ಜಿಲ್ಲೆ

ಮೈಸೂರು ಜಿಲ್ಲೆಗೆ ಒಲಿಯಲಿದೆಯೇ ಮಂತ್ರಿಗಿರಿ?

reportermys


*ಮೂರು ವರ್ಷಗಳಿಂದ ಸಚಿವ ಸ್ಥಾನ ನೀಡದೆ ಮೈಸೂರು ನಿರ್ಲಕ್ಷೃ


ಅವಿನಾಶ್ ಜೈನಹಳ್ಳಿ

ಮೈಸೂರು: ವಿಧಾನಸಭೆ ಚುನಾವಣೆಗೆ ಒಂದು ವರ್ಷ ಮಾತ್ರ ಬಾಕಿ ಇದೆ. ಈ ಮಧ್ಯೆ, ರಾಜ್ಯ ಸರ್ಕಾರ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಮುಂದಾಗಿದ್ದು, ಜಿಲ್ಲೆಯ ಬಿಜೆಪಿ ಶಾಸಕರಲ್ಲಿ ಆಸೆ ಗರಿಗೆದರಿದೆ.


ಜಿಲ್ಲೆಯಲ್ಲಿ ಬಿಜೆಪಿಯ ಮೂವರು ಶಾಸಕರು ಮತ್ತು ಒಬ್ಬರು ವಿಧಾನ ಪರಿಷತ್ ಸದಸ್ಯರಿದ್ದರೂ ಈ ಪೈಕಿ ಯಾರಿಗೂ ಮಂತ್ರಿಗಿರಿ ನೀಡದೆ ನಿರ್ಲಕ್ಷೃ ಮಾಡಲಾಗಿದೆ. ಈಗಲಾದರೂ ಜಿಲ್ಲೆಗೆ ಮಂತ್ರಿಗಿರಿ ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.


ಹಿಂದಿನ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಜಿಲ್ಲೆಯವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರೂ ಡಾ.ಎಚ್.ಸಿ.ಮಹದೇವಪ್ಪ, ವಿ.ಶ್ರೀನಿವಾಸಪ್ರಸಾದ್ ಹಾಗೂ ತನ್ವೀರ್ ಸೇಠ್ ಮಂತ್ರಿಗಳಾಗಿದ್ದರು. ನಂತರ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲೂ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಸಚಿವರಾಗಿದ್ದರು. ಆದರೆ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಹೊರ ಜಿಲ್ಲೆಯವರನ್ನು ಜಿಲ್ಲಾ ಮಂತ್ರಿಯನ್ನಾಗಿ ನೇಮಕ ಮಾಡಲಾಗುತ್ತಿದೆಯೇ ಹೊರತು ಜಿಲ್ಲೆಗೆ ಮಂತ್ರಿ ಸ್ಥಾನ ದೊರೆತಿಲ್ಲ.


ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾದಾಗಲೂ ಜಿಲ್ಲೆಯ ಶಾಸಕರಿಗೆ ಸಚಿವ ಸ್ಥಾನ ನೀಡಿರಲಿಲ್ಲ. ಬಳಿಕ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ಜಿಲ್ಲೆಯ ಒಬ್ಬರಿಗೆ ಸಚಿವ ಸ್ಥಾನ ದೊರೆಯಲಿದೆ ಎಂದು ಹೇಳಲಾಗಿತ್ತು. ಆದರೆ, ಅಂತಿಮವಾಗಿ ಅದು ಸಾಧ್ಯವಾಗಲಿಲ್ಲ. ಈಗ ರಾಜ್ಯದಲ್ಲಿ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಚರ್ಚೆ ನಡೆಯುತ್ತಿದೆ. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ ಏಪ್ರಿಲ್ ಕಡೆಯ ಅಥವಾ ಮೇ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಆಗಲಿದೆ. ಹಾಗಾಗಿ, ಜಿಲ್ಲೆಗೆ ಈ ಬಾರಿಯಾದರೂ ಸಚಿವ ಸ್ಥಾನ ದೊರೆಯಲಿದೆಯೇ, ದೊರೆತರೆ ಯಾರು ಸಚಿವರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

ಮೂವರು ಬಿಜೆಪಿ ಶಾಸಕರು:
ಜಿಲ್ಲೆಯ ಒಟ್ಟು 11 ಶಾಸಕರ ಪೈಕಿ ಎಸ್.ಎ.ರಾಮದಾಸ್ (ಕೃಷ್ಣರಾಜ), ಎಲ್.ನಾಗೇಂದ್ರ (ಚಾಮರಾಜ) ಮತ್ತು ಬಿ.ಹರ್ಷವರ್ಧನ್ (ನಂಜನಗೂಡು) ಬಿಜೆಪಿ ಶಾಸಕರು. ಅಂತೆಯೆ, ಎಚ್.ವಿಶ್ವನಾಥ್ ಆಡಳಿತ ಪಕ್ಷವನ್ನು ಪ್ರತಿನಿಧಿಸುವ ವಿಧಾನ ಪರಿಷತ್ ಸದಸ್ಯರು. ಈ ಪೈಕಿ ಎಲ್.ನಾಗೇಂದ್ರ, ಬಿ.ಹರ್ಷವರ್ಧನ್ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದಾರೆ. ನಾಲ್ಕು ಬಾರಿ ಶಾಸಕರಾಗಿರುವ ಎಸ್.ಎ.ರಾಮದಾಸ್ ಈ ಹಿಂದೆ ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಕಾರ್ಯನಿರ್ವಹಿಸಿ ಅನುಭವ ಹೊಂದಿದ್ದಾರೆ. ಎಚ್.ವಿಶ್ವನಾಥ್ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಎರಡು ಬಾರಿ ಸಚಿವರಾಗಿ ಕೆಲಸ ಮಾಡಿದ್ದು, ಹಿರಿತನ ಹೊಂದಿದ್ದಾರೆ.


ಪ್ರಭಾವಿ ನಾಯಕ ವಿ.ಶ್ರೀನಿವಾಸಪ್ರಸಾದ್ ಅವರ ಅಳಿಯ ಹರ್ಷವರ್ಧನ್ ದಲಿತ ಸಮುದಾಯದವರು. ಹಳೇ ಮೈಸೂರು ಭಾಗದಲ್ಲಿ ಆ ಸಮುದಾಯಕ್ಕೆ ಅವಕಾಶ ಕಲ್ಪಿಸಬೇಕೆಂಬ ಆಗ್ರಹ ವ್ಯಕ್ತವಾಗಿದ್ದು, ಅದು ಫಲ ನೀಡಿದರೆ ಅವರಿಗೆ ಸಚಿವ ಸ್ಥಾನ ಒಲಿಯಬಹುದು. ಒಕ್ಕಲಿಗರ ಜಾತಿ ಲೆಕ್ಕಾಚಾರದಲ್ಲಿ ನಾಗೇಂದ್ರ ಅವರಿಗೆ ಅದೃಷ್ಟ ಖುಲಾಯಿಸಬಹುದು. ಆದರೆ, ಮೂವರು ಶಾಸಕರ ಪೈಕಿ ರಾಜಕೀಯ ಹಿರಿತನದಿಂದಾಗಿ ಬ್ರಾಹ್ಮಣ ಸಮುದಾಯದ ಎಸ್.ಎ.ರಾಮದಾಸ್ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ.


ರಾಮದಾಸ್ ಜಿಲ್ಲೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. 1994ರ ಚುನಾವಣೆಯಲ್ಲಿ ಗೆದ್ದು ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಿದ್ದರು. ನಂತರ 1999ರಲ್ಲೂ ಗೆಲುವು ಸಾಧಿಸಿದ್ದರು. 2004 ಮತ್ತು 2013ರ ಚುನಾವಣೆಗಳಲ್ಲಿ ಸೋಲು ಕಂಡರು. 2008ರಲ್ಲಿ ಗೆಲುವು ಪಡೆದು ಸಚಿವರಾಗಿದ್ದರು ಒಟ್ಟು 6 ಚುನಾವಣೆಗಳಲ್ಲಿ ಸ್ಪರ್ಧಿಸಿ, ನಾಲ್ಕು ಬಾರಿ ಗೆದ್ದಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಎಚ್.ವಿಶ್ವನಾಥ್ ಪ್ರಮುಖ ಕಾರಣಕರ್ತರು. ಆದರೆ ಅವರಿಗೆ ಸಚಿವ ಸ್ಥಾನ ದೊರೆಯುವುದು ಅನುಮಾನವೇ. ಇದಕ್ಕೆ ಕಾನೂನು ತೊಡಕು ಇದೆ ಎನ್ನಲಾಗಿದೆ.

ಮಂತ್ರಿ ಭಾಗ್ಯವೇ ಇಲ್ಲ ಈ ಕ್ಷೇತ್ರಕ್ಕೆ!
ಚಾಮರಾಜ ಕ್ಷೇತ್ರಕ್ಕೆ ಇಲ್ಲಿಯವರೆಗೆ ಒಮ್ಮೆಯೂ ಸಚಿವ ಸ್ಥಾನ ಒಲಿದು ಬಂದಿಲ್ಲ. ಹಾಗಾಗಿ, ಈ ಬಾರಿ ಕ್ಷೇತ್ರದ ಶಾಸಕರಿಗೆ ಮಂತ್ರಿ ಸ್ಥಾನ ನೀಡಬೇಕೆಂಬ ಕೂಗು ಜೋರಾಗಿದೆ. ಈ ಹಿಂದೆ ಕ್ಷೇತ್ರದ ಪ್ರತಿನಿಧಿ ಒಂದು ಪಕ್ಷದವರಾದರೆ, ಸರ್ಕಾರ ನಡೆಸುವವರು ಮತ್ತೊಂದು ಪಕ್ಷದವರಾಗಿರುತ್ತಿದ್ದರು. ಅಂತೆಯೆ, ಕೆಲವು ಬಾರಿ ಅಧಿಕಾರ ಹಿಡಿದ ಪಕ್ಷದ ಶಾಸಕರು ಮೊದಲ ಬಾರಿಗೆ ಆಯ್ಕೆಯಾಗಿದ್ದರಿಂದ ಮಂತ್ರಿ ಸ್ಥಾನ ದೊರಕದಿರುವುದಕ್ಕೆ ಕಾರಣವಾಗಿತ್ತು.


ಆದರೆ ಈ ಕ್ಷೇತ್ರದಿಂದ ಸತತ 4 ಬಾರಿ ಶಾಸಕರಾಗಿದ್ದ ಎಚ್.ಎಸ್.ಶಂಕರಲಿಂಗೇಗೌಡ ಅವರಿಗೆ ಹಿರಿತನ, ಅನುಭವ, ಶಾಸಕರು ಪ್ರತಿನಿಧಿಸುತ್ತಿದ್ದ ಪಕ್ಷವೇ ಅಧಿಕಾರ ನಡೆಸಿದ್ದು ಸೇರಿದಂತೆ ಎಲ್ಲ ಅವಕಾಶಗಳಿದ್ದರೂ ಮಂತ್ರಿ ಸ್ಥಾನ ದೊರೆಯಲಿಲ್ಲ. ಈ ಮೂಲಕ ಚಾಮರಾಜ ಕ್ಷೇತ್ರ ಅವಕಾಶದಿಂದ ವಂಚಿತವಾಯಿತು. ಸದ್ಯ ಈ ಕ್ಷೇತ್ರವನ್ನು ಬಿಜೆಪಿ ಶಾಸಕ ಎಲ್.ನಾಗೇಂದ್ರ ಪ್ರತಿನಿಧಿಸುತ್ತಿದ್ದು, ಈ ಬಾರಿಯಾದರೂ ಅವಕಾಶ ದೊರೆಯುವುದೇ ಎಂಬುದನ್ನು ಕಾದು ನೋಡಬೇಕಿದೆ.

ಸಚಿವ ಸ್ಥಾನ ಸೇರಿದಂತೆ ಯಾವುದೇ ಅಧಿಕಾರಕ್ಕೆ ನಾನೆಂದೂ ಆಸೆ ಪಟ್ಟವನಲ್ಲ. ನನ್ನ ಕ್ಷೇತ್ರವನ್ನು ಮಾದರಿಯಾಗಿ ರೂಪಿಸುವ ಸಂಬಂಧ ಕೆಲಸ ಮಾಡುತ್ತಿದ್ದೇನೆ. ಇಡೀ ಮೈಸೂರು ಜನತೆಗೆ ಒಳ್ಳೆಯ ಕೆಲಸ ಮಾಡಬೇಕು. ಜಿಲ್ಲೆಯನ್ನು ಅಭಿವೃದ್ಧಿಪಡಿಸಬೇಕು ಎನ್ನುವುದು ನನ್ನ ಉದ್ದೇಶ.
ಎಸ್.ಎ.ರಾಮದಾಸ್, ಶಾಸಕ, ಕೃಷ್ಣರಾಜ ಕ್ಷೇತ್ರ