ಮಸ್ಕಿ ಪಟ್ಟಣದ ವೆಂಕಟಾಪುರ ರಸ್ತೆ ಹತ್ತಿರ ಪ್ರಜಾಸೌಧ ಕಟ್ಟಡ ಕಾಮಗಾರಿಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಭೂಮಿ ಪೂಜೆ ನೆರವೇರಿಸಿದರು. ಮಸ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿ, ವೆಂಕಟರಡ್ಡಿ, ಬಸನಗೌಡ ಪೊಲೀಸ್ ಪಾಟೀಲ್, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಪ್ರಾಕೃಪಸ ಸಂಘದ ಅಧ್ಯಕ್ಷ ನಾಗಭೂಷಣ ಇತರರಿದ್ದರು. 
ಜಿಲ್ಲೆ

ಸಾರ್ವಜನಿಕರ ಅಲೆದಾಟ ತಪ್ಪಿಸಲು ಪ್ರಜಾಸೌಧ ನಿರ್ಮಾಣ

ಮಸ್ಕಿ : ಸಾರ್ವಜನಿಕರ ಅಲೆದಾಟ ತಪ್ಪಿಸಲು ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಕಚೇರಿಗಳನ್ನು ಒಂದೇ ಸೂರಿನಡಿ ತರುವ ಉದ್ದೇಶದಿಂದ ಪ್ರಜಾಸೌಧ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ಪಟ್ಟಣದ ವೆಂಕಟಾಪುರ ರಸ್ತೆಯ ಹತ್ತಿರ ತಾಲೂಕು ಆಡಳಿತ (ಪ್ರಜಾಸೌಧ) ಕಟ್ಟಡ ಕಾಮಗಾರಿಗೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಮಸ್ಕಿ ತಾಲೂಕು ಕೇಂದ್ರವಾಗಿ ಎಂಟು ವರ್ಷ ಕಳೆದರೂ ಮೂಲಸೌಕರ್ಯಕ್ಕೆ ಹಿಂದಿನ ಸರ್ಕಾರ ಪ್ರಾಮುಖ್ಯತೆ ನೀಡಿರಲಿಲ್ಲ. ನಾನು ಶಾಸಕನಾದ ತರುವಾಯ ಎರಡು ವರ್ಷದಲ್ಲಿ ಅಭಿವೃದ್ಧಿ ಕೆಲಸ ಕೈಗೆತ್ತಿಕೊಂಡಿದ್ದೇನೆ ಎಂದರು.

ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ದಿವಾಳಿಯಾಗಿದೆ. ಸಿಎಂ ಬದಲಾಗುತ್ತಾರೆ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಅವರ ಸರ್ಕಾರವಿದ್ದಾಗ ಏನು ಅಭಿವೃದ್ಧಿ ಮಾಡಿದ್ದೀರಿ ಎಂಬುದನ್ನು ಹೇಳಬೇಕು ಎಂದ ಶಾಸಕರು, ಗ್ಯಾರಂಟಿ ಅನುಷ್ಠಾನದ ಜತೆಗೆ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳು ಕೂಡ ನಡೆದಿವೆ. ಕರ್ನಾಟಕ ಹೌಸಿಂಗ್ ಬೋರ್ಡ್‌ನಿಂದ 8.60 ಕೋಟಿ ರೂ. ವೆಚ್ಚದಲ್ಲಿ ಪ್ರಜಾಸೌಧ ನಿರ್ಮಾಣವಾಗಲಿದೆ. 4.60 ಲಕ್ಷ ರೂ.ವೆಚ್ಚದಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಶಿಕ್ಷಣ ಮತ್ತು ರೈತರ ಪರ ಕಾಳಜಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ ಎಂದರು.

ಎಸಿ ಬಸವಣೆಪ್ಪ ಕಲಶೆಟ್ಟಿ, ತಹಸೀಲ್ದಾರ್ ಡಾ.ಮಲ್ಲಪ್ಪ ಕೆ. ಯರಗೋಳ ಮಾತನಾಡಿದರು. ಇದೇ ವೇಳೆ ಕಾರ್ಮಿಕರಿಗೆ ಕಿಟ್ ಹಾಗೂ ಗ್ರಾಮ ಆಡಳಿತಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು. ಪುರಸಭೆ ಸದಸ್ಯ ದೊಡ್ಡ ಕರಿಯಪ್ಪ ಇತರರಿದ್ದರು.

ವಸತಿ ಫಲಾನುಭವಿಗಳ ಆಯ್ಕೆ ವಿಳಂಬವೇಕೆ?

ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಮಾತನಾಡಿ, ಮಸ್ಕಿಯಲ್ಲಿ ಅಗ್ನಿಶಾಮಕ ದಳ ಮತ್ತು ಸಬ್‌ರಿಜಿಸ್ಟರ್ ಕಚೇರಿ ಆರಂಭಿಸಬೇಕು ಮತ್ತು ಪಟ್ಟಣಕ್ಕೆ ವಸತಿ ಯೋಜನೆಯಡಿ ಮನೆಗಳ ಮಂಜೂರು ಮಾಡಬೇಕು ಎಂದು ಕೋರಿದರು. ಶಾಸಕ ಆರ್.ಬಸನಗೌಡ ತುರ್ವಿಹಾಳ ಪ್ರತಿಕ್ರಿಯಿಸಿ, ಮನೆಗಳ ಹಂಚಿಕೆಗಾಗಿ ಭೂಮಿ ಖರೀದಿಸಲಾಗಿದೆ. ಫಲಾನುಭವಿಗಳನ್ನು ಯಾಕೆ ಆಯ್ಕೆ ಮಾಡಿಲ್ಲ? ರಸ್ತೆಯೇ ಇಲ್ಲದ ಕಡೆ ಭೂಮಿ ಖರೀದಿಸಿದ್ದು ಯಾಕೆ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.