ಜಿಲ್ಲೆ

ನೈಸರ್ಗಿಕ ಸಂರಕ್ಷಣೆಗೆ ಜನಾಂದೋಲನವಾಗಲಿ ; ಶಾಸಕ ವೀರಭದ್ರಯ್ಯ ಹೇಳಿಕೆ

Tumakuru

ಮಧುಗಿರಿ: ಮುಂದಿನ ಪೀಳಿಗೆಗೆ ಪರಿಸರ ಉಳಿಸುವುದು ಎಲ್ಲರ ಜವಾಬ್ದಾರಿಯಾಗಬೇಕು. ನೈಸರ್ಗಿಕ ಸಂರಕ್ಷಣೆಗೆ ಜನಾಂದೋಲನ ಆಗಬೇಕು ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.

ದೊಡ್ಡೇರಿ ಹೋಬಳಿ ಬೋರಾಗುಂಟೆ ಗಿಡದಾಗಲಹಳ್ಳಿಯಲ್ಲಿ ತುಮಕೂರು ವಿಜ್ಞಾನ ಕೇಂದ್ರ ಮತ್ತು ಗಾಂಧಿ ಸಹಜ ಬೇಸಾಯ ಆಶ್ರಮದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಹಜ ಶ್ರಮದಾನ ಮತ್ತು ಗಿಡನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಳೆಯನ್ನೆ ನಂಬಿ ವ್ಯವಸಾಯ ಮಾಡುತ್ತಿದ್ದು, ಇತ್ತೀಚೆಗೆ ಮಳೆ ಸಮಯಕ್ಕೆ ಬಾರದೆ ಅಂತರ್ಜಲ ಮಟ್ಟ ಕಡಿಮೆಯಾಗುತ್ತದೆ. ಸಾವಿರ ಅಡಿ ಕೊಳವೆ ಬಾವಿ ಕೊರೆದರೂ ನೀರು ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಡು ಬೆಳೆಸಿ ಪರಿಸರ ಉಳಿಸಬೇಕು ಎಂದರು.

ಜಿಪಂ ಸಿಒಇ ವಿದ್ಯಾಕುಮಾರಿ ಮಾತನಾಡಿ, ಪ್ರಕೃತಿ ಅಸಮತೋಲನದಿಂದ ಅತಿವೃಷ್ಟಿ, ಅನಾವೃಷ್ಟಿಯಾಗುತ್ತಿದೆ. ಇದನ್ನು ತಡೆಯಲು ಹೆಚ್ಚು ಅರಣ್ಯ ಬೆಳೆಸಿ ಉಳಿಸಬೇಕು. ಗ್ರಾಮೀಣ ಮಹಿಳೆಯರಿಂದ ಕೃಷಿ ಉಳಿದಿದ್ದು, ಸಂತಸದ ವಿಚಾರ. ಅಂತರ್ಜಲ ಮರುಪೂರಣ, ಸಸಿ ನೆಡುವ ಕಾರ್ಯಕ್ರಮ, ಇಂಗುಗುಂಡಿ, ಕೃಷಿಹೊಂಡ ನಿರ್ಮಾಣ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಅಂತರ್ಜಲ ಹೆಚ್ಚಿಸಬಹುದು. ಅಭಿವೃದ್ಧಿ ಹೆಸರಿನಲ್ಲಿ ಬೆಟ್ಟಗುಡ್ಡಗಳು ಕರಗುತ್ತಿದ್ದರಿಂದ ಪ್ರಕೃತಿ ನಾಶವಾಗುತ್ತಿದೆ. ಮುಂದಿನ ತಲೆಮಾರಿಗೆ ಪರಿಸರ ಉಳಿಸಬೇಕು ಎಂದರು.

ಸಂಯುಕ್ತ ಜನತಾದಳದ ಅಧ್ಯಕ್ಷ ಮಹಿಮಾಪಟೇಲ್ ಮಾತನಾಡಿ, ಸಹಜ ಬೇಸಾಯಕ್ಕೆ ಒತ್ತುಕೊಡಬೇಕು. ಭವಿಷ್ಯದ ಯೋಚನೆಂದ ಪರಿಸರವನ್ನು ರಕ್ಷಿಸಬೇಕು ಎಂದರು.

ಬೋರಾಗುಂಟೆ ಗಿಡದಾಗಲಹಳ್ಳಿಯಲ್ಲಿ ಕೆರೆಯಂಗಳದಲ್ಲಿ 1500 ಗಿಡಗಳನ್ನು ನೆಡಲಾಯಿತು. ಎಪಿಎಂಸಿ ಸದಸ್ಯ ಬಸವರಾಜು, ರೈತಸಂದ ಲಕ್ಷ್ಮೀ ನಾರಾಯಣ ಗೌಡ, ಗಂಗಾಧರ್, ಗ್ರಾಪಂ ಅಧ್ಯಕ್ಷೆ ಜ್ಯೋತಿ, ಉಪಾಧ್ಯಕ್ಷ ರಂಗನಾಥ್, ಸದಸ್ಯರಾದ ರು, ನಾಗೇಶ್, ಪ್ರಶಾಂತ್, ಪಿಡಿಒ ಚಿಕ್ಕನರಸಯ್ಯ, ತುಮಕೂರು ವಿಜ್ಞಾನ ಕೇಂದ್ರ ಹಾಗೂ ಗಾಂಧಿ ಸಹಜ ಬೇಸಾಯ ಆಶ್ರಮದ ಸದಸ್ಯ ಯತಿರಾಜ್, ಮಲ್ಲಿಕಾ ಬಸವರಾಜ್ ಇದ್ದರು.

ಸುವರ್ಣಮುಖಿ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡುತ್ತಿದ್ದು, ಅಂತರ್ಜಲ ಮಟ್ಟ ಹೆಚ್ಚಿ ನೀರಿನ ಅಭಾವ ಕಡಿಮೆಯಾಗುತ್ತದೆ. ಕಂಪ್ಯೂಟರ್‌ಗಳು ಅನ್ನ ಕೊಡುವುದಿಲ್ಲ. ಅನ್ನ ನೀಡುವ ರೈತರನ್ನು ಕಾಪಾಡಬೇಕು. ಸಾವಯವ ವ್ಯವಸಾಯಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಮಾಡುವ ಮೂಲಕ ರೈತರಲ್ಲಿ ಅರಿವು ಮೂಡಿಸಿ ಪರಿಸರದ ಜತೆಗೆ ರೈತರನ್ನೂ ರಕ್ಷಿಸಬಹುದು. ಎಂ.ವಿ.ವೀರಭದ್ರಯ್ಯ ಶಾಸಕ