ಉಡುಪಿ: ಕೇಂದ್ರ ಸರ್ಕಾರ ರಾಜಕೀಯ ಉದ್ದೇಶವನ್ನು ಇಟ್ಟುಕೊಂಡು ಜಾರಿಗೊಳಿಸಲು ಉದ್ದೇಶಿಸಿರುವ ವಕ್ಫ್ ತಿದ್ದುಪಡಿ ಕಾಯ್ದೆಯಿಂದಾಗಿ ದೇಶ ಗೊಂದಲದ ಗೂಡಾಗಿದೆ. ಹೀಗಾಗಿ ಕೇಂದ್ರ ಸರ್ಕಾರ ವಿಭಜಕ ಮನಸ್ಥಿತಿ ತೊರೆಯಬೇಕು. ರಾಜ್ಯ ಸರ್ಕಾರ ರೈತರಿಗೆ ತೊಂದರೆ ನೀಡಬಾರದು. ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಮರ ನಿಂದನೆ ಮಾಡುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ವಕ್ತಾರ ಮುಷ್ತಾಕ್ ಹೆನ್ನಾಬೈಲ್ ಆಗ್ರಹಿಸಿದರು.
ಉಡುಪಿ ಜಾಮೀಯ ಮಸೀದಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ವಕ್ಫ್ ಆಸ್ತಿಯ ಪ್ರಮಾಣ 9 ಲಕ್ಷ ಎಕರೆಗಳಿಗಿಂತಲೂ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ. ಆದರೆ ನೋಂದಣಿ ಆಗಿರುವುದು ಅರ್ಧಕ್ಕಿಂತಲೂ ಕಡಿಮೆ. ಈ ಆಸ್ತಿಗಳನ್ನು ಬಹುತೇಕ ಮುಸ್ಲಿಮರೇ ಸ್ವಾಧಿನಕ್ಕೆ ಪಡೆದುಕೊಂಡಿದ್ದಾರೆ. ಬ್ರೀಟಿಷರು ಕೂಡ ವಕ್ಫ್ ಆಸ್ತಿ ಸಂರಕ್ಷಣೆಗೆ 1925ರಲ್ಲಿ ಕಾನೂನಾತ್ಮಕ ಸ್ವರೂಪದ ಬೋರ್ಡ್ ರೂಪಿಸಿದ್ದಾರೆ. ವಕ್ಫ್ ಆಸ್ತಿಯ ಕಬಳಿಕೆ, ಕಳಪೆ ನಿರ್ವಹಣೆ ಮತ್ತು ಅಸಡ್ಡೆಗೆ ಮುಸ್ಲಿಂ ಸಮುದಾಯವೇ ಹೊಣೆಯಾಗಿದೆ. ವಕ್ಫ್ ಆಸ್ತಿಯು ವ್ಯಾಪಕವಾಗಿ ಅಕ್ರಮ ನೊಂದಾವಣೆಯಾಗಿಲ್ಲ. ಮುಸ್ಲಿಮರ ಧಾರ್ಮಿಕ ನಿಯಮದ ಪ್ರಕಾರ ಆಸ್ತಿಯ ಮೇಲೆ ಮಾಲಕತ್ವ ಹೊಂದದಿದ್ದಲ್ಲಿ ಆಸ್ತಿಯನ್ನು ಮಸೀದಿ ಅಥವ ಮದ್ರಸಗಳಿಗೆ ವಕ್ಫ್ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದರು.
ಭೂಸುಧಾರಣೆ ಕಾನೂನು ಜಾರಿಯಾಗುವ ಮುನ್ನ ಮುಸ್ಲಿಂ ಕುಟುಂಬಗಳು ಮಸೀದಿ ಮದ್ರಸಗಳಿಗೆ ಭೂಮಿಯನ್ನು ಬರಿಯ ಬಾಯಿ ಮಾತಿನ ಮೂಲಕ ಅಥವ ಮೌಖಿಕ ದಾನದ ಮೂಲಕ ಬಿಡುತ್ತಿದ್ದರು. ಹೀಗೆ ದಾನ ನೀಡಿದ ಬಹುತೇಕ ಭೂಮಿಯು ಯಾವುದೇ ದಾಖಲೆಗಳನ್ನು ಹೊಂದುತ್ತಿರಲಿಲ್ಲ. ಹೀಗಾಗಿ ಭೂಮಿಯ ಒತ್ತುವರಿ ಮತ್ತು ಅತಿಕ್ರಮಣಗಳು ಸುಲಭವಾಗಿ ಸಾಮಾನ್ಯವಾಗಿದ್ದವು. ವಕ್ಫ್ ನಲ್ಲಿ ನೊಂದಾಯಿಸಲ್ಪಟ್ಟಿರುವ ಭೂಮಿಯಲ್ಲಿ ಅತೀ ಸಣ್ಣ ಪ್ರಮಾಣದಲ್ಲಿ ವಕ್ಫ್ ಅಲ್ಲದ ಭೂಮಿ ಕೂಡ ಸೇರಿಕೊಂಡಿರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಇದು ಹೀಗೆ ನೊಂದಾವಣಿಗೊಂಡಿರುವುದು ಕಂದಾಯ ಇಲಾಖೆಯ ಸಮಸ್ಯೆಯೇ ಹೊರತು ವಕ್ಫ್ ಬೋರ್ಡ್ ಅಥವಾ ಮುಸ್ಲಿಂ ಸಮುದಾಯದ್ದಲ್ಲ ಎಂದರು.
ಮುಸ್ಲಿಂ ಬಾಂಧವ್ಯ ವೇದಿಕೆ ಮಾಜಿ ಅಧ್ಯಕ್ಷ ಹಾಗೂ ವಕೀಲ ಅನೀಸ್ ಪಾಶಾ ಮಾತನಾಡಿ, ಕೇಂದ್ರ ಸರ್ಕಾರ ಸದ್ಯಕ್ಕೆ ಮುಸ್ಲಿಮರ ವಿಚಾರದಲ್ಲಿ ಕಾನೂನು ರೂಪಿಸಿ ವಕ್ಫ್ ಆಸ್ತಿಯನ್ನು ಕೊಳ್ಳೆ ಹೊಡೆಯಲು ಹವಣಿಸುತ್ತಿದೆ. ಭಾರತದಲ್ಲಿ ಹೆಚ್ಚುಕಡಿಮೆ ಎಲ್ಲ ಧರ್ಮದವರ ಧಾರ್ಮಿಕ ಕೇಂದ್ರಗಳಿಗೆ ಹೇರಳವಾದ ಆಸ್ತಿಗಳಿವೆ. ಹೀಗಿರುವಾಗ ಬರೀ ಮುಸ್ಲಿಮರ ಆಸ್ತಿಯನ್ನು ಗುರಿ ಮಾಡುವುದು ಖಂಡನೀಯ. ಕೇಂದ್ರ ಸರ್ಕಾರ ದೇಶದ ನ್ಯಾಯಿಕ ವ್ಯವಸ್ಥೆಯ ಅಡಿಯಲ್ಲಿ ಬರುವ ವಕ್ಫ್ ಟ್ರಿಬ್ಯೂನಲ್ ರದ್ದುಗೊಳಿಸಿ ವಕ್ಫ್ ಆಸ್ತಿಯನ್ನು ಗುರುತಿಸುವುದು ಮತ್ತು ಘೋಷಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ನೀಡುತ್ತಿದೆ. ಈ ಹಿಂದಿನ ವಕ್ಫ್ ಕಾಯ್ದೆಗೆ ಈಗ ಸರ್ಕಾರ ಸೂಚಿಸಿರುವ 40ಕ್ಕೂ ಹೆಚ್ಚಿನ ತಿದ್ದುಪಡಿಗಳಲ್ಲಿ ಅನಗತ್ಯ ಮತ್ತು ಅತಿರೇಕದ ನಿಯಮಗಳನ್ನು ಸೇರಿಸುತ್ತಿದೆ ಎಂದು ಆರೋಪಿಸಿದರು.
ಮುಸ್ಲಿಂ ಬಾಂಧವ್ಯ ವೇದಿಕೆ ಅಧ್ಯಕ್ಷ, ನಿವೃತ್ತ ಡಿವೈಎಸ್ಪಿ ಸೊಹೈಲ್ ಅಹ್ಮದ್ ಮರೂರ್, ಕಾರ್ಯದರ್ಶಿ ಡಾ.ಹಕೀಮ್ ತೀರ್ಥಹಳ್ಳಿ, ಮುಸ್ಲಿಂ ಬಾಂಧವ್ಯ ವೇದಿಕೆ ಗೌರವಾಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ, ಉಡುಪಿ ಜಾಮೀಯ ಮಸೀದಿ ಅಧ್ಯಕ್ಷ ರಿಯಾಝ್ ಅಹಮದ್, ನಝೀರ್ ಬೆಳುವಾಯಿ , ಮುಬಾರಕ್ ಗುಲ್ವಾಡಿ, ಜಮೀರ್ ಅಹ್ಮದ್ ರಶದಿ, ಮುಜಾಫರ್ ಹುಸೈನ್ , ಜಿಯಾವುಲ್ಲಾ ಖಾನ್ , ವೌಲಾನ ಅಬ್ದುಲ್ ಹಫೀಝ್ ಕಾರ್ಕಳ ಉಪಸ್ಥಿತರಿದ್ದರು.