ಹೊಳಲ್ಕೆರೆ: ರಾಜ್ಯದಲ್ಲಿ ಯಾವ ಸರ್ಕಾರ ಅಧಿಕಾರದಲ್ಲಿದೆ ಎನ್ನುವುದು ನನಗೆ ಮುಖ್ಯವಲ್ಲ. ಹಣ ತಂದು ಕ್ಷೇತ್ರ ಅಭಿವೃದ್ಧಿಪಡಿಸುವುದು ನನ್ನ ಪ್ರಥಮ ಆದ್ಯತೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಜನತೆಗೆ ಭರವಸೆ ನೀಡಿದರು.
ತಾಲೂಕಿನ ಮಲಸಿಂಗನಹಳ್ಳಿ ಗ್ರಾಮದಲ್ಲಿ ನೂತನ ಅಂಗನವಾಡಿ ಕೇಂದ್ರ ಉದ್ಘಾಟಿಸಿ ಹೈಟೆಕ್ ಶೌಚಾಲಯ ನಿರ್ಮಾಣ ಹಾಗೂ ಸಿ.ಸಿ. ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಸಿಕ್ಕಿರುವ ಅಧಿಕಾರಕ್ಕೆ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಸೇವೆ ಮಾಡಿದ್ದರ ಫಲವಾಗಿ ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಿಸಿದ್ದೀರಿ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗವುದು. ನಿಮ್ಮ ಸಹಕಾರ ಮುಖ್ಯ ಎಂದರು.
ಸಾರ್ವಜನಿಕರ ಬದುಕನ್ನು ಅರ್ಥ ಮಾಡಿಕೊಂಡು ಕೆಲಸ ಮಾಡುವ ರಾಜಕಾರಣಿ ನಾನು. ರಾಜಕಾರಣಿಗೆ ಯಾರೂ ಗೌರವ ಡಾಕ್ಟರೇಟ್ ಕೊಡುವುದಿಲ್ಲ. ಕಳ್ಳ, ಸುಳ್ಳ ಎಂದು ಬೈಯುವವರೇ ಜಾಸ್ತಿ. ಇಂತಹ ಪರಿಸ್ಥಿತಿಯಲ್ಲಿ ಕುವೆಂಪು ವಿಶ್ವವಿದ್ಯಾನಿಲಯ ನನ್ನ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಇದು ನನ್ನೊಬ್ಬನಿಗೆ ಸೇರಿದ್ದಲ್ಲ. ಕ್ಷೇತ್ರದ ಸಮಸ್ತ ಜನತೆಗೆ ಸಿಕ್ಕ ಗೌರವ ಎಂದು ಹೇಳಿದರು.
ತಾಳ್ಯ ಹೋಬಳಿಯಲ್ಲಿ ಮಳೆ ಕಡಿಮೆ ಎನ್ನುವುದನ್ನು ಗಮನದಲ್ಲಿಟ್ಟುಕೊಂಡು ಅಪ್ಪರ್ ಭದ್ರಾ ಕೆನಾಲ್ ತಂದು ಕೆರೆ ಕಟ್ಟೆಗಳನ್ನು ತುಂಬಿಸಿದ್ದೇನೆ. ಅಲ್ಲಿಂದ ಲಿಫ್ಟ್ ಮಾಡಲು ಒಂದೊಂದು 1030 ಎಚ್.ಪಿ.ಸಾಮರ್ಥ್ಯದ ಮೂರು ಮೋಟಾರ್‌ಗಳನ್ನು ಏಕ ಕಾಲಕ್ಕೆ ಸ್ಟಾರ್ಟ್ ಮಾಡಲಾಗುವುದು. ಈ ಭಾಗದ ಎಲ್ಲ ಕೆರೆ ಕಟ್ಟೆಗಳನ್ನು ತುಂಬಿಸಿರುವುದಲ್ಲದೆ ಗುಡ್ಡದ ಮೇಲೆ ಕೆರೆ ಕಟ್ಟಿಸಿ ಎಲ್ಲ ಬೋರ್‌ಗಳಲ್ಲಿ ನೀರಿನ ಮಟ್ಟ ಹೆಚ್ಚುವಂತೆ ಮಾಡಿದ್ದೇನೆ ಎಂದರು.
ರೈತರಿಗೆ ವಿದ್ಯುತ್ ಸಮಸ್ಯೆಯಾಗಬಾರದು ಎಂದು ಚಿಕ್ಕಜಾಜೂರಿನ ಕೋಟೆಹಾಳ್ ಸಮೀಪ 250 ಕೋಟಿ ರೂ.ವೆಚ್ಚದಲ್ಲಿ ವಿದ್ಯುತ್ ಸ್ಟೇಷನ್‌ಗೆ ಟೆಂಡರ್ ಕರೆಯಲಾಗಿದೆ. ಆ ಕೆಲಸ ಪೂರ್ಣಗೊಂಡರೆ ಇನ್ನು ಐವತ್ತು ಅರವತ್ತು ವರ್ಷಗಳ ಕಾಲ ವಿದ್ಯುತ್ ಸಮಸ್ಯೆ ಕಾಡುವುದಿಲ್ಲ. ಹದಿನೇಳುವರೆ ಕೋಟಿ ರೂ.ವೆಚ್ಚದಲ್ಲಿ ರಸ್ತೆ ಮಾಡಿಸಿದ್ದೇನೆ. ಕುಡಿಯುವ ನೀರು, ಕೆರೆ ಕಟ್ಟೆಗಳನ್ನು ತುಂಬಿಸುವುದು, ಶಾಲಾ-ಕಾಲೇಜು, ಆಸ್ಪತ್ರೆ ನಿರ್ಮಾಣ. ಯಾವುದೇ ಹಳ್ಳಿಗೆ ಹೋದರೂ ಯಾರಿಂದಲೂ ಹೇಳಿಸಿಕೊಳ್ಳದೆ ಕೆಲಸ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ ಎಂದು ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಯುವರಾಜ್, ಅಚ್ಯುತಪ್ಪ, ನಾಗೇಂದ್ರಪ್ಪ, ದಾಸಯ್ಯನಹಟ್ಟಿ ರಮೇಶ್, ಕುಬೇರಣ್ಣ, ಹೊರಕೇರಪ್ಪ, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.