ಜಿಲ್ಲೆ

24 ಗ್ರಾಮದ ವ್ಯಾಪ್ತಿಯಲ್ಲಿ ಫುಟ್‌ಓವರ್ ಬ್ರಿಡ್ಜ್ ನಿರ್ಮಾಣ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾಹಿತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-275ರಲ್ಲಿ 24 ಗ್ರಾಮಗಳ ವ್ಯಾಪ್ತಿಯಲ್ಲಿ ಫುಟ್ ಓವರ್ ಬ್ರಿಡ್ಜ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ.

ಬೆಂ-ಮೈ ಹೆದ್ದಾರಿಯಲ್ಲಿ ಸಾರ್ವಜನಿಕರು ಸುರಕ್ಷಿತವಾಗಿ ರಸ್ತೆ ದಾಟಲು ಅನಾನುಕೂಲವಾಗಿರುವ ಬಗ್ಗೆ ವಿಧಾನ ಪರಿಷತ್‌ನಲ್ಲಿ ಸದಸ್ಯ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ಜಿಲ್ಲಾ ವ್ಯಾಪ್ತಿಯ ರುದ್ರಾಕ್ಷಿಪುರ, ಅಗರಲಿಂಗನದೊಡ್ಡಿ, ಮೊಬ್ಬಲಗೆರೆ, ಗೆಜ್ಜಲಗೆರೆ ಕೈಗಾರಿಕಾ ಪ್ರದೇಶ, ಗೆಜ್ಜಲಗೆರೆ, ಬಿ.ಗೌಡಗೆರೆ, ಬೂದನೂರು, ಕಾಳೇನಹಳ್ಳಿ, ರಾಗಿಮುದ್ದನಹಳ್ಳಿ, ಸಿದ್ದಾಪುರ, ಗಣಂಗೂರು, ಗೌಡಹಳ್ಳಿಯಲ್ಲಿ ಸೇತುವೆ ನಿರ್ಮಾಣ ಮಾಡಲಾಗುವುದು ಎಂದಿದ್ದಾರೆ.

ಇನ್ನು ಹೆದ್ದಾರಿಯ ಸರ್ವೀಸ್ ರಸ್ತೆ ಇಕ್ಕೆಲದಲ್ಲಿ ಚರಂಡಿ ಕಾಮಗಾರಿ ಅಪೂರ್ಣ ಮತ್ತು ಅವೈಜ್ಞಾನಿಕವಾಗಿರುವುದು, ರಸ್ತೆ ಡುಬ್ಬ ಅವೈಜ್ಞಾನಿಕವಾಗಿರುವುದರಿಂದ ಆಗುತ್ತಿರುವ ಸಮಸ್ಯೆ ಸರ್ಕಾರದ ಗಮನಕ್ಕೆ ಬಂದಿದೆ. ಆದ್ದರಿಂದ ತ್ವರಿತವಾಗಿ ಅದನ್ನು ಸರಿಪಡಿಸುವ ಕೆಲಸ ಮಾಡಲಾಗುವುದು. ಮಂಡ್ಯ ಜಿಲ್ಲೆಯ ಕೋಡಿಶೆಟ್ಟಿಪುರ, ಗಣಂಗೂರು ಮತ್ತು ಇಂಡುವಾಳು ಗ್ರಾಮದಲ್ಲಿ ಸರ್ವೀಸ್ ರಸ್ತೆಯಲ್ಲಿ ಅಪೂರ್ಣವಾದ ಚರಂಡಿ ನಿರ್ಮಾಣ ಕಾಮಗಾರಿಯನ್ನು ಈಗಾಗಲೇ ಆರಂಭಿಸಲಾಗಿದೆ. ಇದಲ್ಲದೇ ಅಂಡರ್‌ಪಾಸ್ ಸ್ಥಳದ ಬಳಿ ಸರ್ವೀಸ್ ರಸ್ತೆಯಲ್ಲಿನ ಅವೈಜ್ಞಾನಿಕ ರಸ್ತೆ ಡುಬ್ಬಗಳನ್ನು ಗುರುತಿಸಿ ಸರಿಪಡಿಸುವ ಸಂಬಂಧ ಪೊಲೀಸ್ ಇಲಾಖೆಯೊಂದಿಗೆ ಸಮಾಲೋಚಿಸಿ ಶೀಘ್ರದಲೇ ಆರಂಭಿಸಲಾಗುವುದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಮುಖವಾಗಿ ಜಿಲ್ಲೆಯಲ್ಲಿ ಮದ್ದೂರು, ಉಮ್ಮಡಹಳ್ಳಿ ಗೇಟ್, ಇಂಡುವಾಳು, ಸುಂಡಹಳ್ಳಿ, ರಾಗಿಮುದ್ದನಹಳ್ಳಿ, ಗರುಡನಉಕ್ಕಡ ಅಪಘಾತ ಸಂಭವಿಸಬಹುದಾದ ಸ್ಥಳಗಳು ಎನ್ನಲಾಗಿದೆ. ಇಲ್ಲಿ ಸರಾಸರಿ ಎತ್ತರ ಹೆಚ್ಚಿಸುವುದರ ಜತೆಗೆ ಸೂಚನಾ ಫಲಕ ಸೇರಿದಂತೆ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಗುತ್ತಿಗೆಯನ್ನು 2023ರ ನವೆಂಬರ್‌ನಲ್ಲಿ ನೀಡಲಾಗಿದೆ. 2024ರ ಜನವರಿಯಲ್ಲಿ ಕೆಲಸ ಆರಂಭಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.