ಜಿಲ್ಲೆ

ನನ್ನ ತಾಳ್ಮೆಗೂ ಮಿತಿಯಿದೆ!

ಕೆಜಿಎಫ್; ತಾಳ್ಮೆಗೂ ಒಂದು ಮಿತಿ ಇದೆ, ನಾನು ಎಷ್ಟು ಒಳ್ಳೆಯತನದಿಂದ ನಡೆದುಕೊಳ್ಳುತ್ತೇನೋ ಅಲ್ಲಿಯವರೆಗೆ ಮಾತ್ರ ನಾನು ಒಳ್ಳೆಯವಳು, ತಾಳ್ಮೆ ಕಳೆದುಕೊಂಡರೆ ನಿಮ್ಮನ್ನು ಯಾರೂ ರಕ್ಷಿಸಲು ಸಾಧ್ಯವಿಲ್ಲ ಎಂದು ಶಾಸಕಿ ರೂಪಕಲಾ ಅವರು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ತಾಲೂಕು ಆಡಳಿತ ಸೌಧದಲ್ಲಿ ಹಮ್ಮಿಕೊಂಡಿದ್ದ ಕಂದಾಯ, ಆಹಾರ ಮತ್ತು ನಾಗರಿಕ ಸರಬರಾಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ವಿವಿಧ ಕೆಲಸ ಕಾರ್ಯಗಳಿಗೆಂದು ಪ್ರತಿನಿತ್ಯ ತಾಲೂಕು ಕಚೇರಿಗೆ ಬರುವ ಸಾರ್ವಜನಿಕರನ್ನು ನೌಕರರು ಮತ್ತು ಅಧಿಕಾರಿಗಳು ವಿನಾಕಾರಣ ಅಲೆದಾಡಿಸುವ ಪ್ರವೃತ್ತಿ ಕೂಡಲೇ ಬಿಡಬೇಕು, ಸಾರ್ವಜನಿಕರಿಗೆ ಇಂದು ಬಾ, ನಾಳೆ ಬಾ ಎಂದು ಹೇಳಿ ಕಳುಹಿಸುವುದಾದರೆ ನೀವು ಸರ್ಕಾರಿ ನೌಕರರಾಗಿ ಮುಂದುವರೆಯಲು ಅನ್​ಫಿಟ್​, ಸಾರ್ವಜನಿಕರಿಗೆ ಸಿಗಬೇಕಾದ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ಸಂಗತಿ ಪತ್ರಿಕೆಗಳಲ್ಲಿ ಸುದ್ದಿಯಾಗಿ ಪ್ರಚಾರವಾಗುತ್ತವೆ. ಕಚೇರಿಗೆ ಬರುವ ಮುನ್ನ ನಿಮ್ಮ ಕೌಟುಂಬಿಕ ವಿಚಾರಗಳನ್ನೆಲ್ಲ ಮನೆಯಲ್ಲಿಯೇ ಬಿಟ್ಟು, ನೀವು ಮಾಡುವ ಕೆಲಸಕ್ಕೆ ನ್ಯಾಯ ಒದಗಿಸುವ ಕಾರ್ಯ ಮಾಡಿ ಎಂದು ತಾಕೀತು ಮಾಡಿದರು.

ಭವ್ಯವಾದ ಕಚೇರಿಯನ್ನು ನಿಮಾರ್ಣ ಮಾಡಿದ್ದರೂ ಯಾವ ಸೇವೆ ಎಲ್ಲಿ ದೊರೆಯುತ್ತದೆ ಎಂದು ಮಾಹಿತಿ ನೀಡುವ ನಾಮಫಲಕಗಳು ಎಲ್ಲಿಯೂ ಕಾಣಿಸುತ್ತಿಲ್ಲ. ಯಾವ ಅಧಿಕಾರಿ ಯಾವ ಇಲಾಖೆಗೆ ಸೇರಿದ್ದಾರೆ ಎಂದು ಕಂಡುಹಿಡಿಯಲು ಸಾಧ್ಯವಿಲ್ಲ. ನಿಮ್ಮ ಇಲಾಖೆಗೆ ಸಂಬಂಧಿಸಿದ ಗುರುತಿನ ಚೀಟಿ ಕೊರಳಲ್ಲಿ ಹಾಕಿಕೊಳ್ಳಲು ಇರುವ ಸಮಸ್ಯೆಯಾದರೂ ಏನು?, ಸಾರ್ವಜನಿಕರಿಗೆ ಯಾವ ಸೇವೆ ಎಲ್ಲಿ ದೊರೆಯುತ್ತದೆ ಎಂದು ಗೊತ್ತಾಗದೇ ಕಚೇರಿಯ ಹೊರಗೆ ಟೀ, ಕಾಫಿ ಅಂಗಡಿಗಳ ಬಳಿ ಹೋಗಿ ಈ ಸೇವೆ ಎಲ್ಲಿ ಸಿಗುತ್ತದೆ ಎಂದು ಕೇಳಬೇಕಾದ ದುಸ್ಥಿತಿ ಎದುರಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ರೈತರಿಗೆ ತೊಂದರೆಯಾದ ಸಹಿಸಲ್ಲ

ಕ್ಷೇತ್ರದ ಬಡ ರೈತರಿಗೆ ವಿನಾಕಾರಣ ತೊಂದರೆ ನೀಡಿದರೆ, ಹಣಕ್ಕಾಗಿ ಪೀಡಿಸಿದರೆ ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವೇ ಇಲ್ಲ. ಅಂತಹವರಿಗೆ ನಾನು ಗೌರವವನ್ನು ನೀಡುವುದಿಲ್ಲ. ತಪ್ಪಿತಸ್ಥರನ್ನು ಹುಡುಕಿ ಅವರಿಗೆ ಯಾವ ರೀತಿ ಪರಿಹಾರ ಕಂಡುಕೊಳ್ಳಬೇಕೆಂಬುದು ಚೆನ್ನಾಗಿ ತಿಳಿದಿದೆ ಎಂದು

ಹಿರಿಯ ನಾಗರಿಕರ ಅಲೆಸಬೇಡಿ

ಅನಾರೋಗ್ಯದ ಹಿನ್ನೆಲೆಯಲ್ಲಿ ಪಡಿತರ ಚೀಟಿಗೆಂದು ಬರುವ ಹಿರಿಯ ನಾಗರಿಕರನ್ನು ವಿನಾಕಾರಣ ಕಚೇರಿಗೆ ಅಲೆದಾಡಿಸದೇ ಅವರು ಬಂದ ಕೂಡಲೇ ಅವರ ಕಷ್ಟಕ್ಕೆ ಸ್ಪಂದಿಸಿ ಎರಡು ಮೂರು ದಿನಗಳಲ್ಲಿ ಪಡಿತರ ಚೀಟಿ ಮಾಡಿಕೊಡುವ ಕೆಲಸವಾಗಬೇಕು. ಪಡಿತರ ಚೀಟಿಗಳ ಬಗ್ಗೆ ಗ್ರಾಮ ಆಡಳಿತಾಧಿಕಾರಿಗಳು, ಕಂದಾಯ ನಿರೀಕ್ಷಕರು, ಆಹಾರ ನಿರೀಕ್ಷಕರು ವ್ಯಾಪಕ ಪ್ರಚಾರ ನೀಡಿ, ನಿಜವಾಗಿಯೂ ಅವಶ್ಯ ಇರುವ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಸೌಲಭ್ಯ ತಲುಪಿಸುವ ಕೆಲಸ ಮಾಡಬೇಕೆಂದು ತಿಳಿಸಿದರು.

ರಾಜ್ಯಕ್ಕೆ ಕೆಜಿಎಫ್​ ಕ್ಷೇತ್ರದಲ್ಲಿ ಮಾದರಿಯಾಗಿರುವ ಅಂಗನವಾಡಿಗಳನ್ನು ನನ್ನ ಅನುದಾನದಲ್ಲಿ ಹಂತ ಹಂತವಾಗಿ ನಿರ್ಮಿಸುವ ಗುರಿ ಹೊಂದಲಾಗಿದೆ. ಮಕ್ಕಳಿಗೆ ನೀಡುವ ಆಹಾರದ ಶುಚಿತ್ವ ಕಾಪಾಡಲು ಕ್ರಮ ಕೈಗೊಳ್ಳಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಗೊತ್ತಿಲ್ಲದೇ ದಿಢೀರ್​ ಭೇಟಿ ನೀಡಿ ತಪಾಸಣೆ ಮಾಡಿ, ವರದಿ ಸಲ್ಲಿಸಬೇಕೆಂದು ಸಲಹೆ ನೀಡಿದರು.

ವಂಶವೃಕ್ಷ, ಜಾತಿ, ಆದಾಯ ಪ್ರಮಾಣ ಪತ್ರ, ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ಜಮೀನಿನ ಪಹಣಿ ದುರಸ್ತಿ, ಪಡಿತರ ಚೀಟಿ, ಗೃಹಲಕ್ಷಿ$್ಮ, ಅನ್ನಭಾಗ್ಯ ಸೇರಿ ಆಯಾ ಇಲಾಖೆಗೆ ಸಂಬಂಧಿಸಿದಂತೆ ಪ್ರತ್ಯೇಕ ರಿಜಿಸ್ಟರ್​ಗಳನ್ನು ನಿರ್ವಹಿಸುವಂತೆ ತಿಳಿಸಿದ ಅವರು, ಪ್ರತಿ ದಿನ ಎಷ್ಟು ಮಂದಿ ಯಾವ ಸೇವೆಗೆಂದು ಬಂದಿದ್ದಾರೆ, ಯಾವ ಅಧಿಕಾರಿ ಅಥವಾ ಸಿಬ್ಬಂದಿಯನ್ನು ಸಂಪರ್ಕಿಸಿದ್ದಾರೆ ಎಂಬುದನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದರು. ವಾರದಲ್ಲಿ ಎಷ್ಟು ಅರ್ಜಿಗಳು ಬಂದಿವೆ, ಎಷ್ಟು ಅರ್ಜಿಗಳ ವಿಲೇವಾರಿಯಾಗಿದೆ ಎಂಬ ವಿವರಗಳನ್ನು ನಮೂದಿಸಿ, ರಿಜಿಸ್ಟರ್​ ನಿರ್ವಹಣೆ ಕಡ್ಡಾಯವಾಗಿ ಮಾಡಬೇಕು. ಈ ರಿಜಿಸ್ಟರ್​ನ್ನು ತಾವಾಗಲೀ ಅಥವಾ ತಹಸೀಲ್ದಾರ್​ ಆಗಲಿ ಯಾವುದೇ ಸಮಯದಲ್ಲಿ ಪರಿಶೀಲಿಸುವುದಾಗಿ ತಿಳಿಸಿದರು.