ಜಿಲ್ಲೆ

ಮುಸ್ಲಿಂ ಸಮುದಾಯವನ್ನು ಕಾಂಗ್ರೆಸ್ ಎಂದೂ ನಿರ್ಲಕ್ಷಿಸಿಲ್ಲ: ಆಲೀರ ರಶೀದ್ ಸಮರ್ಥನೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ಹಿಂದಿನಿಂದಲೂ ಕಾಂಗ್ರೆಸ್ ಕೈ ಹಿಡಿದಿರುವ ರಾಜ್ಯದ ಮುಸ್ಲಿಮರನ್ನು ಕಾಂಗ್ರೆಸ್ ಪಕ್ಷ ಎಂದೂ ನಿರ್ಲಕ್ಷಿಸಿಲ್ಲ. ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲೆಲ್ಲಾ ಮುಸ್ಲಿಂ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ದೊರಕಿದೆ. ಮುಂದೆಯೂ ದೊರಕಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷರಾದ ಆಲೀರ ಎಂ. ರಶೀದ್ ಹೇಳಿದ್ದಾರೆ.

ಮುಸ್ಲಿಂ ಸಮುದಾಯಕ್ಕೆ ಡಿಸಿಎಂ ಹುದ್ದೆ ಸೇರಿದಂತೆ ಐವರು ಶಾಸಕರನ್ನು ಮಂತ್ರಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಶಾಫಿ ಸಹದಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ರಶೀದ್, ಕಾಂಗ್ರೆಸ್ಸನ್ನು ಸಂಪೂರ್ಣವಾಗಿ ಬೆಂಬಲಿಸುತ್ತಿರುವ ಮುಸ್ಲಿಂ ಸಮುದಾಯಕ್ಕೆ ಯಾವ ಸ್ಥಾನಮಾನಗಳನ್ನು ನೀಡಬೇಕು ಎಂಬುದರ ಬಗ್ಗೆ ಪಕ್ಷದ ನಾಯಕರಿಗೆ ಸ್ಪಷ್ಟ ನಿಲುವಿದೆ. ಸಮುದಾಯದ ಹಿತ ಕಾಪಾಡಲು ಕಾಂಗ್ರೆಸ್ ಪಕ್ಷಕ್ಕೆ ಇರುವ ಬದ್ಧತೆ ಪ್ರಶ್ನಾತೀತವಾಗಿದೆ. ಈ ಕುರಿತು ಅವಕಾಶವಾದ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ಸೇತರ ಮುಸ್ಲಿಂ ಮುಖಂಡರ ಸಲಹೆ ಕಾಂಗ್ರೆಸ್ಸಿಗೆ ಅಗತ್ಯವಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.

ಶಾಫಿ ಸಹದಿ ಕಾಂಗ್ರೆಸ್ ಬೆಂಬಲಿಗರಲ್ಲ. ಈ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಜಯಗಳಿಸಲು ಇವರ ಯಾವುದೇ ಕೊಡುಗೆ ಇಲ್ಲ. ಇವರು ಬೆಂಬಲಿಸುವ ರಾಜಕೀಯ ಪಕ್ಷ ಇಡೀ ರಾಜ್ಯದಲ್ಲಿ ಕನಿಷ್ಠ ಒಬ್ಬ ಮುಸ್ಲಿಂ ಪ್ರತಿನಿಧಿಗೂ ಕೂಡ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಲಿಲ್ಲ. ಇದನ್ನು ಪ್ರಶ್ನೆ ಮಾಡಬೇಕಿದ್ದ ಶಾಫೀ ಸಹದಿ ಕಾಂಗ್ರೆಸ್ ಪಕ್ಷದ ಆಂತರಿಕ ವಿಷಯಕ್ಕೆ ಕೈ ಹಾಕಿರುವುದು ಅವರಿಗೆ ಶೋಭೆಯಲ್ಲ ಎಂದಿದ್ದಾರೆ.

ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷರಾಗಿ ನೇಮಕಗೊಂಡ ಶಾಫಿ ಸಹದಿ ಅವರು ಬಿಜೆಪಿಯಿಂದ ಲಾಭಗಳಿಸಿದ ನಂತರ ಇದೀಗ ಬಂದಿರುವ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ತಮ್ಮ ಹುದ್ದೆಯಲ್ಲಿ ಮುಂದುವರಿಯಲು ಬಯಸುತ್ತಿದ್ದಾರೆ. ಇತ್ತೀಚಿನ ಅವರ ಕೆಲವು ಹೇಳಿಕೆಗಳು ಇದಕ್ಕೆ ಪುಷ್ಟಿ ನೀಡುತ್ತಿದೆ. ತಮ್ಮ ಸ್ಥಾನ ಉಳಿಸಿಕೊಳ್ಳಲು ಮುಸ್ಲಿಂ ಸಮುದಾಯವನ್ನು ಇದೀಗ ಬಳಸಿಕೊಳ್ಳುತ್ತಿರುವ ಶಾಫಿ ಸಹದಿಯವರ ದ್ವಿಮುಖ ಧೋರಣೆ ರಾಜ್ಯದ ಜನತೆಯ ಮುಂದೆ ಬಯಲಾಗಿದೆ ಎಂದು ಹೇಳಿದ್ದಾರೆ.