ಜಿಲ್ಲೆ

ಒತ್ತಡ ನಿವಾರಣೆಗೆ ಸಂಗೀತ ಅತ್ಯುತ್ತಮ ಔಷಧ ಸ್ವರಾಲಯ 94ನೇ ಸಾಧನಾ ಶಿಬಿರದಲ್ಲಿ ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅಭಿಮತ

ಮಂಗಳೂರು: ಜೀವನದಲ್ಲಿ ಎದುರಾಗುವ ಯಾವುದೇ ರೀತಿಯ ಒತ್ತಡವನ್ನು ನಿಯಂತ್ರಿಸಲು ಸಂಗೀತದಷ್ಟು ಅತ್ಯುತ್ತಮವಾದ ಔಷಧ ಬೇರೆ ಇಲ್ಲ ಎಂದು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಹೇಳಿದರು.

ಮಂಗಳೂರಿನ ಸ್ಚರಾಲಯ ಸಾಧನಾ ಫೌಂಡೇಶನ್ ಮತ್ತು ಕಲಾ ಶಾಲೆ ವತಿಯಿಂದ ಬೋಳಾರದ ಪಾಲೆಮಾರ್ ಗಾರ್ಡನ್ ನಲ್ಲಿ ಭಾನುವಾರ ನಡೆದ ಸ್ವರಾಲಯ 94ನೇ ಸಾಧನಾ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸಂಗೀತ ಕ್ಯಾಂಪ್ ನಡೆಸುವುದೆಂದರೆ ಆರೋಗ್ಯ ಕ್ಯಾಂಪ್ ನಡೆಸಿದಂತೆ. ಅನೇಕ ರೋಗಗಳಿಗೆ ಇದೇ ಕ್ಯಾಂಪ್ ನಲ್ಲಿ ಔಷಧ ಸಿಗುತ್ತದೆ. ಆದ್ದರಿಂದ ನಿತ್ಯ ಸಂಗೀತ ಆಲಿಸುವ ಮೂಲಕ ಆರೋಗ್ಯ ಜೀವನ ನಡೆಸಬಹುದು. ಕೇವಲ ಮನುಷ್ಯರು ಮಾತ್ರ ಸಂಗೀತ ಆಲಿಸುವುದಲ್ಲ. ಮರ ಗಿಡಗಳು ಕೂಡಾ ಸಂಗೀತವನ್ನು ಆಲಿಸುತ್ತದೆ ಎಂದು ಹೇಳಿದರು.

ಮಂಗಳೂರು ಸ್ಮಾರ್ಟ್ ಸಿಟಿ ಜಿಎಂ ಅರುಣ್ ಪ್ರಭಾ ಮಾತನಾಡಿ, ಸಂಗೀತ ಶಿಬಿರಗಳು ಮಕ್ಕಳ ಪ್ರತಿಭೆಯ ಅನಾವರಣಕ್ಕೆ ಅತ್ಯುತ್ತಮ ವೇದಿಕೆ. ಅಲ್ಲಲ್ಲಿ ಇಂತಹಾ ಶಿಬಿರಗಳು ನಡೆಯಲಿ. ಈ ಮೂಲಕ ನೂರಾರು ಪ್ರತಿಭೆಗಳ ಅನಾವರಣ ಆಗಲಿ ಎಂದು ಆಶಿಸಿದರು.

ವಿದ್ವಾನ್ ನೈಬಿ ಪ್ರಭಾಕರ್, ಸ್ವರಾಲಯ ಸಾಧನಾ ಫೌಂಡೇಶನ್ ಉಪಾಧ್ಯಕ್ಷ ರಮೇಶ್ ಭಟ್, ಕೃಷ್ಣರಾಜ್ ಮಯ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಸ್ವರಾಲಯ ಸಾಧನಾ ಫೌಂಡೇಶನ್ ಕಾರ್ಯದರ್ಶಿ ವಿದ್ವಾನ್ ವಿಶ್ವಾಸ್ ಕೃಷ್ಣ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ಚರಾಲಯ ಸಾಧನಾ ಫೌಂಡೇಶನ್ ಅಧ್ಯಕ್ಷ ಶ್ರೀಕೃಷ್ಣ ಭಟ್ ವಂದಿಸಿದರು.

ಬಳಿಕ ವಿದುಷಿ ಸಾವಿತ್ರಿ ಪ್ರಭಾಕರ್ ಹಾಗೂ ವಿದುಷಿ ಪಾವನಿ ನಾಗಸಿಂಹ ಅವರ ದ್ವಂದ್ವ ಸಂಗೀತ ಕಛೇರಿ ನಡೆಯಿತು. ವಿದ್ವಾನ್ ವಿಶ್ವಾಸ್ ಕೃಷ್ಣ ಅವರು ಪಿಟೀಲಿನಲ್ಲಿ, ವಿದ್ವಾನ್ ಪನ್ನಗ ಶರ್ಮನ್ ಹಾಗೂ ವಿದ್ವಾನ್ ನೈಬಿ ಪ್ರಭಾಕರ್ ಅವರು ಮೃದಂಗದಲ್ಲಿ ಸಹಕರಿಸಿದರು.