ಜಿಲ್ಲೆ

ದೇಶ ಪ್ರೇಮಕ್ಕೆ ಒತ್ತಾಸೆ, ಹುತಾತ್ಮ ಯೋಧರ ತ್ಯಾಗ ಸ್ಮರಣೆ

ಬೆಂಗಳೂರು: ಕಟ್ಟಕಡೆಯ ವ್ಯಕ್ತಿ ಅಭಿವೃದ್ಧಿ ಮುಖ್ಯವಾಹಿನಿಗೆ ಸೇರಿ ದೇಶ ಬಲಿಷ್ಠವಾಗಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಕಾಳಜಿ. ಹಾಗೆಯೇ ದೇಶಪ್ರೇಮಕ್ಕೆ ಒತ್ತಾಸೆ, ಹುತಾತ್ಮ ಯೋಧರ ತ್ಯಾಗ ಸ್ಮರಣೆಗೆ ಆದ್ಯತೆ ನೀಡಿದ್ದಾರೆ ಎಂದು ಮಾಜಿ ಸಚಿವ ಕೆ.ಗೋಪಾಲಯ್ಯ ಹೇಳಿದರು.

‘ನನ್ನ ಮಣ್ಣು, ನನ್ನ ದೇಶ’ ಅಭಿಯಾನ ನಿಮಿತ್ತ ಮಹಾಲಕ್ಷ್ಮಿ ಲೇಔಟ್ ವಿಧಾನಸಭೆ ಕ್ಷೇತ್ರದ ಶಕ್ತಿ ಗಣಪತಿನಗರ ವಾರ್ಡ್‌ನ ಜೈಮಾರುತಿ ದೇವಸ್ಥಾನದಲ್ಲಿ ದರ್ಶನ ಪಡೆದು, ಕಲಶದಲ್ಲಿ ಮಣ್ಣು ಸಂಗ್ರಹಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಯಾವುದೇ ನಿರ್ಮಾಣ ಚಟುವಟಿಕೆಗಳಿಗೆ ಕಲ್ಲು, ಮಣ್ಣು ಸಂಗ್ರಹ ಅಗತ್ಯವಾಗಿದೆ. ಮಣ್ಣು ವಿಶೇಷ ಮಹತ್ವ ಪಡೆದುಕೊಂಡಿದ್ದು, ದೇಶಾಭಿಮಾನ ಮತ್ತು ಪ್ರೇಮ ಬೆಳೆಸುವುದಕ್ಕೂ ಪ್ರೇರಣೆ ನೀಡುತ್ತದೆ

ಎಂದು ತಿಳಿಸಿದರು.

ದೇಶಕ್ಕಾಗಿ ಹುತಾತ್ಮರಾದ ಯೋಧರ ತ್ಯಾಗವನ್ನು ಸ್ಮರಿಸಿ ಗೌರವಿಸುವುದು ಅಷ್ಟೇ ಮುಖ್ಯ. ಈ ದಿಸೆಯಲ್ಲಿ ಮೋದಿಯವರ ಅಪೇಕ್ಷೆಯಂತೆ ಅಭಿಯಾನ ನಡೆದಿದ್ದು, ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ರಾಜ್ಯದಲ್ಲಿ ಸಂಗ್ರಹಿಸಿದ ಮಣ್ಣನ್ನು ದೆಹಲಿಯಲ್ಲಿ ನಿರ್ಮಿಸಲು ಉದ್ದೇಶಿತ ಅಮೃತ ವಾಟಿಕಾ ವನಕ್ಕೆ ಬಳಕೆಯಾಗಲಿದೆ. ಸರ್ಕಾರಿ ಕಾರ್ಯಕ್ರಮವಾಗಿದ್ದರೂ ಪ್ರತಿ ವಾರ್ಡ್‌ನಲ್ಲಿ ಮಣ್ಣು ಸಂಗ್ರಹದ ಸತ್ಕಾರ್ಯದಲ್ಲಿ ಎಲ್ಲರೂ ತೊಡಗಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಕೆ.ಗೋಪಾಲಯ್ಯ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ರಾಘವೇಂದ್ರಶೆಟ್ಟಿ, ಮಾಜಿ ಉಪಮಹಾಪೌರ ಎಸ್.ಹರೀಶ್, ಮುಖಂಡರಾದ ನೆ.ಲ.ನರೇಂದ್ರಬಾಬು, ಕೆ.ವಿ.ರಾಜೇಂದ್ರಕುಮಾರ್, ಜಯರಾಂ, ಪುಟ್ಟರಾಜು, ವೆಂಕಟೇಶಮೂರ್ತಿ, ಪದ್ಮಾವತಿ ಶ್ರೀನಿವಾಸ, ಭಾಗ್ಯಜಕಾತಿ ಇನ್ನಿತರರು ಇದ್ದರು.