ಜಿಲ್ಲೆ

ಕುಶಾಲನಗರದಲ್ಲಿ ಮುತ್ತಪ್ಪ ವೆಳ್ಳಾಟಂ

ಸುನಿಲ್ ಪೊನ್ನೇಟಿ

ಕುಶಾಲನಗರ:

ಇಲ್ಲಿನ ಬೈಚನಳ್ಳಿಯ ಯೋಗಾನಂದ ಬಡಾವಣೆಯ ಕಾವೇರಿ ನದಿ ತಟದಲ್ಲಿರುವ ಶ್ರೀ ಮುತ್ತಪ್ಪ ಸ್ವಾಮಿ ದೇವಾಲಯದಲ್ಲಿ ಶನಿವಾರದಿಂದ ಆರಂಭವಾಗಿರುವ ತೆರೆ ಮಹೋತ್ಸವಕ್ಕೆ ಬೆಳಗ್ಗೆ ಗಣಪತಿ ಹೋಮ ಹಾಗೂ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ವಿಭಿನ್ನತೆಯಲ್ಲಿ ಏಕತೆ ಎಂಬ ಸಾಮರಸ್ಯದ ಸಂದೇಶ ಸಾರುವ ಹಿನ್ನೆಲೆಯಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ವಿವಿಧ ಸಮಾಜಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ನಗರದಲ್ಲಿ ಇರುವ ವಿವಿಧ ದೇವಾಲಯಗಳ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಮಧ್ಯಾಹ್ನ 2 ಗಂಟೆಗೆ ಮುತ್ತಪ್ಪನ್ ಮಲೈ ಇರಕ್ಕಲ್, ಸಂಜೆ 4 ಗಂಟೆಗೆ ಮುತ್ತಪ್ಪನ್ ವೆಳ್ಳಾಟಂ ನಡೆಯಿತು. ಸಂಜೆ 5 ಗಂಟೆಗೆ ಅಯ್ಯಪ್ಪ ದೇವಸ್ಥಾನದಿಂದ ಊರಿನ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪಗಳ ಅಲಂಕಾರದಿAದ ಕೇರಳದ ಪ್ರಖ್ಯಾತ ಚಂಡೆ ವಾದಕರ ವಾದ್ಯ ಘೋಷದೊಂದಿಗೆ ನೂರಾರು ಮಹಿಳೆಯರು ,ಮಕ್ಕಳು ಜ್ಯೋತಿ ಬೆಳಗಿಸಿಕೊಂಡು ಮೆರವಣಿಗೆಯಲ್ಲಿ ಸಾಗಿ ದೇವಾಲಯಕ್ಕೆ ಆಗಮಿಸಿದರು.

ರಾತ್ರಿ ಅನ್ನದಾನ ಪ್ರಸಾದವನ್ನು ಸೇರಿದ್ದ ಭಕ್ತರು ಸ್ವೀಕರಿಸಿದರು. ರಾತ್ರಿ 8 ಗಂಟೆಯಿAದ 11 ಗಂಟೆಯವರೆಗೆ ಸ್ಥಳೀಯ ಕಲಾವಿದರು ಮತ್ತು ಮಕ್ಕಳಿಂದ ದೇವಾಲಯದ ಸಾಂಸ್ಕೃತಿಕ ವೇದಿಕೆಯಲ್ಲಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು, ರಾತ್ರಿ 11 ಗಂಟೆಗೆ ಕಳಿಗ ಪಾಟು, 12 ಗಂಟೆಗೆ ಕಳಸ ಆಗಮನವಾಯಿತು.

ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮತ್ತು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ದೇವಾಲಯಕ್ಕೆ ಭೇಟಿ ನೀಡಿ ಮುತ್ತಪ್ಪ ಸ್ವಾಮಿ ಆಶೀರ್ವಾದ ಪಡೆದುಕೊಂಡರು. ತೆರೆ ಮಹೋತ್ಸವದಲ್ಲಿ ಕುಶಾಲನಗರ ಹಾಗೂ ಸುತ್ತ ಮುತ್ತ ಗ್ರಾಮಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಶ್ರೀ ಮುತ್ತಪ್ಪ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ವರದ, ಟ್ರಸ್ಟ್ ಪದಾಧಿಕಾರಿಗಳು ಮತ್ತು ದೇವಾಲಯ ಸಮಿತಿಯ ಸದಸ್ಯರುಗಳು ಇದ್ದರು.

ಭಾನುವಾರವೂ (ಫೆ.16) ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.