ಗಂಗಾವತಿ: ಮುಸ್ಲಿಂ ವ್ಯಾಪಾರಿಗಳನ್ನು ವಿರೋಧಿಸುವವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಬಹುತ್ವ ಕರ್ನಾಟಕ ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ನಗರದ ತಾಲೂಕಾಡಳಿತ ಸೌಧದ ಮುಂದೆ ಪ್ರತಿಭಟನೆ ನಡೆಸಿದರು.
ಸಂಘಟನಾ ಸಂಚಾಲಕ ಜೆ.ಭಾರದ್ವಾಜ್ ಮಾತನಾಡಿ, ಉಡುಪಿ ಸೇರಿ ಇತರ ಜಿಲ್ಲೆಗಳ ಹಿಂದು ಜಾತ್ರೆ ಮತ್ತು ಉತ್ಸವಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ಸಂಘ ಪರಿವಾರ ಒತ್ತಡ ಹಾಕುತ್ತಿದೆ. ಸಂವಿಧಾನ ಆಶಯದಂತೆ ಧರ್ಮ ಮತ್ತು ವ್ಯಾಪಾರಕ್ಕೂ ಯಾವುದೇ ಸಂಬಂಧವಿಲ್ಲ. ಹಿಜಾಬ್ ಪ್ರಕರಣ ಮುಂದಿಟ್ಟುಕೊಂಡು ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸುತ್ತಿರುವುದು ಸಂವಿಧಾನ ವಿರೋಧಿಯಾಗಿದೆ. ಬುದ್ಧ, ಬಸವ ಮತ್ತು ಅಂಬೇಡ್ಕರ್ ವಿಚಾರಗಳನ್ನು ಮುಂದಿಟ್ಟುಕೊಂಡು ಜಾತಿ ಸಂಘರ್ಷ ತಡೆಯಬೇಕು. ಹಿಂದು ಶಕ್ತಿಗಳು ಸಂವಿಧಾನ ಉಲ್ಲಂಸಿ ಒಂದು ವರ್ಗದ ಜನರನ್ನು ಹೆದರಿಸುತ್ತಿವೆ. ಪ್ರಕರಣವನ್ನು ಗಂಭೀರ ಪರಿಗಣಿಸಿ ಬಹಿಷ್ಕಾರ ಹಾಕುವವರ ವಿರುದ್ಧ ಪೊಲೀಸ್ ಇಲಾಖೆ ಸ್ವಯಂಪ್ರೇರಿತ ದೂರು ದಾಖಲಿಸಬೇಕೆಂದು ಆಗ್ರಹಿಸಿದರು. ಗ್ರೇಡ್ 2 ತಹಸೀಲ್ದಾರ್ ವಿ.ಎಚ್.ಹೊರಪೇಟಿಗೆ ಮನವಿ ಸಲ್ಲಿಸಲಾಯಿತು. ಪದಾಧಿಕಾರಿಗಳಾದ ಸಣ್ಣ ಹನುಮಂತಪ್ಪ ಹುಲಿಹೈದರ್, ಅಲ್ತ್ಾ ಹುಸೇನ್, ಹನುಮಂತಪ್ಪ, ಕೇಶುನಾಯ್ಕ, ಬಾಷಾಸಾಬ್, ವೆಂಕಟೇಶ ಇತರರಿದ್ದರು.