ಜಿಲ್ಲೆ

ಮೈಸೂರು -ಬೆಂಗಳೂರು ಸಾಮಾನ್ಯ ಬಸ್ ಪ್ರಯಾಣ ದರ ಹಚ್ಚಳ

ಮೈಸೂರು: ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ಸಾಮಾನ್ಯ ಬಸ್ ಪ್ರಯಾಣ ದರವನ್ನು ಕೆಎಸ್‌ಆರ್‌ಟಿಸಿ ಹೆಚ್ಚು ಮಾಡಿದ್ದು, ಪ್ರತಿ ಟಿಕೆಟ್‌ಗೆ 200 ರೂ. ದರ ನಿಗದಿಪಡಿಸಲಾಗಿದೆ.


ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸಿಕೊಡುವ ಶಕ್ತಿ ಯೋಜನೆ ಅನುಷ್ಠಾನಗೊಂಡ ಬಳಿಕ ಮೈಸೂರು-ಬೆಂಗಳೂರು ನಡುವೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಏರಿಕೆಯಾಗಿದೆ. ಬಹುತೇಕ ಪ್ರಯಾಣಿಕರು ತಡೆರಹಿತ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ. ಇದರಿಂದಾಗಿ ಬೇಡಿಕೆಗೆ ಅನುಗುಣವಾಗಿ ಬಸ್ ವ್ಯವಸ್ಥೆ ಮಾಡಲು ಕೆಎಸ್‌ಆರ್‌ಟಿಸಿಗೆ ಕಷ್ಟಕರವಾಗಿದೆ.

ಈ ಹಿನ್ನೆಲೆಯಲ್ಲಿ ತಡೆರಹಿತ ಬಸ್‌ಗೆ ಮಾತ್ರ ಪ್ರಯಾಣ ದರವನ್ನು ಪರಿಷ್ಕರಣೆ ಮಾಡಿದ್ದು, ವಿವಿಧೆಡೆ ನಿಲುಗಡೆ ನಿಡುವ ಸಾಮಾನ್ಯ ಬಸ್, ಐರಾವತ, ರಾಜಹಂಸ ಹಾಗೂ ಪವರ್ ಫ್ಲಸ್ ಬಸ್‌ಗಳ ಪ್ರಯಾಣ ದರದಲ್ಲಿ ಯಾವುದೇ ಬದಲಾವಣೆಯ ಮಾಡಿಲ್ಲ.

ಮೈಸೂರು-ಬೆಂಗಳೂರು ನಡುವಿನ ಎಕ್ಸ್‌ಪ್ರೆಸ್ ವೇ ಆದ ಬಳಿ ಟೋಲ್ ಭರಿಸಬೇಕಾಗಿದ್ದು, ಇದರಿಂದಾಗಿ ಬಸ್ ಪ್ರಯಾಣ ದರ 160 ರಿಂದ 185 ರೂ.ಗೆ ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೆ 185 ರಿಂದ 200 ರೂ.ಗೆ ಹೆಚ್ಚಳ ಮಾಡಲಾಗಿದ್ದು, 15 ರೂ. ಏರಿಕೆ ಮಾಡಿದೆ.

ಸಾಮಾನ್ಯ ಬಸ್‌ಗಳ ದರ ಪರಿಷ್ಕರಣೆ ಆಗಿಲ್ಲ

ಮೈಸೂರು ಡಿಪೋನಿಂದ ನಿತ್ಯ ಬೆಂಗಳೂರಿಗೆ ತಡೆರಹಿತ 30 ಎಕ್ಸ್‌ಪ್ರೆಸ್ ಬಸ್‌ಗಳು 65 ಟ್ರಿಪ್‌ಗಳಲ್ಲಿ ಸಂಚರಿಸಲಿವೆ. ಇದರೊಂದಿಗೆ ಬೆಂಗಳೂರು ಡಿಪೋಗೆ ಸೇರಿದ ಬಸ್‌ಗಳು ಈ ಮಾರ್ಗದಲ್ಲೇ ಸಾಗುತ್ತಿವೆ. ಆದಾಗ್ಯೂ, ತಡೆರಹಿತ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಕಡಿಮೆಯಾಗುತ್ತಿಲ್ಲ.

ಮೈಸೂರಿಂದ ನಿತ್ಯ 390 ಟ್ರಿಪ್‌ಗಳಲ್ಲಿ ವಿವಿಧ ಪ್ರಮುಖ ನಗರ, ಪಟ್ಟಣಗಳಲ್ಲಿ ನಿಲುಗಡೆ ನೀಡುವ ಬಸ್‌ಗಳು ಸಂಚರಿಸಲಿವೆ. ನಿಲುಗಡೆ ನೀಡುವ ಸಾಮಾನ್ಯ ಬಸ್‌ಗಳ ದರ ಪರಿಷ್ಕರಣೆ ಆಗಿಲ್ಲ. ಅವುಗಳ ಹಳೇ ಪ್ರಯಾಣ ದರವನ್ನೇ ಯಥಾಸ್ಥಿತಿಯಲ್ಲೇ ಮುಂದುವರಿಸಲಾಗಿದೆ.

ಎಕ್ಸ್‌ಪ್ರೆಸ್ ಬಸ್‌ಗಾಗಿ ಕಾಯುವ ಪ್ರಯಾಣೀಕರು

ಮೈಸೂರು-ಬೆಂಗಳೂರು ನಡುವೆ ನಿತ್ಯ ಹಲವು ಬಸ್‌ಗಳು ಸಂಚರಿಸಿದರೂ ಪ್ರಯಾಣಿಕರು ಮಾತ್ರ ತಡೆರಹಿತ ಬಸ್‌ಗಳನ್ನೇ ಅವಲಂಬಿಸುತ್ತಿದ್ದಾರೆ. ಆಸನಗಳಿದ್ದರೂ ಪ್ರಯಾಣಿಕರು ವಿವಿಧೆಡೆ ನಿಲುಗಡೆ ನೀಡುವ ಬಸ್‌ಗಳಲ್ಲಿ ಸಂಚರಿಸಲು ಆಸಕ್ತಿ ತೋರುತ್ತಿಲ್ಲ.

ಬದಲಿಗೆ ಎಕ್ಸ್‌ಪ್ರೆಸ್ ಬಸ್‌ಗಾಗಿ ಕಾಯುತ್ತಿದ್ದಾರೆ. ನಿರ್ವಹಣೆ ಮೇಲಿನ ಒತ್ತಡ ಕಡಿಮೆ ಮಾಡಲು ಇದೀಗ ಎಕ್ಸ್‌ಪ್ರೆಸ್ ಬಸ್ ಪ್ರಯಾಣ ದರ ಹೆಚ್ಚಳ ಮಾಡಿರುವುದರಿಂದ ನಿಲುಗಡೆ ನೀಡುವ ಬಸ್‌ಗಳಲ್ಲಿ ಪ್ರಯಾಣಿಸಲು ಕೆಲ ಪ್ರಯಾಣಿಕರು ಮುಂದಾಗಬಹುದು. ಒಬ್ಬರಿಗೆ 15 ರೂ. ಉಳಿತಾಯ ಆಗುವುದರಿಂದ ನಿಲುಗಡೆ ನೀಡುವ ಬಸ್‌ಗಳಲ್ಲಿ ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.

‘ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ಬಸ್ ಪ್ರಯಾಣ ದರ ಪರಿಷ್ಕರಿಸಲಾಗಿದೆ. ಟೋಲ್ ಸಂಗ್ರಹದ ಹಿನ್ನೆಲೆಯಲ್ಲಿ ಮಾಡಿದ್ದ ದರ ಹೆಚ್ಚಳ ಹೊರತುಪಡಿಸಿದರೆ, ನಿರ್ವಹಣಾ ವೆಚ್ಚ ಸರಿದೂಗಿಸಲು ಬಸ್ ಪ್ರಯಾಣದ ದರ ಹೆಚ್ಚಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ಸಾಮಾನ್ಯ ಎಕ್ಸ್‌ಪ್ರೆಸ್ ಬಸ್‌ಗಳ ದರ ಮಾತ್ರ ಏರಿಕೆ ಮಾಡಲಾಗಿದೆ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಿ.ಶ್ರೀನಿವಾಸ್ ತಿಳಿಸಿದ್ದಾರೆ.