ಜಿಲ್ಲೆ

ಮಸ್ಟರಿಂಗ್ ಕೇಂದ್ರ ಸಮರ್ಪಕವಾಗಿರಲಿ

ಅಶೋಕ್ ಕುಮಾರ್ ಎನ್

ದೇವದುರ್ಗ: ತಾಲೂಕು ಸೂಕ್ಷ್ಮ ಪ್ರದೇಶವಾಗಿದ್ದು, ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಒತ್ತಡಕ್ಕೆ ಒಳಗಾಗದೆ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಬೇಕು. ಪ್ರತಿಯೊಂದು ಕೆಲಸ ನಿಯಮ ಪ್ರಕಾರವಾಗಿ ಮಾಡಿ ಸಮರ್ಥವಾಗಿ ಚುನಾವಣೆ ಪ್ರಕ್ರಿಯೆ ನಿರ್ವಹಿಸಬೇಕು ಎಂದು ದೇವದುರ್ಗ ಹಾಗೂ ಲಿಂಗಸುಗೂರು ಕ್ಷೇತ್ರದ ವೀಕ್ಷಕ ಸಂಜೀವ್ ಶ್ರೀವಾಸ್ತವ್ ಹೇಳಿದರು.

ಪಟ್ಟಣದ ಮಿನಿವಿಧಾನಸೌಧದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳ ಸಭೆಯಲ್ಲಿ ಸೋಮವಾರ ಮಾತನಾಡಿದರು. ಮಸ್ಟರಿಂಗ್, ಡಿಮಸ್ಟರಿಂಗ್ ಸ್ಥಳವನ್ನು ಸಮರ್ಪಕವಾಗಿ ಇರಿಸಬೇಕು. ಚುನಾವಣೆ ಕೆಲಸಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಬೇಕಿದೆ ಎಂದರು.
ನಾಮಪತ್ರ ಸ್ವೀಕೃತಿ, ಪರಿಶೀಲನೆ ಹಾಗೂ ಹಿಂಪಡೆಯುವ ಪ್ರಕ್ರಿಯೆ ಸಮರ್ಪಕವಾಗಿ ನಿರ್ವಹಿಸಲಾಗಿದೆ. ತಾಲೂಕಿನಲ್ಲಿ ಸ್ಥಾಪಿಸಿರುವ ಆರು ಚೆಕ್‌ಪೋಸ್ಟ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕಿದೆ. ಮತದಾನ ಮಾಡುವ ಬಗ್ಗೆ ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿ ಮೂಡಿಸಬೇಕು. ಎಲ್ಲ ಇಲಾಖೆಗಳು ಜಾಗೃತಿ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಪಕ್ಷಗಳು ನಡೆಸುವ ಪ್ರಚಾರ, ಪರವಾನಗಿ ಪಡೆದ ದಾಖಲೆ ಸೇರಿ ಪ್ರತಿಯೊಂದನ್ನೂ ಪರಿಶೀಲಿಸಬೇಕಿದೆ. ಯಾರಿಂದಲೂ ಯಾವುದೇ ದೂರು ಬಾರದಂತೆ ಕೆಲಸ ಮಾಡುವಂತೆ ಸಂಜೀವ್ ಶ್ರೀವಾಸ್ತವ್ ಸೂಚನೆ ನೀಡಿದರು.

ಬಳಿಕ ಪಟ್ಟಣದ ಡಾನ್ ಬೋಸ್ಕೋ ಶಿಕ್ಷಣ ಸಂಸ್ಥೆಯಲ್ಲಿ ಆರಂಭಿಸಿರುವ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚುನಾವಣಾಧಿಕಾರಿ ಎಂ.ಎನ್.ಚೇತನ್‌ಕುಮಾರ್, ಸಹಾಯಕ ಚುನಾವಣಾಧಿಕಾರಿ ಕೆ.ವೈ.ಬಿದರಿ, ಗ್ರೇಡ್-2 ತಹಸೀಲ್ದಾರ್ ಶ್ರೀನಿವಾಸ್ ಚಾಪೇಲ್, ಉಮೇಶ ಇತರರಿದ್ದರು.