ಜಿಲ್ಲೆ

ಸಮಯಪಾಲನೆಗೆ ಆಕಾಶವಾಣಿ ಮಾದರಿ: ಜಿಲ್ಲಾಧಿಕಾರಿ ಡಾ.ಕುಮಾರ ಮೆಚ್ಚುಗೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಆಕಾಶವಾಣಿಯಲ್ಲಿ ಸಮಯಕ್ಕೆ ಸರಿಯಾಗಿ ಕಾರ್ಯಕ್ರಮಗಳು ಮೂಡಿ ಬರುತ್ತದೆ. ಸಮಯಕ್ಕೆ ಹೆಚ್ಚು ಮಹತ್ವ ನೀಡುವುದು ಆಕಾಶವಾಣಿಯ ವಿಶೇಷ. ಆದ್ದರಿಂದ ಸಮಯ ಪಾಲನೆಯಲ್ಲಿ ಮಾದರಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರು ಆಕಾಶವಾಣಿ 90 ವರ್ಷ ಪೂರೈಸಿರುವ ಹಿನ್ನಲೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಕರ್ನಾಟಕ ಸಂಘದ ಸಹಯೋಗದೊಂದಿಗೆ ಆಯೋಜಿಸಿದ್ದ ‘ಮೈಸೂರು ಆಕಾಶವಾಣಿ-90 ಭಾವ ಜನಪದ ರಂಗ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಕಾಶವಾಣಿ ವಿಶೇಷವಾಗಿ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅತ್ಯುತ್ತಮವಾದಂತ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಗ್ರಾಮೀಣ ಸೊಗಡನ್ನು ಬಿಂಬಿಸುವ ಅನೇಕ ಕಾರ್ಯಕ್ರಮಗಳನ್ನು ನೀಡುತ್ತಿದೆ ಎಂದರು.

ನಾವೆಲ್ಲರೂ ಇಂತಹ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳತಕ್ಕಂತ ಮತ್ತು ಉತ್ತೇಜಿಸುವಂತಹ ಕೆಲಸ ಮಾಡಬೇಕು. ಆಕಾಶವಾಣಿ ಸಿಬ್ಬಂದಿ ನೋಡಿ ನಾವು ಕಲಿಯುವಂತಹದ್ದು ಬಹಳ ಇದೆ. ಸಮಾಜದಲ್ಲಿ ನಡೆಯುತ್ತಿರುವ ವಿಷಯಗಳನ್ನು ತಿಳಿಸುವ ಒಂದು ಮುಖ್ಯವಾಹಿನಿ ಆಕಾಶವಾಣಿ ಎಂದರು.

ಆಕಾಶವಾಣಿ ಉಪನಿರ್ದೇಶಕ ಎಸ್.ಎಸ್.ಉಮೇಶ್ ಮಾತನಾಡಿ, ಆಕಾಶವಾಣಿ ಕಾರ್ಯಕ್ರಮವನ್ನು ಕೇಳಿದರೆ ನಿಮ್ಮ ವ್ಯಕ್ತಿತ್ವ ಬದಲಾಗುತ್ತದೆ. ನಿಮ್ಮ ಕಿವಿ, ಬುದ್ಧಿಮತ್ತೆ ಚುರುಕಾಗುತ್ತದೆ. ಕೇಳುವಿಕೆಯಿಂದ ನಿಮ್ಮ ಬರವಣಿಗೆ, ವ್ಯಕ್ತಿತ್ವ ಪರಿಪೂರ್ಣವಾಗುತ್ತದೆ. ಆಕಾಶವಾಣಿಯ ಕೇಳುಗರು ನಮ್ಮ ಬಗ್ಗೆ ಅಭಿಮಾನ ಬೆಳೆಸಿಕೊಂಡಿದ್ದಾರೆ. ಧ್ವನಿ ಮುಖಾಂತರವೇ ಪರಿಚಯ ಮಾಡಿಕೊಳ್ಳುತ್ತಾರೆ. ನಮ್ಮನ್ನು ನೋಡಲು ಬರುತ್ತಾರೆ ದನಿಯನ್ನು ಗುರುತಿಸಿ ಮಾತನಾಡಿದಾಗ ಆಕಾಶವಾಣಿಯ ಬಗ್ಗೆ ಹೆಮ್ಮೆ ಮೂಡುತ್ತದೆ. ಇಂತಹ ಜನರ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದರು.

ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ಶ್ರವಣ ಮಾಧ್ಯಮ ಆಕಾಶವಾಣಿಯ ಮುಂದುವರಿದ ಭಾಗವಾಗಿ ದೂರದರ್ಶನ ಬಂದಿದೆ. ವಿಜ್ಞಾನದ ಆವಿಷ್ಕಾರ ಜನರಿಗೆ ವಿದ್ಯುತ್ ಮತ್ತು ಆಕಾಶವಾಣಿಯ ಮೂಲಕ ತಲುಪಿದೆ. ಮೈಸೂರು ಆಕಾಶವಾಣಿ ನಡೆದು ಬಂದ ಹಾದಿ ರೋಮಾಂಚನ ಮೂಡಿಸುತ್ತದೆ. ಬಾನುಲಿ, ಅಶರೀರವಾಣಿ ಹೆಸರಿನಿಂದ ಕರೆಯಲ್ಪಡುತ್ತಿದ್ದ ಇದಕ್ಕೆ ಸಾಹಿತಿ ನಾ.ಕಸ್ತೂರಿ ಅವರು ಆಕಾಶವಾಣಿ ಎಂದು ಹೆಸರಿಸಿದರು. ಆಕಾಶವಾಣಿ ಎಂದರೆ ವಿಶ್ವದಲ್ಲಿ ಎಲ್ಲರಿಗೂ ಪರಿಚಿತ. ಅನೇಕ ಸವಾಲುಗಳನ್ನು ಎದುರಿಸಿ ಇಂದಿಗೂ ಉಳಿದು ಜನರ ಗೌರವ ಪ್ರೀತಿ ಆದರಗಳನ್ನು ಗಳಿಸಿದೆ. ಅಭಿಮಾನ ಇಟ್ಟುಕೊಂಡಿರುವ ಒಂದು ದೊಡ್ಡ ವರ್ಗವೇ ಇದೆ. ವಿದ್ಯಾರ್ಥಿಗಳು ಮತ್ತು ಯುವ ಮನಸ್ಸುಗಳಲ್ಲಿ ಆಸಕ್ತಿ ಮೂಡಿಸುವ ಕೆಲಸವಾಗಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್ ಮಾತನಾಡಿ, ಕಲೆ ಮತ್ತು ಸಂಸ್ಕೃತಿ ಮುಂದಿನ ಜನಾಂಗವನ್ನು ತಲುಪಬೇಕು. ಆಕಾಶವಾಣಿ ನಂತರ ದೂರದರ್ಶನ ಮತ್ತು ಎಫ್‌ಎಂ ರೇಡಿಯೋಗಳು ಬಂದಾಗ ಆಕಾಶವಾಣಿ ತೆರೆಮರೆಗೆ ಸರಿಯುತ್ತದೆ ಎಂಬ ಆತಂಕವಿತ್ತು. ಆದರೆ ಇಂದಿಗೂ ಆಕಾಶವಾಣಿ ನಿಜವಾದ ಕನ್ನಡ ಅಭಿಮಾನಿಗಳನ್ನು, ಶ್ರೋತೃಗಳನ್ನು ಹೊಂದಿದೆ ಎಂದು ಪ್ರಶಂಸಿಸಿದರು.

ಆಕಾಶವಾಣಿಯ ಸಹಾಯಕ ನಿರ್ದೇಶಕ ಟಿ.ವಿ.ವಿದ್ಯಾಶಂಕರ್ ಮಾತನಾಡಿ, ಮಂಡ್ಯ ರಾಜಕೀಯವಾಗಿ ಆರ್ಥಿಕವಾಗಿ ಸಾಂಸ್ಕೃತಿಕವಾಗಿ ಬಲಿಷ್ಠವಾಗಿದೆ. ಹಿರಿಯ ತಲೆಮಾರು ಆಕಾಶವಾಣಿ ಕೇಳುತ್ತಿದ್ದರೆ ಯುವಜನತೆಯಲ್ಲಿ ಆಸಕ್ತಿ ಮೂಡಿಸಬೇಕಾಗಿದೆ. ಆಕಾಶವಾಣಿ ಕೇಳುವುದರಿಂದ ಪ್ರತಿಭೆ ಚಿಗುರೊಡೆಯಲು ಕಾರಣವಾಗುತ್ತದೆ.ವಿದ್ಯಾರ್ಥಿಗಳು ಯುವಜನತೆ ಕಾರ್ಯಕ್ರಮ ಪ್ರಸ್ತುತಪಡಿಸಿದರೆ ನಮ್ಮ ಬಾಗಿಲು ಸದಾ ತೆರೆದಿರುತ್ತದೆ.ಇದರ ನಡುವೆ ಶೈಕ್ಷಣಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನು ತಲುಪುತ್ತಿರುವುದು ಸಂತಸದ ವಿಷಯ ಎಂದರು.

ಆಕಾಶವಾಣಿ ಹಿರಿಯ ಉದ್ಘೋಷಕ ಮೈಸೂರು ಉಮೇಶ್, ತಾಂತ್ರಿಕ ವಿಭಾಗದ ಮುಖ್ಯಸ್ಥ ಆನಂದನ್ ಇತರರಿದ್ದರು. ವೇದಿಕೆ ಕಾರ್ಯಕ್ರಮದ ನಂತರ ನಿತಿನ್ ರಾಜಾರಾಮ್ ಶಾಸ್ತ್ರಿ, ಜಯಂತಿ ವಿ ಭಟ್, ಸ್ವಾಮಿ ಗಾಮನಹಳ್ಳಿ ಅವರು ಭಾವಗೀತೆಗಳ ಗಾಯನ ಪ್ರಸ್ತುತಪಡಿಸಿದರು. ನಂತರ ಹೊನ್ನೆಮಡು ಗಂಗಾಧರ್ ಮತ್ತು ತಂಡದಿಂದ ವೀರಭದ್ರನ ಕುಣಿತ, ಕಾರಸವಾಡಿ ದೇವರಾಜು ಮತ್ತು ತಂಡದಿಂದ ಪೂಜಾ ಕುಣಿತ, ಹುಲಿವಾನ ದಿಲೀಪ್ ಕುಮಾರ್ ಮತ್ತು ತಂಡದವರಿಂದ ತಮಟೆ ವಾದನ ಕಾರ್ಯಕ್ರಮ ನಡೆಯಿತು. ಮಂಡ್ಯದ ಡ್ಯಾಫೋಡಿಲ್ಸ್ ಮತ್ತು ಸದ್ವಿದ್ಯಾ ಶಾಲಾ ಮಕ್ಕಳಿಂದ ನೃತ್ಯ ರೂಪಕ, ಮಾಂಡವ್ಯ ರಂಗ ಕಲಾ ಟ್ರಸ್ಟ್ ಸದಸ್ಯರಿಂದ ’ಗದಾಯುದ್ಧ’ ಪೌರಾಣಿಕ ನಾಟಕ ಪ್ರದರ್ಶಿತವಾಯಿತು.