ವಿಜಯಪುರ: ಪ್ರವಾದಿ ಮೊಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿರುವ ಮುಸ್ಲಿಂ ಸಮುದಾಯದ ನಾಯಕರು ಇನ್ಮುಂದೆ ಇಂಥ ವರ್ತನೆ ಸಹಿಸಲು ಸಾಧ್ಯವಿಲ್ಲ ಎಂಬ ಎಚ್ಚರಿಕೆ ರವಾನಿಸಿದ್ದಾರೆ.
ಶಾಸಕ ಯತ್ನಾಳರಿಗೆ ಹಿಂದುತ್ವದ ಬಗ್ಗೆ ಅಭಿಮಾನವಿದ್ದರೆ ಮೊದಲು ತಮ್ಮ ಧರ್ಮದಲ್ಲಿರುವ ಜಾತೀಯತೆ, ಅಸಮಾನತೆ, ಅಸ್ಪಶ್ಯತೆ ವಿರುದ್ಧ ಹೋರಾಡಲಿ. ತಮ್ಮ ಪುತ್ರನಿಗೆ ದಲಿತ ಹೆಣ್ಣು ಮಗಳನ್ನು ತಂದು ಮದುವೆ ಮಾಡಿಸಲಿ, ಇತರೆ ವರ್ಗದ ಜೊತೆಗೆ ರಕ್ತ ಸಂಬಂಧ ಬೆಳೆಸಲಿ. ಅದನ್ನು ಬಿಟ್ಟು ಮುಸ್ಲಿಂರನ್ನು ಬೈಯ್ಯುವುದೇ ಹಿಂದುತ್ವ ಎಂದುಕೊಂಡಿದ್ದರೆ ಅದಕ್ಕೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಗುರುವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಹರಿಹಾಯ್ದರು.
ವಿಜಯಪುರ ನಗರ ವಿಧಾನ ಸಭೆ ಕ್ಷೇತ್ರದ ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿಯಾಗಿದ್ದ ಅಬ್ದುಲ್ ಹಮೀದ್ ಮುಶ್ರೀಫ್ ಮಾತನಾಡಿ, ಹುಬ್ಬಳ್ಳಿ ನಗರದ ಬಾಣಿ ಓಣಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಯತ್ನಾಳ ಅವರು ‘ಬಾಳ ಸಾಬ್ ಠಾಕ್ರೆ ಮನೆಯಲ್ಲಿ ಮೊಹಮ್ಮದ್ ಪೈಗಂಬರ್ ಹುಟ್ಟಿದ್ದಾನೆ’ ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಬೆಳಗಾದರೆ ಸಾಕು ಮುಸ್ಲಿಂರನ್ನು ಬೈಯ್ಯುವ ಹಾಗೂ ಮುಸ್ಲಿಂ ಧರ್ಮಗುರುಗಳನ್ನು ನಿಂದಿಸುವ ಯತ್ನಾಳ ಮೊದಲು ಯಾರ ಮನೆಯಲ್ಲಿ ಹುಟ್ಟಿದ್ದಾರೆಂಬುದನ್ನು ತಿಳಿಸಲಿ. ಅವರ ಸಮುದಾಯದ ಸ್ವಾಮೀಜಿಗಳು ಕರೆದು ಬುದ್ದಿ ಹೇಳದಿದ್ದರೆ ನಾವೇ ಬುದ್ದಿ ಕಲಿಸಬೇಕಾಗುತ್ತದೆ ಎಂದರು.
ಟಿಪ್ಪು ಸುಲ್ತಾನ್, ಔರಂಗಜೇಬ್ ಹೀಗೆ ಅನೇಕ ಇತಿಹಾಸ ಪುರುಷರನ್ನು ಬೈಯ್ದಗ ಸಹಿಸಿಕೊಂಡಿದ್ದೆವು. ಕಾರಣ ಅವರೆಲ್ಲ ಇತಿಹಾಸ ಪುರುಷರು. ಆದರೆ, ಇಡೀ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಪ್ರವಾದಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ಸಹಿಸೋದಿಲ್ಲ. ನಾವು ಪ್ರವಾದಿಗಳಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ದ. ಜೀವ ಬಿಡಲು, ದೇಶ ಬಿಡಲು ಸಹ ಸಿದ್ಧ ಎಂದರು.
ಮುಖಂಡ ಎಸ್.ಎಂ. ಪಾಟೀಲ ಗಣಿಹಾರ ಮಾತನಾಡಿ, 2013ರ ಚುನಾವಣೆ ಸಂದರ್ಭದಲ್ಲಿ ಮುಸ್ಲಿಂ ಟೋಪಿ ಹಾಕಿ, ನಮಾಜ್ ಬಿದ್ದು, ಬಿರಿಯಾನಿ ಹಂಚುತ್ತಿದ್ದ ಈ ಯತ್ನಾಳ ಹಿಂದು ಯಾವಾಗ ಆದರು? ಎಂದು ಲೇವಡಿ ಮಾಡಿದರಲ್ಲದೇ ಪವಿತ್ರವಾದ ಲಿಂಗಾಯತ ಧರ್ಮದಲ್ಲಿ ಜನಿಸಿದ ಯತ್ನಾಳಗೆ ಹಿಂದುತ್ವದ ಪರಿಕಲ್ಪನೆಯೇ ಗೊತ್ತಿಲ್ಲ. ಮುಸ್ಲಿಂರನ್ನು ನಿಂದಿಸುವುದೇ ಹಿಂದುತ್ವ ಎಂದುಕೊಂಡಿದ್ದಾರೆ. ಬಸವಣ್ಣ ಹಾಗೂ ಪೈಗಂಬರ್ ಅವರ ತತ್ವಗಳಲ್ಲಿ ಬಹುತೇಕ ಸಾಮ್ಯತೆ ಇದೆ. ಈ ಇಬ್ಬರೂ ಮಹಾತ್ಮರುಗಳು ಸಮಾನತೆಯ ಹರಿಕಾರರು. ಆದರೆ, ಈ ಯತ್ನಾಳರಿಗೆ ಲಿಂಗಾಯತವಾಗಲಿ, ವಚನಗಳ ಸಾರವಾಗಲಿ ಗೊತ್ತಿಲ್ಲ. ನಮ್ಮ ಕಡೆ ಬರಲಿ ನಾವು ವಿಭೂತಿ ಎಂದರೇನು? ಲಿಂಗ ಎಂದರೇನು? ವಚನ ಎಂದರೇನು? ತಿಳಿಸಿಕೊಡುತ್ತೇವೆ ಎಂದರು.
ಪಾಲಿಕೆಯ ಮಾಜಿ ಸದಸ್ಯ ಅಬ್ದುಲ್ ರಜಾಕ್ ಹೊರ್ತಿ ಮಾತನಾಡಿ, ಯತ್ನಾಳ ಹಿಂದು ಸಮುದಾಯ ಸ್ವಾಮೀಜಿಗಳನ್ನು ಹಾಗೂ ಇತರೆ ಮಹಾತ್ಮರನ್ನು ನಿಂದಿಸಿದಾಗ ಆಯಾ ಸಮುದಾಯಗಳ ಸ್ವಾಮೀಜಿಗಳು ಸಹಿಸಿಕೊಂಡಿರಬಹುದು ಆದರೆ ನಾವು (ಮುಸ್ಲಿಂ) ಸಹಿಸಿಕೊಳ್ಳಲ್ಲ ಎಂದರು.
ಮಹ್ಮದ್‌ರಫೀಕ್ ಟಪಾಲ್ ಇಂಜಿನಿಯರ್ ಮಾತನಾಡಿ, ಯತ್ನಾಳರೊಬ್ಬರು ಹುಚ್ಚ ಎಂದರೆ ಕರವೇ ಮುಖಂಡ ಎಂ.ಸಿ. ಮುಲ್ಲಾ ಅವರು, ಯತ್ನಾಳರ ಕುಟುಂಬರ ಹಿರಿಕರು ಜಾತ್ಯತೀತರಾಗಿದ್ದರು. ಆದರೆ, ಇವರು ಆಸ್ಪತ್ರೆಯಲ್ಲಿ ಎಕ್ಸಚೇಂಜ್ ಆಗಿ ಬಂದಿದ್ದಾರೆಂಬ ಅನುಮಾನ ಕಾಡುತ್ತಿದೆ. ಯಾವುದಕ್ಕೂ ಡಿಎನ್‌ಎ ಪರೀಕ್ಷೆ ಮಾಡಿಸೋದು ಒಳಿತೆಂದರು.
ಮುಖಂಡರಾದ ಆಸಿಫುಲ್ಲಾ ಖಾದ್ರಿ, ದಸ್ತಿಗೀರ ಸಾಲೋಟಗಿ, ಫಯಾಜ್ ಕಲಾದಗಿ ಮತ್ತಿತರರಿದ್ದರು.