ಮೈಸೂರು: ಭದ್ರತೆ ಹಾಗೂ ಜನರಿಗೆ ಕಿರಿಕಿರಿ ಉಂಟಾಗುವುದನ್ನು ತಪ್ಪಿಸುವ ಸಲುವಾಗಿ ಮೈಸೂರು-ನಂಜನಗೂಡು ಹೆದ್ದಾರಿಯಲ್ಲಿ (ಮೈಸೂರು ವಿಮಾನ ನಿಲ್ದಾಣದ ರನ್ ವೇ ಹಾದು ಹೋಗುವ ಸ್ಥಳದಲ್ಲಿ) ನಿರ್ಮಿಸಲು ಉದ್ದೇಶಿಸಲಾಗಿದ್ದ ಅಂಡರ್‌ಪಾಸ್ ಯೋಜನೆ ಕೈಬಿಟ್ಟು, ರಸ್ತೆ ತಿರುವು ಮಾಡಲು ತೀರ್ಮಾನಿಸಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದ ಮೈಸೂರು ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ವಿಮಾನ ನಿಲ್ದಾಣ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ಮೈಸೂರು-ನಂಜನಗೂಡು ಮಾರ್ಗ 23 ಕಿ.ಮೀ. ಹೊಂದಿದ್ದು, ರಸ್ತೆ ತಿರುವ ಯೋಜನೆ ಜಾರಿಯಾದರೆ ನಂಜನಗೂಡು ಪಯಣ 5 ಕಿ.ಮೀ. ಹೆಚ್ಚಾಗಲಿದೆ. ನಗರದ ದಳವಾಯಿ ಕೆರೆ ಮುಂಭಾಗ ಹೆದ್ದಾರಿಯು ತಿರುವು ಪಡೆದು ಟೋಲ್ ಪ್ಲಾಜಾ ಬಳಿಯಲ್ಲಿ ಹಳೆಯ ಹೆದ್ದಾರಿಗೆ ಸೇರಿಕೊಳ್ಳಲಿದೆ. ಮೈಸೂರು-ನಂಜನಗೂಡು ಹೆದ್ದಾರಿಯನ್ನು 6 ಪಥದ ರಸ್ತೆಯಾಗಿ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದೆ. 6 ಪಥದ ಜತೆಗೆ ಎರಡು ಬದಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣಗೊಳ್ಳಲಿದೆ. ಅಂಡರ್‌ಪಾಸ್ ನಿರ್ಮಾಣಕ್ಕೆ ಮೀಸಲಿಟ್ಟಿದ್ದ 510 ಕೋಟಿ ರೂ.ಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (ಎನ್‌ಎಚ್‌ಎಐ) ನೀಡಲಾಗುವುದು. ಎಚ್‌ಎಚ್‌ಎಐನವರು ಹೆದ್ದಾರಿ ತಿರುವು ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ಹಾಗೂ ಹೆದ್ದಾರಿ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎಂದರು.