ಜಿಲ್ಲೆ

ಎಸಿ ವಿರುದ್ಧ ಮುಸ್ಲಿಂ ಫೋರಮ್ ಪ್ರತಿಭಟನೆ

ಬೆಳಗಾವಿ: ಬೆಳಗಾವಿ ಕ್ಯಾಂಪ್‌ನ ಹಜರತ್ ಪೀರ್ ಹಟ್ಟಿ ಅಸಾದ್‌ಖಾನ್ ದರ್ಗಾಕ್ಕೆ ಸೇರಿದ ಜಮೀನನ್ನು ಮರಳಿ ನೀಡಬೇಕೆಂದು ನ್ಯಾಯಾಲಯದ ಆದೇಶವಿದ್ದರೂ ಬೆಳಗಾವಿ ಉಪವಿಭಾಗಾಧಿಕಾರಿ ಪಾಲಿಸಿಲ್ಲ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮುಸ್ಲಿಂ ಫೋರಮ್ ವತಿಯಿಂದ ಶುಕ್ರವಾರ ಪ್ರತಿಭಟಿಸಲಾಯಿತು.

ದರ್ಗಾದ 22 ಗುಂಟೆ ಆಸ್ತಿ ನೋಂದಣಿ ಅಧಿಕೃತವಾಗಿದೆ. ಆದರೆ, ಜಮೀನನ್ನು ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿದ್ದಾರೆ. ಇದರ ವಿರುದ್ಧ ವಕ್ಫ್ ಬೋರ್ಡ್‌ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಅಕ್ರಮ ಭೂಸ್ವಾಧೀನ ತೆರವುಗೊಳಿಸಬೇಕು. ದರ್ಗಾದ ಆಸ್ತಿಯನ್ನು ಮರಳಿ ನೀಡಬೇಕು. ಈ ಕುರಿತು ಕೂಡಲೇ ಆದೇಶ ಜಾರಿ ಮಾಡಬೇಕು. ಬೆಳಗಾವಿ ಉಪವಿಭಾಗಾಧಿಕಾರಿ ಸರ್ಕಾರದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಹೈಕೋರ್ಟ್ ಮತ್ತು ಜಿಲ್ಲಾಧಿಕಾರಿ ಆದೇಶ ಗೌರವಿಸಿಲ್ಲ. ಮೂರು ಪ್ರಕರಣ ದಾಖಲಿಸಿದರೂ ಕ್ಯಾರೆ ಎನ್ನುತ್ತಿಲ್ಲ ಎಂದು ಆರೋಪಿಸಿದರು.

ಐ.ಎ. ಮುಲ್ಲಾ, ಇಫಿಯಾಜ್ ಮುಜಾವರ, ಉಮರ ಮುಜಾವರ, ಎ.ಬಿ.ಮುಜಾವರ, ಎಸ್.ಕ್ಯೂ. ಮುಜಾವರ ಇತರರಿದ್ದರು.