ಜಿಲ್ಲೆ

ಮತ ವಿಭಜನೆಯ ಷಡ್ಯಂತ್ರ: ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಆರೋಪ

reportermys

ಮಡಿಕೇರಿ:

ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಸೋಲುವ ಭೀತಿಯನ್ನು ಎದುರಿಸುತ್ತಿರುವ ಪ್ರತಿಸ್ಪರ್ಧಿಗಳು ಕಾಂಗ್ರೆಸ್ ಮತಗಳನ್ನು ವಿಭಜಿಸುವ ಷಡ್ಯಂತ್ರದಲ್ಲಿ ತೊಡಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಆರೋಪಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಎಂ.ಎ.ಉಸ್ಮಾನ್, ಕಾಂಗ್ರೆಸ್ ಪಕ್ಷದ ಇಬ್ಬರು ಅಭ್ಯರ್ಥಿಗಳು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸುತ್ತಾರೆ ಎನ್ನುವ ಮಾಹಿತಿ ಅರಿತಿರುವ ಪ್ರತಿಸ್ಪರ್ಧಿಗಳು ಹತಾಶ ಮನೋಭಾವದಿಂದ ಕಾಂಗ್ರೆಸ್ ಮತಗಳು ಹಂಚಿ ಹೋಗುವಂತೆ ಕಾರ್ಯತಂತ್ರ ರೂಪಿಸಿದ್ದಾರೆ. ಈ ಕುತಂತ್ರಗಳ ಬಗ್ಗೆ ಮತದಾರರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಸಿದ್ದಾರೆ.
ಕಳೆದ ೨೫ ವರ್ಷಗಳಿಂದ ಅಭಿವೃದ್ಧಿ ಕಾರ್ಯಗಳಿಂದ ಮತ್ತು ಮೂಲಭೂತ ಸೌಲಭ್ಯಗಳಿಂದ ಕೊಡಗು ವಂಚಿತವಾಗಿದೆ. ಪ್ರಸ್ತುತ ಚುನಾವಣೆಯಲ್ಲಿ ಜಿಲ್ಲೆಯ ಮತದಾರರು ಜಾಗೃತರಾಗದಿದ್ದಲ್ಲಿ ಮತ್ತೆ ಐದು ವರ್ಷಗಳ ಕಾಲ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ ಎಂದು ಆರೋಪಿಸಿದ್ದಾರೆ.
ಭಾವನೆಗಳನ್ನು ಕೆಣಕುವ ಅಭ್ಯರ್ಥಿಗಳನ್ನು ಸೋಲಿಸಿ ಅಭಿವೃದ್ಧಿಗಾಗಿ ಹೊಸ ಚಿಂತನೆಯೊಂದಿಗೆ ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು. ಯಾವುದೇ ಒತ್ತಡ, ಆಮಿಷ ಮತ್ತು ಆತಂಕಕ್ಕೆ ಒಳಗಾಗದೆ ಸ್ವಯಂ ಇಚ್ಛೆಯಿಂದ ಪ್ರತಿಯೊಬ್ಬರು ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಟ್ಟಿಗೊಳಿಸಬೇಕೆಂದು ಮನವಿ ಮಾಡಿದ್ದಾರೆ.
ಪ್ರತಿಸ್ಪರ್ಧಿಗಳ ಇಲ್ಲಸಲ್ಲದ ಆರೋಪ ಮತ್ತು ಅಪಪ್ರಚಾರಗಳು ಮತ ವಿಭಜನೆಯ ತಂತ್ರಗಾರಿಕೆಯ ಒಂದು ಭಾಗವಾಗಿದೆ. ಚುನಾವಣೆಗಳು ಬಂದಾಗಲೆಲ್ಲ ಕ್ಷುಲ್ಲಕ ವಿಚಾರಗಳನ್ನು ಚಲಾವಣೆಗೆ ತಂದು ಆತಂಕ ಮೂಡಿಸಿ ಮತಗಳಿಸುವ ಕೀಳುಮಟ್ಟದ ರಾಜಕಾರಣದ ಬಗ್ಗೆ ಜಿಲ್ಲೆಯ ಜನ ಜಾಗೃತರಾಗಿದ್ದಾರೆ.