ಜಿಲ್ಲೆ

ಮುಸ್ಲಿಂ ಸೆಂಟ್ರಲ್ ಕಮಿಟಿ ವತಿಯಿಂದ 2 ಕುಟುಂಬಕ್ಕೆ ತಲಾ 30 ಲಕ್ಷ ರೂ. ಪರಿಹಾರ ಘೋಷಣೆ

reportermng

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಮೂರು ಯುವಕರ ಕೊಲೆಗಳ ಹಿನ್ನೆಲೆಯಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್. ಮೊಹಮ್ಮದ್ ಮಸೂದ್ ಅವರ ಅಧ್ಯಕ್ಷತೆಯಲ್ಲಿ ಶನಿವಾರ ತುರ್ತು ಸಭೆ ನಡೆಯಿತು.
ಸರ್ಕಾರದ ವಿಪಕ್ಷ ಉಪನಾಯಕ ಯು.ಟಿ. ಖಾದರ್, ಮಾಜಿ ಶಾಸಕ ಮೊದೀನ್ ಬಾವರ ಮೊದಲಾದವರು ಉಪಸ್ಥಿತರಿದ್ದರು.


ಸರ್ವ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಮೂರು ಅಮಾಯಕರ ಕೊಲೆಯಲ್ಲಿ ಕೇವಲ ಪ್ರವೀಣ್ ಎಂಬ ಬಿಜೆಪಿ ಕಾರ್ಯಕರ್ತನ ಮನೆಗೆ ಮುಖ್ಯ ಮಂತ್ರಿ ಭೇಟಿ ನೀಡಿ 25 ಲಕ್ಷ ರೂ. ಪರಿಹಾರ ನೀಡಿದ್ದು ಉಳಿದ ಇಬ್ಬರು ಅಮಾಯಕ ಮುಸ್ಲಿಮರ ಮನೆಗೆ ಭೇಟಿಯನ್ನು ನೀಡದೆ ಮುಖ್ಯ ಮಂತ್ರಿಯವರ ಅಮಾನವೀಯ ನಿಲುವಿಗೆ ಬೇಸರ ವ್ಯಕ್ತಪಡಿಸಲಾಯಿತು.


ಆದುದರಿಂದ ಮುಸ್ಲಿಂ ಸಮುದಾಯದವರಿಗೆ ಮುಸ್ಲಿಂ ಸೆಂಟ್ರಲ್ ಕಮಿಟಿಯ ನೇತೃತ್ವದಲ್ಲಿ ದಾನಿಗಳಿಂದ ವಂತಿಗೆ ಸಂಗ್ರಹಿಸಿ ಮರಣ ಹೊಂದಿದ ಎರಡೂ ಕುಟುಂಬಕ್ಕೆ ತಲಾ 30 ಲಕ್ಷ ರೂ.ನಂತೆ ಸಹಾಯ ಧನ ನೀಡುವುದಾಗಿ ಹಾಗೂ ಈ ಬಗ್ಗೆ ಕುಟುಂಬಸ್ಥರಿಗೆ ಕಾನೂನಿನ ವ್ಯವಸ್ಥೆ ಬೇಕಿದ್ದಲ್ಲಿ ಮಾಡಲು ನಿರ್ಣಯಿಸಲಾಯಿತು.


ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ನಾಗರಿಕರು ಶಾಂತಿಯನ್ನು ಕಾಪಾಡಬೇಕು ಹಾಗೂ ಮರಣ ಹೊಂದಿದ ಮೂರು ಕುಟುಂಬಸ್ಥರಿಗೆ ಈ ನೋವನ್ನು ಭರಿಸುವ ಶಕ್ತಿಯನ್ನು ಪರಮಾತ್ಮನು ನೀಡಲೆಂದು ಅಧ್ಯಕ್ಷರಾದ ಅಲ್ ಹಾಜ್ ಕೆ.ಎಸ್. ಮೊಹಮ್ಮದ್ ಮಸೂದ್ ಅವರು ಸಾಂತ್ವಾನ ನೀಡಿದರು.


ಉಪಾಧ್ಯಕ್ಷರುಗಳಾದ ಹಾಜಿ ಇಬ್ರಾಹಿಂ ಕೋಡಿಜಾಲ್, ಹಾಜಿ ಬಿ.ಎಂ. ಮುಮ್ತಾಜ್ ಅಲಿ, ಕೆ.ಅಶ್ರಫ್, ಸೈಯದ್ ಅಹಮದ್ ಬಾಷ ತಂಙಳ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.