ಜಿಲ್ಲೆ

ಒಂದು ಕಾರ್ಖಾನೆ ಉಳಿಸಲು ಸರ್ಕಾರಕ್ಕೆ ಸಾಧ್ಯವಿಲ್ಲವೇ?

reportermys

ಮಂಡ್ಯ: ಜಿಲ್ಲೆಯ ಜೀವನಾಡಿ ಮೈಷುಗರ್ ಕಾರ್ಖಾನೆಯನ್ನು ಹೊರಗುತ್ತಿಗೆ ನೀಡಲು ತೀರ್ಮಾನಿಸಿರುವ ರಾಜ್ಯ ಸರ್ಕಾರಕ್ಕೆ ಒಂದೇ ಒಂದು ಸರ್ಕಾರಿ ಸ್ವಾಮ್ಯದ ಕಾರ್ಖಾನೆ ಉಳಿಸಲು ಸಾಧ್ಯವಿಲ್ಲವೇ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಪ್ರಶ್ನಿಸಿದರು.
ರಾಜ್ಯದಲ್ಲಿರುವ ಹಲವು ಇಲಾಖೆಗೆ ಸಾವಿರಾರೂ ಕೋಟಿ ರೂಗಳನ್ನು ನೀಡುತ್ತದೆ. ಹೀಗಿರುವಾಗ 30 ರಿಂದ 40 ಕೋಟಿ ರೂಗಳನ್ನು ವ್ಯಯಿಸಿ ಮೈಷುಗರ್ ಕಾರ್ಖಾನೆ ನಡೆಸಲು ಏಕೆ ಸಾಧ್ಯವಿಲ್ಲ. ಒಂದು ವೇಳೆ ಯಾರಿಂದಾದರೂ ಒತ್ತಡವಿದ್ದರೆ ಬಹಿರಂಗಪಡಿಸಲಿ, ನಾವು ಅವರೊಂದಿಗೆ ಸೇರಿ ಒತ್ತಡ ಕಡಿಮೆ ಮಾಡುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಕಾರ್ಖಾನೆಯನ್ನು ಹೊರಗುತ್ತಿಗೆ ನೀಡಬಾರದೆಂದು ಮಂಗಳವಾರ ಸುದ್ದಿಗೋಷ್ಠಿ ಆಗ್ರಹಿಸಿದರು.
ಸಧ್ಯದ ಮಾಹಿತಿಯಂತೆ 40 ವರ್ಷ ಗುತ್ತಿಗೆ ನೀಡುತ್ತಾರೆನ್ನುವ ಸುದ್ದಿ ಹರಿದಾಡುತ್ತಿದೆ. ಹೊರಗುತ್ತಿಗೆಗೆ ಸಂಬಂಧಿಸಿದಂತೆ ಖಚಿತ ಮಾಹಿತಿ ಮತ್ತು ಪತ್ರ ಸಿಕ್ಕಿಲ್ಲ. ಅದಕ್ಕಾಗಿ ಪ್ರಯತ್ನಿಸುತ್ತಿದ್ದೇವೆ. ಅದು ಸಿಕ್ಕ ನಂತರ ಯಾವ ರೀತಿ ಹೋರಾಟ ಮಾಡಬೇಕು ಎನ್ನುವುದನ್ನು ತೀರ್ಮಾನಿಸಲಾಗುವುದು ಎಂದರು. ಸಮಿತಿ ಪದಾಧಿಕಾರಿಗಳಾದ ಎಂ.ಬಿ.ಶ್ರೀನಿವಾಸ್, ಸಿ.ಕುಮಾರಿ, ಕೆ.ಬೋರಯ್ಯ, ಮುದ್ದೇಗೌಡ, ಇಂಡುವಾಳು ಚಂದ್ರಶೇಖರ್, ಸುಧೀರ್‌ಕುಮಾರ್, ಕೃಷ್ಣಪ್ರಸಾದ್, ಜನಾರ್ಧನ್ ಇದ್ದರು.