ಮಡಿಕೇರಿ: ಮುತ್ತಪ್ಪ ದೇವಾಲಯ ಸಮಿತಿ ವತಿಯಿಂದ ದೇವಾಲಯದ ವಾರ್ಷಿಕೋತ್ಸವ ಹಾಗೂ ಮುತ್ತಪ್ಪ ಜಾತ್ರಾ ಮಹೋತ್ಸವ ದೇವಾಲಯದ ಆವರಣದಲ್ಲಿ ಅದ್ಧೂರಿಯಾಗಿ ನಡೆಯಿತು.
ಮುತ್ತಪ್ಪ ದೇವಾಲಯದಲ್ಲಿ ಪ್ರತಿ ವರ್ಷದಂತೆ ಏಪ್ರಿಲ್ ತಿಂಗಳ ಎರಡನೇ ವಾರದಲ್ಲಿ ದೇವರ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಶ್ರೀ ಮುತ್ತಪ್ಪ ಜಾತ್ರೆಯನ್ನು ವಿಜ್ರಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಅದರಂತೆ, ಮೂರು ದಿನಗಳ ಕಾಲ ದೇವಾಲಯ ಆವರಣದಲ್ಲಿ ಜಾತ್ರೋತ್ಸವ ನಡೆಯಿತು.
ಕೇರಳದ ಪಯ್ಯನ್ನೂರಿನ ಬ್ರಹ್ಮಶ್ರೀ ಕುನ್ನತ್ತಿಲ್ಲತ್ತ್ ಮುರಳಿಕೃಷ್ಣನ್ ನಂಬೂದರಿರವರ ನೇತೃತ್ವದಲ್ಲಿ ಮುತ್ತಪ್ಪನ್, ತಿರುವಪ್ಪನ್, ಸುಬ್ರಹ್ಮಣ್ಯ, ಅಯ್ಯಪ್ಪ, ಶಕ್ತಿ ಗಣಪತಿ, ಭಗವತಿ, ವಿಷ್ಣುಮೂರ್ತಿ, ಗುಳಿಗ, ಶಿವಭೂತಂ, ಗುರು, ಪೋದಿ, ಕುಟ್ಟಿಚಾತನ್, ಯಕ್ಷಿ, ನಾಗರಾಜ-ನಾಗಯಕ್ಷಿ, ನಾಗದೇವರ ಬನ ಸೇರಿದಂತೆ ೧೪ ದೇವಾನು ದೇವತೆಗಳ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ವಿಶೇಷ ಪೂಜೆಗಳು ನಡೆಯಿತು. ಕೇರಳದ ಪರಿಶಿನಿಕಡವು ಮುತ್ತಪ್ಪ ಕ್ಷೇತ್ರದ ಆಚಾರಪಟ್ಟ ಮಡೆಯಚ್ಚನ್, ಬ್ಲಾತೂರ್ ಚಂದ್ರ್ ಮಡೆಯಚ್ಚನ್ ನೇತೃತ್ವದಲ್ಲಿ ಮುತ್ತಪ್ಪ ದೇವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಮುತ್ತಪ್ಪ ದೈವಕೋಲಗಳ ವೀಕ್ಷಣೆಗೆ ದಾನಿಗಳ ಸಹಾಯದಿಂದ ನಿರ್ಮಿಸಿದ ಶಾಶ್ವತ ಗ್ಯಾಲರಿ ಉದ್ಘಾಟನೆ ನಡೆಯಿತು.
ಕಲಶ ಮೆರವಣಿಗೆ ನಗರದ ಗಾಂಧಿ ಮೈದಾನದಿಂದ ದೇವಾಲಯದ ಆವರಣದವರೆಗೆ ಸಾಗಿತು. ಮೆರವಣಿಗೆಯಲ್ಲಿ ಕಡಗದಾಳು, ನೀರುಕೊಲ್ಲಿ, ಸಂಪಿಗೆ ಕಟ್ಟೆ, ಮೈಸೂರು ರಸ್ತೆಯ ಡಿಪೊ ಬಳಿ, ಮೈತ್ರಿ ಜಂಕ್ಷನ್‌ನ ನಗರದ ನಾಲ್ಕೂ ದಿಕ್ಕುಗಳಿಂದ ಹೊರಡುವ ಕಳಸ ಮೆರವಣಿಗೆ ಮುತ್ತಪ್ಪ ದೇವಾಲಯದ ಕಲಶದೊಂದಿಗೆ ಮಹಿಳೆಯರು ಮತ್ತು ಮಕ್ಕಳ ತಾಲಾಪೊಲಿ, ಮಂಗಳೂರಿನ ಆಕರ್ಷಕ ಯಕ್ಷಗಾನ ವೇಷಗಳು, ಸತ್ಯನಾರಾಯಣ ಭಜನಾ ಮಂಡಳಿ, ಗುಂಡೂರಿ ವೇಣೂರು, ದಕ್ಷಿಣ ಕನ್ನಡ, ಚಿಂಗಾರಿ ಮೇಳಗಳು, ಆಕರ್ಷಕ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿತು.
ಶಾಸ್ತಪ್ಪ ದೇವರ ವೆಳ್ಳಾಟಂ, ಮುತ್ತಪ್ಪ ದೇವರ ವೆಳ್ಳಾಟಂ, ವಿಷ್ಣುಮೂರ್ತಿ ಅಗ್ನಿ ಸ್ಪರ್ಶ, ಪೊವದಿ ವೆಳ್ಳಾಟಂ, ವಿಷ್ಣುಮೂರ್ತಿ ವೆಳ್ಳಾಟಂ, ಶಿವಭೂತ ತೆರೆ, ಗುಳಿಗ ದೇವರ ತೆರೆ, ಕಳಗ ಪಾಟ್, ಸಂದ್ಯಾವೇಲೆ, ಕುಟ್ಟಿಚಾತನ್ ದೇವರ ತೆರೆ ನಡೆಯಿತು.