ಜಿಲ್ಲೆ

ಹೇಮೆ ನೀರಿಗಾಗಿ ಮಠಾಧ್ಯಕ್ಷರಿಂದ 20ರಂದು ಹೋರಾಟ

 ಮಾಗಡಿ:ಹೇಮಾವತಿ ನೀರಿಗಾಗಿ ಆಗ್ರಹಿಸಿ ಜೂ.20ರಂದು ವಿಧಾನಸೌಧದ ಮುಂಭಾಗ ಎಲ್ಲ ಮಠಾಧ್ಯಕ್ಷರು ಉಪವಾಸ  ಸತ್ಯಾಗ್ರಹ ಮಾಡುವುದಾಗಿ ಗುಮ್ಮಸಂದ್ರ ರುದ್ರಮುನೇಶ್ವರ ಮಠದ ಶ್ರೀ ಡಾ.ಚಂದ್ರಶೇಖರ ಸ್ವಾಮೀಜಿ ಹೇಳಿದರು.

ತಾಲೂಕಿನ ಗುಮ್ಮಸಂದ್ರ ರುದ್ರಮುನೇಶ್ವರ ಮಠದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,

ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯ ಪ್ರವೇಶಿಸಿ ತುಮಕೂರಿನ ಶಾಸಕರನ್ನು ಕರೆದು ಸಮಾಧಾನ ಪಡಿಸಿ ಹೇಮಾವತಿ ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್​ ಯೋಜನೆಯನ್ನು ಸೌಹಾರ್ಧತೆಯಿಂದ ಬಗೆಹರಿಸಬೇಕು. ತುಮಕೂರಿನ ಜನ ಹೋರಾಟ ಮಾಡಿದಂತೆ ತಾಲೂಕಿನ ಜನತೆ ಹೋರಾಟ ಮಾಡಿದರೆ ಮಾತ್ರ ನೀರು ಧಕ್ಕಲು ಸಾಧ್ಯ. ಸರ್ಕಾರ ಎಚ್ಚೆತ್ತು ನಮ್ಮ ಪಾಲಿನ ನೀರು ನೀಡಬೇಕು ಎಂದರು.

ತುಮಕೂರು, ಗುಬ್ಬಿ ತಾಲೂಕಿಗೆ ಹಂಚಿಕೆಯಾದ ನೀರು ನಮಗೆ ಬೇಡ, ನಮಗೆ ಹಂಚಿಕೆಯಾದ ಮುಕ್ಕಾಲು ಟಿಎಂಸಿ ನೀರನ್ನು ನಮಗೆ ಕೊಡಲಿ. ಒಂದು ತಾಲೂಕಿನ ನೀರನ್ನು ಕಿತ್ತುಕೊಂಡು ನಮ್ಮ ತಾಲೂಕಿಗೆ ನೀರು ತರುವ ಉದ್ದೇಶ ನಮಗಿಲ್ಲ. ನಾವು ಪಾಕಿಸ್ತಾನದವರಲ್ಲ, ನಮಗೆ ಕುಡಿಯಲು ನೀರು ಕೊಡಲಿ.

ಎತ್ತಿನಹೊಳೆ, ಕೃಷ್ಣ, ಹೇಮಾವತಿ ನೀರಾವರಿ ಯೋಜನೆ ತುಮಕೂರಿನ ಜಿಲ್ಲೆಗೆ ಬೇಕು ಎನ್ನುವುದಾದರೆ ನಮ್ಮ ತಾಲೂಕಿಗೆ ನೀರು ಬೇಡವೆ. ಇದು ನಮಗೆ ಶಾಪವೇ, ತುಮಕೂರಿನ ಶಾಸಕರು ನೀರಿಗಾಗಿ ರಾಜಕೀಯ ಮಾಡಬೇಡಿ. ಹಾಸನ ಜಿಲ್ಲೆಯ ರೈತರು ಹೇಮಾವತಿ ನೀರು ಬಿಡದಿದ್ದರೆ ತುಮಕೂರಿನವರು ಎನುಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಕುಡಿಯಲು ನೀರು ಕೊಟ್ಟು ಮಾನವಿಯತೆ ಮೆರೆಯಿರಿ. ಅದನ್ನು ಬಿಟ್ಟು ತುಮಕೂರಿನ ಶಾಸಕರು, ಮಾಜಿ ಶಾಸಕರು ರೈತರನ್ನು ಎತ್ತಿಕಟ್ಟುವ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು.

ತಾಲೂಕಿನಲ್ಲಿರುವ ತಿಪ್ಪಗೊಂಡನಹಳ್ಳಿ, ಮಂಚನಬೆಲೆ, ವೈಜಿ ಗುಡ್ಡ ಜಲಾಶಯಗಳ ನೀರು ಬೇರೆ ತಾಲೂಕಿಗೆ ಹೋಗುತ್ತಿದೆ. ಇದರಿಂದ ನಮಗೆ ಅನುಕೂಲ ಇಲ್ಲದಂತಾಗಿದೆ ಎಂದರು.

ರಾಜ್ಯ ಕಟ್ಟಡ ಮತ್ತು ಅಸಂಟತ ಕಾರ್ಮಿಕ ಒಕ್ಕೂಟದ ಅಧ್ಯಕ್ಷ ಡಾ.ಪ್ರಸನ್ನಗೌಡ ಮಾತನಾಡಿ, ಹೇಮಾವತಿ ನೀರು ನಮ್ಮ ಹಕ್ಕು. ತುಮಕೂರಿನವರು ನಮ್ಮ ತಾಳ್ಮೆ ಪರೀಸಬೇಡಿ, ನಮಗೆ ನೀಡಬೇಕಾದ ನೀರನ್ನು ಕೊಡಿ ಎಂದು ತಾಳ್ಮೆಯಿಂದ ಕೇಳುತ್ತಿದ್ದೇವೆ. ನಮ್ಮ ಪಾಲಿನ ನೀರನ್ನು ನಮಗೆ ನೀಡದಿದ್ದರೆ ಪ್ರಾಣ ಕೊಟ್ಟಾದರೂ ನೀರನ್ನು ಪಡೆಯುತ್ತೇವೆ ಎಂದರು.

ಜಿಲ್ಲಾಧ್ಯಕ್ಷ ಆನಂದ್​, ರೂಪೇಶ್​, ಗೌತಮ್​, ವೆಂಕಟೇಶ್​, ವಿನೋದ್​, ಬಸವರಾಜು ಇತರರು ಇದ್ದರು.