ಜಿಲ್ಲೆ

ಮೈಸೂರು ಚಲೋ ಪಾದಯಾತ್ರೆ ಯಶಸ್ವಿ; ನಿರೀಕ್ಷೆಗೂ ಮೀರಿದ ಜನ ಬೆಂಬಲ

ಅವಿನಾಶ್ ಜೈನಹಳ್ಳಿ


ಮೈಸೂರು:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಹಾಗೂ ವಾಲ್ಮೀಕಿ ನಿಗಮ ಹಗರಣದ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕೈಗೊಂಡಿದ್ದ ‘ಮೈಸೂರು ಚಲೋ’ ಪಾದಯಾತ್ರೆ ಶನಿವಾರ ಸಮಾಪ್ತಿಗೊಂಡಿತು.
ಸಮಾವೇಶಕ್ಕೂ ಮುನ್ನ ಸಿಎಂ ತವರು ಮೈಸೂರಿನಲ್ಲೂ ಪಾದಯಾತ್ರೆ ನಡೆಸಿದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದರು. ಮೈಸೂರಿನ ಪಾದಯಾತ್ರೆಯಲ್ಲಿ ನಿರೀಕ್ಷೆಗೂ ಮೀರಿದ ಜನ ಬೆಂಬಲ ವ್ತಕ್ಯವಾಯಿತು.

ಬೆಂಗಳೂರಿನಲ್ಲಿ ಆರಂಭಗೊಂಡ ಪಾದಯಾತ್ರೆಯಲ್ಲಿ ಎಂಟು ದಿನಗಳ ಕಾಲ ಮಳೆ, ಬಿಸಿಲು, ಗಾಳಿ ಎನ್ನದೇ ಹೆಜ್ಜೆ ಹಾಕಿದ ಮೈತ್ರಿ ಪಕ್ಷಗಳ ನಾಯಕರು ಅಂತಿಮ ದಿನ ಮೈಸೂರು ನಗರದಲ್ಲಿ ಪಾದಯಾತ್ರೆ ನಡೆಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಚಾರದ ವಿರುದ್ಧ ರಣಕಹಳೆ ಮೊಳಗಿಸಿದರು.

ಶನಿವಾರ ಬೆಳಗ್ಗೆ 9 ಗಂಟೆಯಿಂದಲೇ ನಾರಾಯಣಶಾಸ್ತ್ರಿ ರಸ್ತೆಯ ರಾಘವೇಂದ್ರ ಸ್ವಾಮಿ ಮಠದ ಎದುರು ಮೈತ್ರಿ ಪಕ್ಷದ ಸಾವಿರಾರು ಕಾರ್ಯಕರ್ತರು, ಮುಖಂಡರು ತಂಡೋಪ ತಂಡವಾಗಿ ಜಮಾಯಿಸತೊಡಗಿದರು. ಕೇಸರಿ ಮತ್ತು ಹಸಿರು ಶಾಲು ಧರಿಸುವುದರೊಂದಿಗೆ ಎರಡು ಪಕ್ಷಗಳ ಬಾವುಟಗಳನ್ನು ಹಾರಿಸುತ್ತಾ ತಮ್ಮ ಪಕ್ಷದ ನಾಯಕರ ಪರವಾಗಿ ಕಾರ್ಯಕರ್ತರು ಜಯಘೋಷ ಹಾಕಿದರು.
ಸುಮಾರು 12 ಗಂಟೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಜಂಟಿಯಾಗಿ ದೇವಸ್ಥಾನಕ್ಕೆ ಆಗಮಿಸಿ ರಾಘವೇಂದ್ರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪಾದಯಾತ್ರೆಗೆ ಚಾಲನೆ ನೀಡಿದರು.

ಎರಡು ಪಕ್ಷಗಳ ನಾಯಕರಾದ ಡಾ.ಅಶ್ವತ್ಥನಾರಾಯಣ್, ಸುರೇಶ್‌ಬಾಬು, ಸಿ.ಟಿ.ರವಿ, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಎಸ್.ಆರ್.ವಿಶ್ವನಾಥ್, ಬೈರತಿ ಬಸವರಾಜು ಸಾಥ್ ನೀಡಿದರು. ಪಾದಯಾತ್ರೆಯಲ್ಲಿ ಮಾಜಿ ಸಚಿವರಾದ ಬಿ.ಶ್ರೀರಾಮುಲು, ಜನಾರ್ದನ ರೆಡ್ಡಿ, ರೇಣುಕಾಚಾರ್ಯ, ನೆ.ಲ.ನರೇಂದ್ರಬಾಬು, ಮಾಳವಿಕಾ ಅವಿನಾಶ್, ಶಾಸಕರಾದ ಟಿ.ಎಸ್.ಶ್ರೀವತ್ಸ, ಜಿ.ಡಿ. ಹರೀಶ್‌ಗೌಡ, ಸಿ.ಎನ್.ಮಂಜೇಗೌಡ, ಮಾಜಿ ಶಾಸಕರಾದ ಎಲ್. ನಾಗೇಂದ್ರ, ಅನ್ನದಾನಿ, ಅಶ್ವಿನ್‌ಕುಮಾರ್, ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತ್‌ಕುಮಾರ್ ಗೌಡ, ಅರುಣ್‌ಕುಮಾರ್ ಗೌಡ, ಜೆಡಿಎಸ್ ನಗರಾಧ್ಯಕ್ಷ ಕೆ.ಟಿ.ಚೆಲುವೇಗೌಡ, ಮಹಿಳಾ ಘಟಕದ ಅಧ್ಯಕ್ಷೇ ಪ್ರೇಮಾ ಶಂಕರೇಗೌಡ ಇದ್ದರು.

ಪಾದಯಾತ್ರೆಗೂ ಮುನ್ನ ಬಿ.ವೈ.ವಿಜಯೇಂದ್ರ ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಕೆ.ಆರ್. ವೃತ್ತದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.