ಜಿಲ್ಲೆ

ಮುತಾಲಿಕ್ ಹೇಳಿಕೆಗೆ ದಲಿತ ಸಂಘಟನೆಗಳ ಆಕ್ಷೇಪ

ಹುಬ್ಬಳ್ಳಿ: ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು ಸಾವಿನ ಮನೆಯಲ್ಲಿ ಜಾತಿವಾದಿತನ ಮಾಡುತ್ತಿದ್ದು, ಇದರ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳದ ಗುರುನಾಥ ಉಳ್ಳಿಕಾಶಿ ತಿಳಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ನೇಹಾ ಹಿರೇಮಠ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆಗೆ ಒತ್ತಾಯಿಸುವ ಇವರು, ಅಯೋಧ್ಯೆಯಲ್ಲಿ ದಲಿತ ಯುವತಿಯ ಹತ್ಯಾಚಾರದ ಬಗ್ಗೆ ತುಟಿ ಬಿಚ್ಚುವುದಿಲ್ಲ ಏಕೆ? ಅಂಜಲಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನು ಮುಲಾಜಿಲ್ಲದೇ ಬಂಧಿಸಲು ಏಕೆ ಒತ್ತಾಯಿಸುವುದಿಲ್ಲ? ಎಂದು ಪ್ರಶ್ನಿಸಿದರು.

ಫೆಬ್ರವರಿ 14 ಬಂದರೆ ಜಾಗೃತವಾಗುವ ಇವರ ಸಂಟನೆಯು ಈ ಬಾರಿ ಮೊದಲೇ ಎಚ್ಚೆತ್ತುಕೊಂಡಿದೆ. ಇವರ ಹಿಂದುತ್ವದ ಬಗ್ಗೆ ನಮ್ಮ ತಕರಾರು ಇಲ್ಲ. ಆದರೆ, ನೇಹಾ ಪ್ರಕರಣವೊಂದನ್ನೇ ಇಟ್ಟುಕೊಂಡು ಜಾತಿವಾದಿತನ ಮಾಡಬಾರದು. ಒಂದು ವೇಳೆ ಇದೇ ರೀತಿ ಇವರ ಕಾರ್ಯಗಳು ಮುಂದುವರಿದರೆ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ನೇಹಾ ಹಾಗೂ ಅಂಜಲಿ ಹತ್ಯೆ ಕೇಸ್ ನಲ್ಲಿ ಸಿಐಡಿ ಸಮರ್ಪಕ ತನಿಖೆ ನಡೆಸಿದೆ. ನೇಹಾ ಕೇಸ್ ಬಗ್ಗೆ ಸಿಬಿಐ ತನಿಖೆಗೆ ಯಾರಾದರೂ ಖಾಸಗಿ ದೂರು ನೀಡಿದರೆ ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಎಲ್ಲರನ್ನೂ ಸರಿಸಮನಾಗಿ ಕಾಣಬೇಕು ಎಂದು ಉಳ್ಳಿಕಾಶಿ ಉತ್ತರಿಸಿದರು.

ಮಹಾಮಂಡಳಿಯ ಪ್ರಭು ಪ್ರಭಾಕರ, ಶ್ರೀನಿವಾಸ ಬೆಳದಡಿ, ನಾಗರಾಜ ದೊಡ್ಡಮನಿ, ದೇವೇಂದ್ರಪ್ಪ ಇಟಗಿ, ಸಂತೋಷ ಕದಂ ಗೋಷ್ಠಿಯಲ್ಲಿದ್ದರು.