ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ನಗರದ ಕೆಲವೆಡೆ ಅನಧಿಕೃತವಾಗಿ ನಿರ್ವಿುಸಿರುವ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಿ ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅಧಿಕಾರಿಗಳಿಗೆ ಸೂಚಿಸಿದರು.
ವಾರ್ಡ್ ನಂ. 51ರ ವ್ಯಾಪ್ತಿಯ ಅಕ್ಷಯ ಪಾರ್ಕ್, ಪ್ರಿಯದರ್ಶಿನಿ ಕಾಲನಿ ಹಾಗೂ ಮಹೇಶ ಪಿಯು ಕಾಲೇಜು ಎದುರಿನ ಸ್ಥಳಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿದ ಅವರು, ಅಕ್ಷಯ ಪಾರ್ಕ್ನಿಂದ ಮುರ್ಡೆಶ್ವರ ಫ್ಯಾಕ್ಟರಿಗೆ ಹೋಗುವ ರಸ್ತೆಯ ಅಕ್ಕಪಕ್ಕ ಅನಧಿಕೃತವಾಗಿ ಹಾಕಿರುವ ಡಬ್ಬಿ ಅಂಗಡಿಗಳನ್ನು ತೆರವುಗೊಳಿಸುವಂತೆ ಸ್ಥಳದಲ್ಲಿ ಹಾಜರಿದ್ದ ಸಹಾಯಕ ಆಯುಕ್ತ ಚಂದ್ರಶೇಖರ ಮಾಲಿಪಾಟೀಲ್ ಹಾಗೂ ಆರೋಗ್ಯ ನಿರೀಕ್ಷಕರಾದ ಸುನಿಲ್ ಕಾಡದೇವರಮಠ, ಮಹೇಶ ಕಾಟೆ ಅವರಿಗೆ ನಿರ್ದೇಶನ ನೀಡಿದರು.
ಮಹೇಶ ಪಿಯು ಕಾಲೇಜು ಪಕ್ಕದಲ್ಲಿ ಅತಿಕ್ರಮಣ ಮಾಡಿ ಕಟ್ಟಿರುವ ಕಟ್ಟಡವನ್ನು ಸರ್ವೆ ಇಲಾಖೆಯ ಅಧಿಕಾರಿಗಳ ಜತೆ ಪರಿಶೀಲಿಸಿದ ಆಯುಕ್ತರು ಅತಿಕ್ರಮಣವನ್ನು ತೆರವು ಗೊಳಿಸುವಂತೆ ಸೂಚಿಸಿದರು. ಬಳಿಕ ಎಆರ್ಟಿ ನಗರಕ್ಕೆ ಭೇಟಿ ನೀಡಿದ ಅವರು, ಪಾಲಿಕೆಯ ಜಾಗದಲ್ಲಿ ಅನಧಿಕೃತವಾಗಿ ನಿರ್ವಿುಸುತ್ತಿರುವ ಕಟ್ಟಡದ ಕಾಮಗಾರಿಯನ್ನು ಸ್ಥಗಿತಗೊಳಿಸಿ ತೆರವು ಗೊಳಿಸುವಂತೆ ಸ್ಥಳದಲ್ಲಿ ಹಾಜರಿದ್ದ ಸಹಾಯಕ ಆಯುಕ್ತರಿಗೆ ನಿರ್ದೇಶನ ನೀಡಿದರು. ನಿವಾಸಿಗಳು ನೀಡಿದ ದೂರಿನ ಮೇರೆಗೆ ಜನವಸತಿ ಪ್ರದೇಶದಲ್ಲಿರುವ ಚಿಕನ್ ಮಾರಾಟ ಮಳಿಗೆಯನ್ನು ತಕ್ಷಣ ಮುಚ್ಚುವಂತೆ ಆದೇಶ ನೀಡಿದರು.
ಪಾಲಿಕೆ ಸದಸ್ಯ ಸಂದಿಲ್ಕುಮಾರ, ಇತರರು ಇದ್ದರು.