ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಅವರು ನೂತನ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್‌ಗೆ ಅಧಿಕಾರ ಹಸ್ತಾಂತರಿಸಿದರು. ಆರ್.ಎಂ.ಮಂಜುನಾಥ ಗೌಡ, ಎಸ್.ಪಿ.ದಿನೇಶ್, ವಿಶ್ವನಾಥ ಕಾಶಿ, ಎಸ್.ರವಿಕುಮಾರ್ ಇದ್ದರು. 
ಜಿಲ್ಲೆ

ಕಾಂಗ್ರೆಸ್‌ನಿಂದ ನನ್ನ ಬೂತ್ ನನ್ನ ಜವಾಬ್ದಾರಿ

ನವೀನ ಬಿ.ಎಂ

ಶಿವಮೊಗ್ಗ: ಚುನಾವಣೆಯನ್ನು ಬರೀ ಮಾತಿನಲ್ಲಿ ಮಾಡಿದರೆ ಪ್ರಯೋಜನವಿಲ್ಲ. ಜನರ ಮಧ್ಯೆ ನಾವೆಲ್ಲರೂ ಹೋಗಬೇಕಿದೆ. ಈ ಬಾರಿ ನನ್ನ ಬೂತ್ ನನ್ನ ಜವಾಬ್ದಾರಿ ಘೋಷವಾಕ್ಯದೊಂದಿಗೆ ಚುನಾವಣೆ ಎದುರಿಸುತ್ತಿದ್ದು, ಮೊದಲು ನಮ್ಮ ವಾರ್ಡ್ ಮತ್ತು ಬೂತ್‌ಗಳಲ್ಲಿ ಮತಗಳನ್ನು ಗಟ್ಟಿ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಆರ್.ಪ್ರಸನ್ನಕುಮಾರ್ ಕಾರ್ಯಕರ್ತರಿಗೆ ಸಲಹೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಿಕಟಪೂರ್ವ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಅವರಿಂದ ಅಧಿಕಾರ ಸ್ವೀಕರಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ಸುಳ್ಳುಗಳನ್ನು ಹಾಗೂ ರಾಜ್ಯ ಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷನಾಗಿ ನಾನೊಬ್ಬನೇ ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲ, ಎಲ್ಲರ ಸಹಕಾರ ಮುಖ್ಯ. ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದ್ದು, ಹೆಚ್ಚು ಸೀಟುಗಳನ್ನು ಗೆಲ್ಲಿಸಬೇಕಿದೆ. ಲೋಕಸಭೆ ಚುನಾವಣೆ 35 ದಿನ ಬಾಕಿ ಇರುವುದರಿಂದ ಸಮರೋಪಾದಿಯಲ್ಲಿ ಪ್ರಚಾರ ನಡೆಸಿ ಗೀತಾ ಶಿವರಾಜ್‌ಕುಮಾರ್ ಅವರನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಕೈ ಬಲಪಡಿಸಬೇಕು ಎಂದರು.
ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಮೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ನಾಗರಾಜ್ ಗೌಡ ಮಾತನಾಡಿದರು. ಕಾಂಗ್ರೆಸ್ ನಿಕಟಪೂರ್ವ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್, ಕೆಪಿಸಿಸಿ ಸಹಕಾರ ವಿಭಾಗದ ಸಂಚಾಲಕ ಆರ್.ಎಂ.ಮಂಜುನಾಥ ಗೌಡ, ಎಐಸಿಸಿ ಸದಸ್ಯೆ ಬಲ್ಕಿಷ್ ಬಾನು, ಮುಖಂಡರಾದ ವಿಶ್ವನಾಥ ಕಾಶಿ, ಎಸ್.ಪಿ.ದಿನೇಶ್, ಶ್ರೀನಿವಾಸ್ ಕರಿಯಣ್ಣ, ಮಧುಸೂದನ್, ಎಚ್.ಪಿ.ಗಿರೀಶ್ ಉಪಸ್ಥಿತರಿದ್ದರು.