ಜಿಲ್ಲೆ

ನಾಳೆಯಿಂದ ಮುತ್ತಪ್ಪ ಜಾತ್ರೋತ್ಸವ

ಸುನಿಲ್ ಪೊನ್ನೇಟಿ

ಮಡಿಕೇರಿ:

ಮಡಿಕೇರಿಯ ಶ್ರೀ ಮುತ್ತಪ್ಪ ಕ್ಷೇತ್ರದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಮತ್ತು ಶ್ರೀ ಮುತ್ತಪ್ಪ ಜಾತ್ರೋತ್ಸವ ಬುಧವಾರ (ಏ.೩) ಆರಂಭವಾಗಿ ಏ. ೬ರ ತನಕ ನಡೆಯಲಿದೆ ಎಂದು ಶ್ರೀ ಮುತ್ತಪ್ಪ ಉತ್ಸವ ಸಮಿತಿ ಅಧ್ಯಕ್ಷ ಬಿ.ಕೆ. ರವೀಂದ್ರ ರೈ ತಿಳಿಸಿದ್ದಾರೆ. ಕೊಡಗಿನ ಪುರಾತನ ದೇವಾಲಯಗಳಲ್ಲಿ ಒಂದಾದ ಶ್ರೀ ಮುತ್ತಪ್ಪ ದೇವಾಲಯ ಆವರಣದಲ್ಲಿರು ೧೪ ದೇವಾನುದೇವತೆಗಳ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ದೇವಾಲಯದ ತಂತ್ರಿಗಳಾದ ಕೇರಳದ ಪಯ್ಯನೂರಿನ ಬ್ರಹ್ಮಶ್ರೀ ಕುನ್ನತ್ತಿಲ್ಲತ್ ಮುರಳಿಕೃಷ್ಣನ್ ನಂಬೂದರಿ ಮತ್ತು ಪರಿಶೀನಿ ಕಡುವು ಶ್ರೀ ಮುತ್ತಪ್ಪ ಕ್ಷೇತ್ರದ ಬ್ಲಾತೂರ್ ಚಂದ್ರನ್ ಮಡಯಚ್ಚನ್ ನೇತೃತ್ವದಲ್ಲಿ ಏರ್ಪಡಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶ್ರೀ ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್ ಮಾತನಾಡಿ ಉತ್ಸವದ ಅಂಗವಾಗಿ ಏ.೩, ಏ.೪, ಏ.೫ ಹಾಗೂ ಏ. ೬ರಂದು ವಿವಿಧ ದೈವಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಶುಕ್ರವಾರ (ಏ.೫) ಸಂಜೆ ಗಾಂಧಿ ಮೈದಾನದಿಂದ ದೇವಾಲಯ ತನಕ ವಿಶೇಷ ಮೆರವಣಿಗೆ ನಡೆಯಲಿದೆ. ಮಡಿಕೇರಿ ಮುಖ್ಯ ರಸ್ತೆಯಲ್ಲಿ ಸಾಗುವ ಈ ಮೆರವಣಿಗೆಯಲ್ಲಿ ಕಲಾತಂಡಗಳು, ಚಂಡೆ ವಾದ್ಯ ಹಾಗೂ ವಿದ್ಯುತ್ ಅಲಂಕೃತ ಮಂಟಪಗಳು ಇರಲಿವೆ. ಅಂದೇ ಸಂಜೆ ೭.೩೦ಕ್ಕೆ ಧಾರ್ಮಿಕ ಹಿನ್ನೆಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ಕೊಡಲಾಗಿದೆ ಎಂದರು.

ಶ್ರೀ ಮುತ್ತಪ್ಪ ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ರಾಮನ್, ಪ್ರಮುಖರಾದ ಸುಬ್ರಮಣಿ, ಸದಾಶಿವ ಹಾಗೂ ಉನ್ನಿಕೃಷ್ಣ ಇದ್ದರು.