ಹೊನ್ನಾವರ: ಸಿದ್ಧ ಸಿದ್ಧಿಕ್ಷೇತ್ರ ಇಡಗುಂಜಿ ಮಹಾಗಣಪನ ಸನ್ನಿಧಿಯಲ್ಲಿ ಇತ್ತೀಚೆಗೆ 72 ನೇ ವರ್ಷದ ಸಂಗೀತ ಸೇವೆಯು ನಾದ ಸುಧೆಯನ್ನು ಹರಿಸಿತು.
ಜಿಲ್ಲೆ, ಹೊರ ಜಿಲ್ಲೆಗಳ ಸುಪ್ರಸಿದ್ಧ ಕಲಾವಿದರು ಗಣಪನ ಸನ್ನಿಧಿಯಲ್ಲಿ ನಿರಂತರ 12 ಗಂಟೆಗಳ ಕಾಲ ಸಂಗೀತ ಸೇವೆ ಸಲ್ಲಿಸಿದರು.
ಇಡಗುಂಜಿಯ ಶ್ರೀ ಗಜಾನನ ಯಾಜಿ, ಗೋಕರ್ಣದ ಕಟ್ಟಿಗೆ ಭಟ್ಟರು, ಕಲಬಾಗ ದಿ. ಗೋವಿಂದ ಹೆಗಡೆ, ಕೆರೆಮನೆ ದಿ. ಮಹಾಬಲ ಹೆಗಡೆ ಮುಂತಾದವರು ಈ ಹಿಂದೆ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದರು.
ಪ್ರಸ್ತುತ ಪ್ರೊ. ಎಸ್. ಶಂಭು ಭಟ್ಟ ಕಡತೋಕ ಅವರು ಇದರ ರೂವಾರಿಗಳಾಗಿದ್ದಾರೆ. ಈ ತಲೆಮಾರಿನ ಗಾಯಕರಾದ ಶಿವಾನಂದ ಭಟ್ಟ ಹಡಿನಬಾಳ, ಶ್ರೀಧರ ಕಲಭಾಗ, ವಿಶ್ವೇಶ್ವರ ಭಟ್ಟ ಖರ್ವಾ, ತಬಲಾ ಪಟುಗಳಾದ ಶೇಷಾದ್ರಿ ಅಯ್ಯಂಗಾರ, ಎನ್.ಜಿ. ಹೆಗಡೆ ಕಪ್ಪೆಕೆರೆ, ಶ್ರೀ ಗುರುರಾಜ ಹೆಗಡೆ ಆಡುಕಳ ಇವರುಗಳ ಸಹಕಾರದೊಂದಿಗೆ ದೇವಳದ ಆಡಳಿತ ಮಂಡಳಿ ಅರ್ಚಕರ ಸಹಕಾರದಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು.
ಅನನ್ಯಾ, ಸಹನಾ ರಾಗ “ಭೈರವ”ವನ್ನು, ಭಾಗ್ಯಲಕ್ಷ್ಮೀ ಭಟ್ಟ ರಾಗ “ಗುಣಕಲಿ”ಯನ್ನು, ವಿನಾಯಕ ಭಂಡಾರಿ ಶಹನಾಯಿಯಲ್ಲಿ “ಅಹೀರ ಭೈರವ”ವನ್ನು, ಶ್ರೀಲತಾ ಹೆಗಡೆ “ಭೈರಾಗಿ ಭೈರವ” ರಾಗವನ್ನು, ವಿನಾಯಕ ಮುತಮುರಡು ರಾಗ “ಸಾಲಗಾವರಾಳ”, ತೇಜಾ ಹೆಗಡೆ “ವಾಸಂತಿ” ರಾಗವನ್ನು, ವಿನಾಯಕ ಹುಗ್ಗಣ್ಣವರ ರಾಗ “ಗುಜರಿ ತೋಡಿ”ಯನ್ನು, ಪ್ರಸ್ತುತಪಡಿಸಿದರು.
ಇದನ್ನೂ ಓದಿ:ಹಾವು ಕಚ್ಚಿ ಹೈಸ್ಕೂಲ್ ಉದ್ಯೋಗಿ ಸಾವು
ಗೋಪಾಲಕೃಷ್ಣ ಹೆಗಡೆ ಸಿರ್ಸಿ ಸಿತಾರದಲ್ಲಿ “ಬೃಂದಾವನಿ ಸಾರಂಗ”ವನ್ನು, ಪಂ. ಪರಮೇಶ್ವರ ಹೆಗಡೆ ರಾಗ “ಮುಲ್ತಾನಿ”ಯನ್ನು, ಕೃಷ್ಣಮೂರ್ತಿ ಅಂಕೋಲಾ “ಶುದ್ಧ ಸಾರಂಗ”ವನ್ನು, ಗಣೇಶ ಹೆಗಡೆ ಯಲ್ಲಾಪುರ “ಭೀಮಪಲಾಸ” ರಾಗವನ್ನು, ಡಾ. ಅಶೋಕ ಹುಗ್ಗಣ್ಣವರ “ಕೋಮಲ ರಿಷಭ ಅಸಾವರಿ” ರಾಗವನ್ನು, ಪ್ರಕಾಶ ಹೆಗಡೆ ಕಲ್ಲಾರೆ ಸಿದ್ಧಾಪುರ ಬಾನ್ಸುರಿಯಲ್ಲಿ “ಮಧುವಂತಿ”ಯನ್ನು, ಗಣಪತಿ ಹೆಗಡೆ ಯಲ್ಲಾಪುರ ರಾಗ “ಪಟದೀಪ”, ಪ್ರಸನ್ನ ಭಟ್ಟ ಉಡುಪಿ “ಯಮನ್” ರಾಗವನ್ನು, ಎಂ.ಎಸ್.ಭಟ್ಟ ಅಲೇಖ “ಶಿವರಂಜಿನಿ”ಯನ್ನು, ವಿಭಾ ಹೆಗಡೆ ಯಲ್ಲಾಪುರ “ಗೊರಕ್ ಕಲ್ಯಾಣ”ವನ್ನು, ಡಾ.ಸಂತೋಷ ಚಂದಾವರ ತಬಲಾ ಸೋಲೋವನ್ನು, ಪಂ. ಗಣಪತಿ ಭಟ್ಟ ಹಾಸಣಗಿ ರಾಗ “ಜನಸಮ್ಮೋಹಿನಿ”ಯನ್ನು, ಗುರುಪ್ರಸಾದ ಹೆಗಡೆ ಧಾರವಾಡ ಸಾರಂಗಿಯಲ್ಲಿ “ಮಲ್ಹಾರ” ರಾಗವನ್ನು, ವಿಶ್ವೇಶ್ವರ ಭಟ್ಟ ಖರ್ವಾ ರಾಗ “ದರ್ಬಾರಿ”ಯನ್ನು, ಇಂಚರಾ ನಾಯ್ಕ ರಾಗ “ಸಾರಂಗ”ವನ್ನು ಹಾಗೂ ಕೊನೆಯದಾಗಿ ಶಿವಾನಂದ ಭಟ್ಟ “ರಾಗ ಮಾಲಕಂಸ” ಹಾಡಿ “ಭೈರವಿ”ಯೊಂದಿಗೆ ಕಾರ್ಯಕ್ರಮಕ್ಕೆ ಮಂಗಳ ಹಾಡಿದರು.
ಇವರುಗಳಿಗೆ ತಬಲಾ ಪಟುಗಳಾದ ಗೋಪಾಲಕೃಷ್ಣ ಹೆಗಡೆ ಕಲಭಾಗ, ಶೇಷಾದ್ರಿ ಅಯ್ಯಂಗಾರ, ಎನ್.ಜಿ. ಹೆಗಡೆ ಕಪ್ಪೆಕೇರಿ, ಗಣೇಶ ಗುಂಡಕಲ್ ಯಲ್ಲಾಪುರ, ಗುರುರಾಜ್ ಹೆಗಡೆ ಆಡುಕಳ, ಅಕ್ಷಯ ಭಟ್ಟ ಹಂಸಳ್ಳಿ, ವಿನಾಯಕ ಭಟ್ಟ ಹರಡಸೆ, ಶಶಿಧರ ಭಟ್ಟ ಅಂಕೋಲಾ, ಭರತ ಹೆಗಡೆ ಕವಲಕ್ಕಿ, ಸರಸ್ವತಿ ಅಯ್ಯಂಗಾರ ಇವರೆಲ್ಲಾ ತಬಲಾ ಸಾಥ ನೀಡಿ ಮೆರಗು ನೀಡಿದರು.
ಹಾರ್ಮೊನಿಯಂದಲ್ಲಿ ಪ್ರಕಾಶ ಹೆಗಡೆ ಶಿರಸಿ, ಗೌರೀಶ ಯಾಜಿ ಕೂಜಳ್ಳಿ, ಭರತ ಹೆಗಡೆ ಹೆಬ್ಬಲಸು, ಹರಿಶ್ಚಂದ್ರ ನಾಯ್ಕ ಇಡಗುಂಜಿ, ಮಾರುತಿ ನಾಯ್ಕ ಇಡಗುಂಜಿ, ಅಂಜನಾ ಹೆಗಡೆ ಶಿರ್ಸಿ, ಮನೋಜ ಭಟ್ಟ ಗುಂಡಬಾಳ, ಗುರುಪ್ರಸಾದ ಹೆಗಡೆ ಧಾರವಾಡ ಸಂವಾದಿನೀ ಸಾಥ್ ನೀಡಿದರು.
ಈ ಎಲ್ಲ ಕಾರ್ಯಕ್ರಮಕ್ಕೆಅಂತಾರಾಷ್ಟ್ರೀಯ ಕಲಾವಿದರಾಗಿ ಪ್ರಸಿದ್ಧಿ ಹೊಂದಿದ ಡಾ. ಅಶೋಕ ಹುಗ್ಗಣ್ಣವರ, ಪಂಡಿತ ಪರಮೇಶ್ವರ ಹೆಗಡೆ ಕಲಭಾಗ ಹಾಗೂ ಪಂ. ಗಣಪತಿ ಭಟ್ಟ ಹಾಸಣಗಿ ಅವರು ತಮ್ಮ ಪಾಂಡಿತ್ಯ ಪೂರ್ಣವಾದ ಸುಶ್ರಾವ್ಯ ಗಾಯನವನ್ನು ಮಹಾಗಣಪತಿಗೆ ಸಮರ್ಪಿಸಿದ್ದು ಶ್ರೋತೃಗಳನ್ನು ಭಕ್ತಿ ಪರವಶವಾಗುವಂತೆ ಮಾಡಿತು, ಕಾರ್ಯಕ್ರಮದ ಮೆರುಗನ್ನು, ಶ್ರದ್ಧೆಯನ್ನು ಹೆಚ್ಚಿಸಿತು.
ಶಿವಾನಂದ ಭಟ್ಟ, ಎನ್.ಜಿ.ಹೆಗಡೆ, ವಿಶ್ವೇಶ್ವರ ಭಟ್ಟ ಖರ್ವಾ ನಿರೂಪಿಸಿದರೆ, ಕಲಾವಿದರಿಗೆ “ಕರ್ನಾಟಕ ಕಲಾಶ್ರೀ” ಎಸ್. ಶಂಭು ಭಟ್ಟ, ಪತ್ರಕರ್ತ ಶ್ರೀ ಜಿ.ಯು.ಭಟ್ಟ, ಶ್ರೀ ಕೆ.ಎಸ್.ರಾವ್ ಉಡುಪಿ, ಶ್ರೀ ನಾರಾಯಣ ಯಾಜಿ ಸಾಲೆಬೈಲ ಗೌರವಿಸಿದರು. ದೇವಾಲಯದ ವಿಶ್ವನಾಥ ಹೆಗಡೆ ಹಾಗೂ ಅರ್ಚಕರು ಸಹಕರಿಸಿದರು. ಅಪಾರ ಶ್ರೋತೃಗಳು ಬೆಳಗಿನಿಂದ ರಾತ್ರಿ ತನಕ ಸಂಗೀತದ ವಿವಿಧ ರಾಗವನ್ನು ಅನುಭವಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.