ಮಸ್ಕಿ: ಶಿಲ್ಪದಲ್ಲಿ ಕಲೆ ಅರಳಿಸುವ ವಿಶ್ವಕರ್ಮ, ಮನುಕುಲದ ಮೊದಲ ಕುಶಲಕರ್ಮಿ ಸಮುದಾಯವಾಗಿದೆ ಎಂದು ಶಾಸಕ ಆರ್. ಬಸನಗೌಡ ತುರ್ವಿಹಾಳ ಹೇಳಿದರು.
ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಶಿಲ್ಪಕಲೆ ವಿದ್ಯೆ ದೈವದತ್ತವಾಗಿ ಬಂದಿದ್ದು, ಅದನ್ನು ಮುಂದಿನ ಪೀಳಿಗಿಗೆ ಆಧುನಿಕ ರೀತಿಯಲ್ಲಿ ಪರಿಚಯಿಸುವ ಕಾರ್ಯ ಸಮುದಾಯದ ಮುಖಂಡರು ಮಾಡಬೇಕು ಎಂದರು.
ವಿಶ್ವಕರ್ಮ ಸಮುದಾಯದ ಅಧ್ಯಕ್ಷ ಉದಯ ಪತ್ತಾರ ಮಾತನಾಡಿ, ನಾಗರಿಕತೆ ಮತ್ತು ಸಾಂಸ್ಕೃತಿಕ ಪರಂಪರೆ ನಿರ್ಮಿಸುವಲ್ಲಿ ವಿಶ್ವಕರ್ಮ ಸಮುದಾಯದ ಪಾತ್ರ ಹಿರಿದಾಗಿದ್ದು, ಬದಲಾದ ಪರಿಸ್ಥಿತಿಯಲ್ಲಿ ಕುಲ ಕಸಬು ಕೈಗೊಳ್ಳುವುದು ಕಷ್ಟವಾಗಿದ್ದು, ಸೌಲಭ್ಯಗಳ ಕೊರತೆ ಕಾಡುತ್ತಿದೆ ಎಂದರು.
ಸಮುದಾಯದ ಹಿರಿಯ ಜಗದೇವಪ್ಪ ಪತ್ತಾರ, ಯುವಕರಾದ ವಿಜಯ ಬಡಿಗೇರ, ದೇವರಾಜ ಕಂಬಾರ, ಅಮರೇಶ ಪತ್ತಾರ ಇತರರಿದ್ದರು.