ಜಿಲ್ಲೆ

ಮಸ್ಕಿ ಕೆರೆ ಹೂಳೆತ್ತುವ ಕೆಲಸಕ್ಕೆ ವೇಗ

ಮಸ್ಕಿ: ಪಟ್ಟಣದ ಬಳಗಾನೂರು ರಸ್ತೆಯಲ್ಲಿರುವ ಕುಡಿಯುವ ನೀರಿನ ಕೆರೆಗೆ ಕಾಯಕಲ್ಪ ಕೊಡಲು ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಮತ್ತು ಸಿಬ್ಬಂದಿ ಮುಂದಾಗಿದ್ದಾರೆ. ಐದಾರು ವರ್ಷಗಳಿಂದ ಕೆರೆಯಲ್ಲಿ ಮಣ್ಣು, ಹೂಳು ತುಂಬಿಕೊಂಡಿದೆ ಎಂದು ಜನರಿಂದು ದೂರು ಬಂದ ಹಿನ್ನೆಲೆಯಲ್ಲಿ ಶುಕ್ರವಾರದಿಂದ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿಲಾಗಿದೆ.

ಈಗಾಗಲೇ ತುಂಗಭದ್ರ ಡ್ಯಾಂನಲ್ಲಿ ಒಳಹರಿವು ಹೆಚ್ಚಿದ್ದು ಕಾಲುವೆ ವ್ಯಾಪ್ತಿಗೆ ಹೊಂದಿಕೊಂಡ ಹಳ್ಳಿ, ಪಟ್ಟಣಗಳಲ್ಲಿರುವ ಕೆರೆಗಳ ಭರ್ತಿ ಮಾಡಲು ತುಂಗಭದ್ರ ಎಡದಂಡೆ ಕಾಲುವೆಗೆ ನೀರು ಬಿಡಲಾಗಿದೆ.

ರೈತರು ಗದ್ದೆಗಳಿಗೆ ಭತ್ತದ ನಾಟಿ ಮಾಡಿಕೊಳ್ಳುವುದಕ್ಕಿಂತ ಮುನ್ನ ಕುಡಿಯುವ ನೀರಿನ ಸಂಗ್ರಹಕ್ಕಾಗಿ ಕೆರೆ ತುಂಬಿಸಿಕೊಳ್ಳಬೇಕಿದ್ದು, ಅದಕ್ಕಾಗಿ ಮಸ್ಕಿ ಪಟ್ಟಣದ ಕೆರೆ ಹೂಳು ತೆಗೆದು ಸ್ವಚ್ಛ ಮಾಡಲು ಮೂರ‌್ನಾಲ್ಕು ದಿನ ಕೆಲಸದ ಅವಶ್ಯಕತೆ ಇದೆ. ಪ್ರತಿದಿನ 20-25 ಕೂಲಿ ಕಾರ್ಮಿಕರಿಂದ ಕೆಲಸ ನಡೆದಿದೆ ಎಂದು ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ತಿಳಿಸಿದರು.

25 ಅಡಿ ಆಳದ ಕೆರೆಯಲ್ಲಿ ಸದ್ಯ 3 ಅಡಿ ನೀರಿದೆ. ಕುಡಿಯುವ ನೀರು ತುಂಬಿಸಿಕೊಳ್ಳಲು 10 ಎಚ್.ಪಿ 3 ಮೋಟಾರುಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿದೆ. ಕೆರೆ ಸ್ವಚ್ಛ ಮಾಡುವ ಕೆಲಸ ಪೂರ್ಣಗೊಂಡ ಕೂಡಲೇ ಕೆರೆಗೆ ನೀರು ತುಂಬಿಸಿಕೊಳ್ಳಲಾಗುವುದೆಂದರು.