ಜಿಲ್ಲೆ

ಮಣೆ ಹೊಡೆದ ಡಿಸಿ ಪೈರು ಎಳೆದ ಎಸ್ಪಿ: ನಾಟಿ ಮಾಡಿದ ನಿಶ್ಚಲಾನಂದನಾಥ ಸ್ವಾಮೀಜಿ

ಮಂಡ್ಯ: ತಲೆಗೆ ಟವಲ್ ಸುತ್ತಿಕೊಂಡು ಮಣೆ ಹೊಡೆದ ಜಿಲ್ಲಾಧಿಕಾರಿ ಡಾ.ಕುಮಾರ, ಇನ್ನೊಂದೆಡೆ ಹಲುಬೆ ಹೊಡೆದು ಪೈರು ಎಳೆದ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಯುವಕರು ನಾಚುವಂತೆ ಅರ್ಧ ಗಂಟೆಗೂ ಹೆಚ್ಚು ಕಾಲ ಭತ್ತದ ನಾಟಿ ಮಾಡಿದ ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ, ಇದರ ನಡುವೆ ಮುಗಿಲು ಮುಟ್ಟಿದ ಐಟಿ ಉದ್ಯೋಗಿಗಳ ಸಂಭ್ರಮ.

ತಾಲೂಕಿನ ಆಲಕೆರೆ ಗ್ರಾಮದಲ್ಲಿ ಇಂತಹದೊಂದು ವಿಶೇಷ ದೃಶ್ಯ ಕಂಡಿತ್ತು. ಗ್ರಾಮದ ರೈತರ ಶಾಲೆಯಿಂದ ಆಯೋಜಿಸಿದ್ದ ‘ಮುಯ್ಯಳು ಸಂಸ್ಕೃತಿ ಉತ್ಸವ’ ಹೊಸತನಕ್ಕೆ ನಾಂದಿಯಾಡಿತು. ಮಾತ್ರವಲ್ಲದೆ ಸ್ವಾಮೀಜಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು, ಐಟಿ ಉದ್ಯೋಗಿಗಳು ಇಡೀ ದಿನ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು ಯುವಪೀಳಿಗೆಗೆ ಸ್ಪೂರ್ತಿ ತುಂಬಿತು.

ಕೃಷಿ ಚಟುವಟಿಕೆಗೆ ಕೂಲಿಯಾಳುಗಳ ಸಮಸ್ಯೆ ತಲೆದೋರಿದೆ. ಇದರಿಂದಾಗಿ ನಾಟಿ ಹಾಕಲು ರೈತರು ಪರದಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ರೈತರ ಶಾಲೆಯಿಂದ ‘ನೆಲದ ನಂಟು’ ಶೀರ್ಷಿಕೆಯಡಿ ಭತ್ತದ ನಾಟಿ ಹಾಕುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ವರ್ಷಪೂರ್ತಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವ ರೈತರೊಂದಿಗೆ ಸಹಕಾರ ನೀಡುವ ಉದ್ದೇಶದಿಂದ ಮುಯ್ಯಳು ಕಾರ್ಯಕ್ರಮ ನಡೆಯಿತು.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಎಸ್ಪಿ, ಸ್ವಾಮೀಜಿ ಹಾಗೂ ಸಂಪೂರ್ಣ ಕೃಷಿ ವಿಶ್ವವಿದ್ಯಾನಿಲಯದ 50 ವಿದ್ಯಾರ್ಥಿಗಳು, ಕನ್ನಡ ಮನಸ್ಸುಗಳು ಕರ್ನಾಟಕ ತಂಡ, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್, ಕೆಂಪೇಗೌಡ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ, ಗ್ರಾಮಸ್ಥರು ನಾಟಿ ಹಾಕುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮುಯ್ಯಳು ಸಂಸ್ಕೃತಿ ಉತ್ಸವ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಂತಸ ಮನೆ ಮಾಡಿತ್ತು. ಅದರಂತೆ ಪಕ್ಕಾ ಗ್ರಾಮೀಣ ಶೈಲಿಯ ಬಟ್ಟೆ ಧರಿಸಿ ನಾಟಿಯಲ್ಲಿ ಪಾಲ್ಗೊಂಡರು. ಸುಮಾರು ಮೂರು ಎಕರೆ ಜಮೀನಿನಲ್ಲಿ ಭತ್ತದ ನಾಟಿ ಮಾಡುವ ಕಾರ್ಯ ಯಶಸ್ವಿಯಾಗಿ ನಡೆಯಿತು. ಆಗಮಿಸಿದ್ದವರಿಗೆ ಗ್ರಾಮೀಣ ಶೈಲಿಯ ಊಟ ಸಿದ್ಧಪಡಿಸಲಾಗಿತ್ತು. ಸೊಪ್ಪಿನ ಸಾರು, ಎರಡು ರೀತಿ ಪಲ್ಯ, ಪಾಯಸ, ಅನ್ನ ಮಾಡಿಸಲಾಗಿತ್ತು.

ಯಾಚೇನಹಳ್ಳಿ ರಾಮಕೃಷ್ಣ ಆಶ್ರಮದ ನಾದಾನಂದನಾಥ ಸ್ವಾಮೀಜಿ, ಟ್ರಸ್ಟ್ ಸತ್ಯಮೂರ್ತಿ, ಆರ್.ಜಗದೀಶ್, ಎಂ.ಎನ್.ನವೀನ್‌ಕುಮಾರ್, ಚಂದ್ರಶೇಖರ್, ಧರ್ಮರಾಜ್, ನಂದೀಶ್, ಎ.ಎಸ್.ಚಂದ್ರು, ಮಹೇಶ್, ಚೇತನ್, ಪ್ರದೀಪ್‌ಕುಮಾರ್, ಮಂಜು, ಎ.ಎಸ್.ಚಂದ್ರಶೇಖರ್ ಇತರರಿದ್ದರು.

ಮಾದರಿಯಾದ ಐಟಿ ಉದ್ಯೋಗಿಗಳು

ಮುಯ್ಯಳು ಸಂಸ್ಕೃತಿ ಉತ್ಸವದಲ್ಲಿ ಭಾಗಿಯಾಗುವಂತೆ ನೀಡಿದ ಆಹ್ವಾನಕ್ಕೆ ಪ್ರೀತಿಯಿಂದ ಆಗಮಿಸಿದ್ದ 50ಕ್ಕೂ ಹೆಚ್ಚು ಐಟಿ ಉದ್ಯೋಗಿಗಳು ಶನಿವಾರವೇ ಗ್ರಾಮಕ್ಕೆ ಆಗಮಿಸಿದ್ದರು. ಮಾತ್ರವಲ್ಲದೆ ಗ್ರಾಮದ ರಸ್ತೆ ಬದಿ 250ಕ್ಕೂ ಹೆಚ್ಚು ಗಿಡ ನೆಟ್ಟು ಮಾದರಿಯಾದರು. ಜತೆಗೆ ಭಾನುವಾರ ನಾಟಿಯಲ್ಲಿ ಖುಷಿಯಿಂದ ಪಾಲ್ಗೊಂಡರು. ಸಂಜೆವರೆಗೂ ಜಮೀನಿನಲ್ಲಿ ಕೆಲಸ ಮಾಡಿ ನಂತರ ಬೆಂಗಳೂರಿಗೆ ತೆರಳಿದರು.

ಕರ್ನಾಟಕದ ಕೀರ್ತಿ ಎಂದ ಡಾ.ಕುಮಾರ

ಮುಯ್ಯಳು ಸಂಸ್ಕೃತಿ ಉತ್ಸವದಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ರೈತರಿಗಾಗಿ ತೆರೆದ ದೇಶದಲ್ಲಿಯೇ ಮೊದಲ ಶಾಲೆ ನಮ್ಮ ಜಿಲ್ಲೆಯಲ್ಲಿದೆ. ಇದು ಕರ್ನಾಟಕಕ್ಕೆ ಕೀರ್ತಿಯಂತಾಗಿದೆ. ಶಾಲೆಯಿಂದ ವಿಭಿನ್ನ ಚಟುವಟಿಕೆ ಮಾಡಲಾಗುತ್ತಿದೆ. ಅವುಗಳನ್ನು ಮುಂದುವರೆಸಿಕೊಂಡು ಹೋಗಬೇಕು. ರೈತರು ಒಳ್ಳೆಯ ಮನಸ್ಸಿನವರು. ಆದಾಗ್ಯೂ ಅವರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಕೃಷಿಯಲ್ಲಿ ಸಾಕಷ್ಟು ಅಡೆತಡೆಗಳಿವೆ. ಅವರಿಗೆ ನೆರವಾಗುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಿರುವುದು ಮೆಚ್ಚುಗೆಯ ವಿಷಯ. ಮುಯ್ಯಳು ಸಂಸ್ಕೃತಿ ವಿಶೇಷ ಆಚರಣೆ. ಶಾಲೆಯಿಂದ ನಡೆಯುವ ರೈತಪರ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದ ಬೆಂಬಲವಿರಲಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ನಾನು ಕೂಡ ಕೃಷಿ ಕುಟುಂಬದಿಂದ ಬಂದವನು. ಹಿಂದೆ ಕಬ್ಬು ಕಟಾವು ಮಾಡಲು, ಲಾರಿಗೆ ತುಂಬುವ ಕೆಲಸ ಮಾಡುತ್ತಿದೆ. ರೈತರ ಶಾಲೆ ಮಾದರಿಯಾಗಿದೆ. ಪ್ರತಿ ಗ್ರಾಮದಲ್ಲಿಯೂ ಇಂತಹ ಶಾಲೆ ಪ್ರಾರಂಭವಾಗಲಿ. ಇದರಿಂದ ರೈತರಿಗೆ ಉಪಯೋಗವಾಗಲಿದೆ. ರೈತರು ಚೆನ್ನಾಗಿದ್ದರೆ ಇಡೀ ದೇಶವೇ ಚೆನ್ನಾಗಿರುತ್ತದೆ ಎಂದು ಹೇಳಿದರು.

ಕೆಂಗೇರಿ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ಎರಡು ತಿಂಗಳ ಹಿಂದೆ ಶಾಲೆ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದೆ. ಎಲ್ಲರೂ ಸಹಕಾರ ನೀಡಿದರೆ ಭವಿಷ್ಯದಲ್ಲಿ ದೇಶಕ್ಕೆ ರೈತರ ಶಾಲೆ ಮಾದರಿಯಾಗಲಿದೆ. ಏನೇ ಶುರುವಾದರೂ ಮಂಡ್ಯದಿಂದಲೇ ಆಗುತ್ತದೆ. ಮುಂದೆ ರಾಷ್ಟ್ರಮಟ್ಟಕ್ಕೆ ಬೆಳೆಯುತ್ತದೆ. ಅದೇ ರೀತಿ ರೈತರ ಶಾಲೆ ದೇಶಕ್ಕೆ ಮಾದರಿಯಾಗಲಿ ಎಂದರು.