ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ಖಂಡಿಸಿ ಆ.19ರಂದು ‘ಮೈಸೂರು ಬಂದ್’ ನಡೆಸಲು ಶೋಷಿತ ಸಮುದಾಯದ ನಾಯಕರು, ಅಹಿಂದ ಮುಖಂಡರು ಮತ್ತು ಸಿದ್ದರಾಮಯ್ಯ ಅಭಿಮಾನಿಗಳು ತೀರ್ಮಾನಿಸಿದ್ದಾರೆ.
ಸಿದ್ಧಾರ್ಥನಗರದ ಕನಕ ಭವನದಲ್ಲಿ ಶನಿವಾರ ಸಂಜೆ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಬಂದ್‌ಗೆ ಇತರ ಸಂಘ-ಸಂಸ್ಥೆಗಳ ಬೆಂಬಲ ಪಡೆದು ಯಶಸ್ವಿಗೊಳಿಸುವ ನಿರ್ಧಾರಕ್ಕೆ ಬರಲಾಯಿತು.
ಜತೆಗೆ, ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತವಾಯಿತು.
ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ.ಸುಬ್ರಹ್ಮಣ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿವಿಧ ಸಮಾಜದ ಮುಖಂಡರು ಪಾಲ್ಗೊಂಡಿದ್ದರು. ಮುಂದಿನ ಹೋರಾಟದ ಕುರಿತು ಚರ್ಚಿಸಿದರು.
ಬಿ.ಸುಬ್ರಹ್ಮಣ್ಯ ಮಾತನಾಡಿ, ಬಿಜೆಪಿ-ಜೆಡಿಎಸ್ ನಾಯಕರು ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸುವ ಷಡ್ಯಂತ್ರ ನಡೆಸಿದ್ದು, ಅದಕ್ಕೆ ರಾಜ್ಯಪಾಲರು ಬೆಂಬಲ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ, ಪ್ರತಿಪಕ್ಷಗಳು ರಾಜಭವನವನ್ನು ದುರ್ಬಳಕೆ ಮಾಡಿಕೊಂಡಿವೆ. ಈ ಹಿನ್ನೆಲೆಯಲ್ಲಿ ಸಿಎಂ ವಿರುದ್ಧ ತನಿಖೆಗೆ ಅವಕಾಶ ದೊರೆತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿದ್ದರಾಮಯ್ಯ ಕುಟುಂಬದ ಜಮೀನು ಪಡೆದುಕೊಂಡಿದ್ದಕ್ಕೆ ಪರಿಹಾರವಾಗಿ ಮುಡಾ ನಿವೇಶನ ಹಂಚಿಕೆ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯು ಸೂಕ್ತ ದಾಖಲೆ ಬಿಡುಗಡೆ ಮಾಡಿ ಸ್ಪಷ್ಟನೆಯನ್ನೂ ನೀಡಿದ್ದಾರೆ.
ಇದರಲ್ಲಿ ನಿಯಮಾವಳಿ, ಕಾನೂನು ಉಲ್ಲಂಘನೆಯಾಗಿಲ್ಲ. ಇಷ್ಟಕ್ಕೂ ಅವರಿಗೆ ನಿವೇಶನ ಹಂಚಿಕೆ ಮಾಡಿದ್ದು ಬಿಜೆಪಿ ಸರ್ಕಾರ ಅವಧಿಯಲ್ಲೇ ಆದರೂ ಅದನ್ನು ಹಗರಣವೆಂದು ಬಿಂಬಿಸುತ್ತಿರುವುದು ಸರಿಯಲ್ಲ. ರಾಜ್ಯಪಾಲರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.
ರಾಜ್ಯಪಾಲರ ವಿರುದ್ಧ ಅಹಿಂದ ನಾಯಕರು, ಶೋಷಿತ ಸಮುಯದಾಯದವರು, ಸಿದ್ದರಾಮಯ್ಯ ಅಭಿಮಾನಿಗಳು ರಾಜ್ಯಾದ್ಯಂತ ಪ್ರತಿಭಟನೆ ಕೈಗೊಳ್ಳಬೇಕು. ಈ ಮೂಲಕ ಸಿದ್ದರಾಮಯ್ಯ ಅವರಿಗೆ ನೈತಿಕ ಬೆಂಬಲ ನೀಡಬೇಕು ಎಂದು ಹೇಳಿದರು.
ಕಾಂಗ್ರೆಸ್ ನಗರ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷ ಕೆ.ಎಸ್.ಶಿವರಾಮು, ಭೋವಿ ಸಮಾಜದ ಮುಖಂಡ ಜಿ.ವಿ.ಸೀತಾರಾಮ್ ಇನ್ನಿತರರಿದ್ದರು.