ಜಿಲ್ಲೆ

ಎಂ.ವೈ.ಸಿ.ಸಿ ಟಿ-೨೦ ಚಾಂಪಿಯನ್‌ಶಿಪ್: ವೈಲ್ಡ್ ಮಾಸ್ಟರ್ ತಂಡಕ್ಕೆ ಚಾಂಪಿಯನ್ ಪಟ್ಟ

ಮಡಿಕೇರಿ: ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಎಂ.ವೈ.ಸಿ.ಸಿ ಟಿ-೨೦ ಚಾಂಪಿಯನ್‌ಶಿಪ್ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ವೈಲ್ಡ್ ಮಾಸ್ಟರ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು.


ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೈಲ್ಡ್ ಮಾಸ್ಟರ್ ತಂಡ ನಿಗದಿತ ೨೦ ಓವರ್‌ಗಳಲ್ಲಿ ೭ ವಿಕೆಟ್‌ಗಳ ನಷ್ಟಕ್ಕೆ ೧೪೧ ರನ್‌ಗಳನ್ನು ಭಾರಿಸಿತು. ಗುರಿ ಬೆನ್ನಟ್ಟಿದ ಮಾದಾಪುರ ತಂಡ ೧೮ ಓವರ್‌ಗಳಲ್ಲಿ ೧೦೬ ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಪರಾಭವಗೊಂಡಿತು. ಪರಿಣಾಮ ವೈಲ್ಡ್ ಮಾಸ್ಟರ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದರೆ, ಇಂಡಿಯನ್ ಕ್ರಿಕೆಟರ್ ಮಾದಾಪುರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಎಂ.ವೈ.ಸಿ.ಸಿ(ಮಡಿಕೇರಿ ಯೂತ್ ಕ್ರಿಕೆಟ್ ಕ್ಲಬ್) ಆಯೋಜಿತ ಜಿಲ್ಲಾ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿ ೧೯ ತಂಡಗಳು ಭಾಗವಹಿಸಿ ಗಮನ ಸೆಳೆದವು.


೧೮ ಬಾಲ್‌ಗಳಲ್ಲಿ ೨೨ ರನ್‌ಗಳಿಸಿದ್ದಲ್ಲದೆ ಬೌಲಿಂಗ್‌ನಲ್ಲಿ ೪ ಓವರ್‌ಗಳಲ್ಲಿ ೧೯ ರನ್‌ಗಳನ್ನು ನೀಡಿ ೨ ವಿಕೆಟ್ ಪಡೆದ ವೈಲ್ಡ್ ಮಾಸ್ಟರ್ ತಂಡದ ಮುನೀಶ್ ಫೈನಲ್ಸ್‌ನ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.


ಟೂರ್ನಿಯ ಬೆಸ್ಟ್ ಬೌಲರ್ ಟ್ರೋಫಿಯನ್ನು ರನ್ನರ್ ಅಪ್ ಮಾದಾಪುರ ತಂಡದ ಚೇತನ್ ಗೌಡ ಪಡೆದುಕೊಂಡರು. ಬೆಸ್ಟ್ ಬ್ಯಾಟ್ಸ್‌ಮನ್ ಆಗಿ ಮಾದಾಪುರ ತಂಡದ ಹೇಮಂತ್, ಉದಯೋನ್ಮುಖ ಆಟಗಾರನಾಗಿ ಪ್ರಗತಿ ಕ್ರಿಕೆಟ್ ತಂಡದ ಗೌರವ್ ಅಪ್ಪಣ್ಣ, ಅತ್ಯುತ್ತಮ ಕ್ಯಾಚ್ ಪ್ರಶಸ್ತಿಯನ್ನು ಎಂ.ವೈ.ಸಿ.ಸಿ ತಂಡದ ಪ್ರಖ್ಯಾತ್ ಪಡೆದುಕೊಂಡರು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ವೈಲ್ಡ್ ಮಾಸ್ಟರ್ ತಂಡದ ಮನು ಪ್ರಕಾಶ್ ತಮ್ಮದಾಗಿಸಿಕೊಂಡರು.


ಕ.ಸಾ.ಪ ಮಡಿಕೇರಿ ತಾಲೂಕು ಅಧ್ಯಕ್ಷ ನವೀನ್ ಅಂಬೇಕಲ್, ಸಿ.ಎಮ್.ಸಿ ನಿವೃತ್ತ ಸಿಬ್ಬಂದಿ ರಾಮಚಂದ್ರ, ಎಂ.ವೈ.ಸಿ.ಸಿ ಅಧ್ಯಕ್ಷ ಕಾಯಪಂಡ ಗಣೇಶ್ ಉತ್ತಪ್ಪ, ಎಂ.ವೈ.ಸಿ.ಸಿಯ ಅಜಯ್, ಕಣ್ಣನ್, ಹಾಗೂ ಕಿಂಬರ್ಲಿ ರಿಕ್ರಿಯೇಷನ್‌ನ ಮದನ್, ಎಂ.ವೈ.ಸಿ.ಸಿ ಯ ದ್ರುವ, ವೈಲ್ಡ್ ಮಾಸ್ಟರ್‌ನ ರವಿಕಿರಣ, ರಿಶಿತ್ ಮಾದಯ್ಯ ಸೇರಿದಂತೆ ಇತರರು ಹಾಜರಿದ್ದರು.