಾಯಿತು. ಹೀಗಾಗಿ 5ನೇ ಅವಧಿಯ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಸಿದ್ದರೆ ಅವರಿಗೆ ಕೇವಲ 2 ತಿಂಗಳು ಮಾತ್ರ ಅಧಿಕಾರಾವಧಿ ದೊರೆಯುತಿತ್ತು. ಕೇವಲ ಎರಡು ತಿಂಗಳಿಗೊಸ್ಕರ ಚುನಾವಣೆ ನಡೆಸುವುದು ಸೂಕ್ತ ಅಲ್ಲ ಎಂದು ಸರ್ಕಾರ ಚುನಾವಣೆ ನಡೆಸಲು ಆಸಕ್ತಿ ತೋರಲಿಲ್ಲ. ಹೀಗಾಗಿ ಕಳೆದ ಅವಧಿಯಲ್ಲಿ 4 ಅವಧಿಯಲ್ಲಿಯೇ 6 ಮೇಯರ್‌ಗಳನ್ನು ಕಂಡಿತ್ತು.

ನಗರ ಪಾಲಿಕೆಯಲ್ಲಿ ಜನಪ್ರತಿನಿಧಿಗಳು ಇಲ್ಲದೆ ನಗರದಲ್ಲಿ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಾಣುತ್ತಿಲ್ಲ. ವಾರ್ಡ್‌ಗಳಲ್ಲಿ ಜನರ ಸಮಸ್ಯೆಗಳನ್ನು ಆಲಿಸಲು ಜನಪ್ರತಿನಿಧಿಗಳು ಇಲ್ಲದ ಹಿನ್ನೆಲೆಯಲ್ಲಿ ಜನರು ಸಮಸ್ಯೆ ಎದುರಿಸುತ್ತಿದ್ದಾರೆ. ಪಾಲಿಕೆ ಅಧಿಕಾರ ಮುಕ್ತಾಯಗೊಂಡ ತಕ್ಷಣ ಚುನಾವಣೆ ನಡೆಸಬೇಕಾಗಿತ್ತು. ಆದರೆ, ರಾಜಕೀಯ ಕಾರಣಕೋಸ್ಕರ ಚುನಾವಣೆ ನಡೆಸಲು ಸರ್ಕಾರ ಹಿಂದೇಟು ಹಾಕುತ್ತಿದೆ. ಇನ್ನಾದರೂ ಸರ್ಕಾರ ಕೂಡಲೇ ಚುನಾವಣೆ ನಡೆಸಲು ಮನಸ್ಸು ಮಾಡಬೇಕು.

ಶಿವಕುಮಾರ್, ಮಾಜಿ ಮೇಯರ್