ಮಸ್ಕಿಯ ಸರ್ಕಾರಿ ಬಾಲಕರ ಪ್ರೌಢಶಾಲೆ ಮೈದಾನದಲ್ಲಿ ಮಸ್ಕಿ ವಲಯ ಮಟ್ಟದ ಕ್ರೀಡಾಕೂಟಕ್ಕೆ ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಚಾಲನೆ ನೀಡಿದರು. ಸದಸ್ಯ ದೊಡ್ಡಕರಿಯಪ್ಪ ಚನ್ನಬಸವ ಮೇಟಿ, ಪ್ರಾಚಾರ್ಯ ತಿಪ್ಪಣ್ಣ, ಪ್ರಮುಖರಾದ ಪಂಪಾಪತಿ ಹೂಗಾರ, ಕೃಷ್ಣ ಚಿಗರಿ ಇದ್ದರು. 
ಜಿಲ್ಲೆ

ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ ಬರಲಿ

ಮಸ್ಕಿ: ದೈಹಿಕ, ಮಾನಸಿಕ ಸದೃಢತೆಗೆ ಕ್ರೀಡೆಗಳು ಅವಶ್ಯಕ. ಪಾಠದ ಜತೆ ಆಟದಲ್ಲಿ ಕೂಡ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕೆಂದು ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ ಹೇಳಿದರು.

ಪಟ್ಟಣದ ಕೆಪಿಎಸ್‌ನ ಸರ್ಕಾರಿ ಬಾಲಕರ ಪ್ರೌಢಶಾಲೆ ಮೈದಾನದಲ್ಲಿ ಮಂಗಳವಾರ ಆಯೋಜಿಸಿದ್ದ ಮಸ್ಕಿ ವಲಯ ಮಟ್ಟದ 17 ವರ್ಷದೊಳಗಿನ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.

ಕಠಿಣ ಪರಿಶ್ರಮದಿಂದ ಕ್ರೀಡೆ ಹಾಗೂ ಅಭ್ಯಾಸದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಕ್ರೀಡಾಪಟುಗಳು ಸೋಲು-ಗೆಲುವು ಲೆಕ್ಕಿಸದೆ ಕ್ರೀಡಾ ಮನೋಭಾವದಿಂದ ಆಟವಾಡಬೇಕು.

ನಿರ್ಣಾಯಕರು ಕೂಡ ಮಕ್ಕಳು ಶಾಲೆಗಳ ಬಗ್ಗೆ ತಾರತಮ್ಯ ಮಾಡದೆ ಆಟದಲ್ಲಿ ತೀರ್ಪು ನೀಡಬೇಕು. ವಿದ್ಯಾರ್ಥಿಗಳು ನಿರ್ಣಾಯಕರ ತೀರ್ಪಿಗೆ ಬದ್ಧರಾಗಿರಬೇಕೆಂದು ಹೇಳಿದರು.

ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಚನ್ನಬಸವ ಮೇಟಿ ಮಾತನಾಡಿದರು. ಪುರಸಭೆ ಸದಸ್ಯ ದೊಡ್ಡಕರಿಯಪ್ಪ ಕ್ರೀಡಾಜ್ಯೋತಿ ಸ್ವೀಕರಿಸಿದರು. ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪಂಪಾಪತಿ ಹೂಗಾರ, ಸಿಆರ್‌ಪಿ ರಾಮಸ್ವಾಮಿ, ಪ್ರಾಚಾರ್ಯ ತಿಪ್ಪಣ್ಣ, ಮುಖ್ಯಶಿಕ್ಷಕ ಶಂಕರ, ಎಸ್ಡಿಎಂಸಿ ಅಧ್ಯಕ್ಷ ಅನ್ವರ್, ಪ್ರಮುಖರಾದ ಈರಮ್ಮ, ಕೃಷ್ಣ ಚಿಗರಿ, ಎಂ.ಎಸ್.ರಾಘವೇಂದ್ರ ಕೊರೇಕರ್ ಇದ್ದರು.