ಜಿಲ್ಲೆ

ಚಿರತೆ ಸೆರೆಗೆ ಬೋನು ಅಳವಡಿಕೆ

Raichur


ಮಸ್ಕಿ: ಪಟ್ಟಣದ ಮಲ್ಲಿಕಾರ್ಜುನ ಬೆಟ್ಟದ ಹಿಂಬದಿಯಲ್ಲಿರುವ ಬಯಲು ಆಂಜನೇಯ ದೇವಸ್ಥಾನದ ಹತ್ತಿರ ಕಂಡುಬಂದಿರುವ ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಶುಕ್ರವಾರ ಕಾರ್ಯಾಚರಣೆ ನಡೆಸಿದರು.

ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಗುಡ್ಡದಲ್ಲಿ ಹುಡುಕಾಟ ನಡೆಸಿದರು. ಅರಣ್ಯ ಇಲಾಖೆ ಅಧಿಕಾರಿ ಖಾಜಾ ಹುಸೇನ್ ನೇತೃತ್ವದಲ್ಲಿ 6ಕ್ಕೂ ಅಧಿಕ ಸಿಬ್ಬಂದಿ ಸ್ಥಳದಲ್ಲಿ ಬಿಡಾರ ಹೂಡಿದ್ದಾರೆ. ರಾಯಚೂರಿನಿಂದ ಬೋನು ತರಿಸಿ ಇಡಲಾಗಿದೆ. ರಾತ್ರಿ ಸಮಯದಲ್ಲಿ ಚಿರತೆ ಹಿಡಿಯಲು ಬೇಕಾಗುವ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅರಣ್ಯ ಅಧಿಕಾರಿ ಖಾಜಾ ಹುಸೇನ್ ತಿಳಿಸಿದ್ದಾರೆ. ಅಪರಾಧ ವಿಭಾಗದ ಪಿಎಸ್ ಭೀಮದಾಸ ಮತ್ತು ಸಿಬ್ಬಂದಿ ಅರಣ್ಯ ಇಲಾಖೆ ಕಾರ್ಯಾಚರಣೆಗೆ ಕೈಜೋಡಿಸಿದ್ದಾರೆ. ಚಿರತೆ ಕಂಡುಬಂದಿರುವ ಸ್ಥಳದಲ್ಲಿ ಸಾರ್ವಜನಿಕರು ಕುರಿ ಹಾಗೂ ದನ ಕರುಗಳನ್ನು ಮೇಯಿಸಲು ಬರಬಾರದು ಎಂದು ಪಿಎಸ್‌ಐ ಭೀಮದಾಸ ಕೋರಿದ್ದಾರೆ.