ಜಿಲ್ಲೆ

ಕಣ್ಮನ ಸೆಳೆಯುವ ಮುತ್ಯಾಲಮಡು ಜಲಪಾತ

Bengaluru Rural

ವಿಜಯವಾಣಿ ಸುದ್ದಿಜಾಲ ಆನೇಕಲ್
ಮಳೆಯಿಂದಾಗಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಮುತ್ಯಾಲಮಡುವಿನಲ್ಲಿ ನೀರಿನ ಭೋರ್ಗರೆತ ಹೆಚ್ಚಾಗಿದೆ.
ಹಲವು ದಿನಗಳಿಂದ ಬಿಟ್ಟೂಬಿಡದೆ ಮಳೆಯಿಂದಾಗಿ ಮುತ್ಯಾಲಮಡು ಜಲಪಾತದಲ್ಲಿ ರಮಣೀಯ ದೃಶ್ಯ ನಿರ್ಮಾಣವಾಗಿದ್ದು, ನೀರು ಧಮ್ಮಿಕ್ಕುವುದನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರ ದಂಡೆ ಹರಿದು ಬರುತ್ತಿದೆ.


ಹಚ್ಚ ಹಸಿರಿನ ಪ್ರಕೃತಿಯ ನಡುವೆ ಇರುವ ಮುತ್ಯಾಲಮಡುವಿಗೆ ಜೀವ ಕಳೆಬಂದಿದ್ದು, ಜಲಪಾತದ ಸಮೀಪ ಬರುತ್ತಿದ್ದಂತೆ ಜುಳು ಜುಳು ನೀರಿನ ಶಬ್ದ, ಬಂಡೆಗಳ ಮೇಲಿನಿಂದ ಬೀಳುವ ನೀರಿನ ಜರಿಯನ್ನು ಕಂಡು ಪ್ರವಾಸಿಗರು ಪುಳಕಿತರಾಗಿದ್ದಾರೆ.


ಮುತ್ಯಾಲಮಡುವಿನಲ್ಲಿ ನೂರಾರು ಅಡಿಗಳಿಂದ ಎರಡು ಕಡೆ ಜಲಪಾತ ಸೃಷ್ಟಿಯಾಗಿದೆ. ಜಲಧಾರೆ ಭೋರ್ಗರೆಯುವ ದೃಶ್ಯ ಪ್ರವಾಸಿಗರನ್ನು ಸೆಳೆಯುತ್ತದೆ. ಹಾಗೆಯೇ ಬೋಟಿಂಗ್ ಹಾಗೂ ಮಕ್ಕಳು ಆಟವಾಡಲು ಪಾರ್ಕ್ ವ್ಯವಸ್ಥೆ ಇದ್ದು ಒಂದು ದಿನದ ಪ್ರವಾಸಕ್ಕೆ ಉತ್ತಮ ಸ್ಥಳವಾಗಿದೆ ಎನ್ನತ್ತಾರೆ ಪ್ರವಾಸಿಗರಾದ ಗೀತಾ.
ಬೆಂಗಳೂರು ನಗರದ ಸಮೀಪವಿರುವ ಮುತ್ಯಾಲಮಡು ಪ್ರವಾಸಿ ತಾಣ ಪ್ರವಾಸಕ್ಕೆ ಹೇಳಿ ಮಾಡಿಸಿದ ಜಾಗ. ನೂರಾರು ಅಡಿಗಳ ಬೆಟ್ಟದ ಮೇಲಿಂದ ಮುತ್ತಿನ ರೀತಿಯಲ್ಲಿ ಧುಮಿಕ್ಕುವ ಜಲಪಾತದ ಸೌಂದರ್ಯ ವರ್ಣಿಸಲು ಅಸಾಧ್ಯ. ಎಲ್ಲರೂ ಜಲಧಾರೆಯ ಸೊಬಗನ್ನು ಕಣ್ತುಂಬಿಕೊಳ್ಳಬೇಕು ಎನ್ನುತ್ತಾರೆ ಪ್ರವಾಸಿಗ ವಿಜೇತ್.