ಜಿಲ್ಲೆ

ಮುತ್ತತ್ತಿ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಇಂದಿನಿಂದ

ಎಂ.ರವಿ

ಹಲಗೂರು: ಮುತ್ತತ್ತಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವ ಆ.27ರಂದು ಪ್ರಾರಂಭವಾಗಿ ಆ.30ರವರೆಗೆ ನಾಲ್ಕು ದಿನ ವೈಭವಯುತವಾಗಿ ಜರುಗಲಿದೆ.

27ರಂದು ಪಾದ್ದಾರೆಯಲ್ಲಿ ಉಪವಾಸ ಕಾರ್ಯಕ್ರಮ, 28ರಂದು ಮೊದಲನೇ ಪೂಜೆಯ ಪ್ರಯುಕ್ತ ಬಾಣಸಮುದ್ರ ಗ್ರಾಮಸ್ಥರಿಂದ ದೇವಸ್ಥಾನಕ್ಕೆ ಮತ್ತು ರಥಕ್ಕೆ ಹೂವಿನ ಅಲಂಕಾರ ಮತ್ತು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಯುತ್ತದೆ. ಪಾದ್ದಾರೆಯಲ್ಲಿ ಹಾಲರವಿ ಸೇವೆ ಮತ್ತು ಕಾಯಿ ಒಡೆಯುವ ಸೇವೆ ನಡೆಸಲಾಗುತ್ತದೆ ಹಾಗೂ ದೊಡ್ಡ ಮುತ್ತತ್ತಿಯಲ್ಲಿ ಉಪವಾಸ ಹಾಗೂ ಅನ್ನ ಸಂತರ್ಪಣೆ ನಡೆಯುತ್ತದೆ ಹಾಗೂ ರಾತ್ರಿ ಯರಳ್ಳಿ ಪುಟ್ಟಸ್ವಾಮಿ ಮತ್ತು ಶ್ರೀನಿವಾಸ್ ಹಾಗೂ ತಂಡದವರಿಂದ ಜನಪದ ಕಾರ್ಯಕ್ರಮ ನಡೆಯುತ್ತದೆ.

29 ರಂದು ದಿವ್ಯ ರಥೋತ್ಸವ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕುಂತೂರು ಕುಮಾರ್ ತಂಡದವರಿಂದ ಪೂಜಾ ಕುಣಿತ, ಡೋಲು ಕುಣಿತ, ಚಿಲಿಪಿಲಿ ಬೊಂಬೆ, ವೀರಗಾಸೆ ಪೂಜಾ ಕುಣಿತ ನಡೆಯಲಿದೆ.

ಆದಿಜಾಂಬವ ಜನಾಂಗದವರಿಂದ ಹಾಲರವಿ ಒಡೆಯುವ ಹಾಗೂ ಕಾಯುವ ಸೇವೆ ನಡೆಯುತ್ತದೆ. ರಾತ್ರಿ ಎನ್.ಕೋಡಿಹಳ್ಳಿ ಗ್ರಾಮಸ್ಥರಿಂದ ಹುಲಿವಾನ ಸೇವೆ ನಡೆಸಲಾಗುತ್ತದೆ. 30ರಂದು ಹಲಗೂರು ಪೊಲೀಸ್ ಠಾಣಾ ಸಿಬ್ಬಂದಿಯಿಂದ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಆಗಮಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ಅರ್ಚಕ ರವಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.