ಚಳ್ಳಕೆರೆ: ಎಚ್.ಆಂಜನೇಯ ಸಚಿವರಾಗಿದ್ದ ಅವಧಿಯಲ್ಲಿ ಕ್ಷೇತ್ರಕ್ಕೆ ನೀಡಿದ ಅನುದಾನದಲ್ಲಿ ಎಸ್ಸಿ-ಎಸ್ಟಿ ಸೇರಿ ಇತರ ಸಮುದಾಯಗಳ ಭವನಗಳು, ಸಿಸಿ ರಸ್ತೆ ಸೌಲಭ್ಯ ಕಲ್ಪಿಸಲಾಯಿತು. ಅದೇ ರೀತಿ 2280 ಕೋಟಿ ರೂ. ವೆಚ್ಚದ ತುಂಗಭದ್ರಾ ಹಿನ್ನೀರು ಯೋಜನೆ ಜಾರಿ ಆಗಲು ಆಂಜನೇಯ ಅವರೆ ಕಾರಣ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ತಾಲೂಕು ಮಾದಿಗ ನೌಕರರ ಸಾಂಸ್ಕೃತಿಕ ಸಂಘ ನಗರದ ಅನಂತನಾಥ ಜೈನಭವನದಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಕ್ಷೇತ್ರದಲ್ಲಿ ನನ್ನ ಹ್ಯಾಟ್ರಿಕ್ ಗೆಲುವಿನಲ್ಲಿ ಸಮುದಾಯದ ಪಾತ್ರವಿದೆ. ನನ್ನ ರಾಜಕೀಯ ಅವಧಿಯಲ್ಲಿ ಎಸ್ಸಿ-ಎಸ್ಟಿ ಮತ್ತು ಇತರ ಸಮುದಾಯಗಳ ನಡುವೆ ದ್ವೇಷದ ರಾಜಕಾರಣ ಮಾಡಿಲ್ಲ. ಅಂತಹದ್ದು ಯಾರೇ ಮಾಡಿದರು ನಾವೆಲ್ಲರೂ ವಿರೋಧಿಸಬೇಕು ಎಂದರು.