ಯಲ್ಲಾಪುರ: ಸಂಗೀತ ನಮ್ಮನ್ನು ಧ್ಯಾನಸ್ಥ ಸ್ಥಿತಿಗೆ ತಲುಪಿಸುವ ಮಾಧ್ಯಮವಾಗಿದೆ ಎಂದು ಸಾಹಿತಿ ಸುಬ್ರಾಯ ಮತ್ತೀಹಳ್ಳಿ ಹೇಳಿದರು.
ತಾಲೂಕಿನ ಶಿರನಾಲಾದ ‘ಗೋಕುಲ’ ದ ಆವಾರದಲ್ಲಿ ಗೋಕುಲ ಬಾನ್ಸುರಿ ಗುರುಕುಲ ಟ್ರಸ್ಟ್ ಹಮ್ಮಿಕೊಂಡಿದ್ದ 16ನೇ ವಾರ್ಷಿಕ ಸಂಗೀತ ಕಾರ್ಯಕ್ರಮ ‘ಗೋಕುಲ ಉತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು. ಶಿರದೊಳಗೆ ನಾಲೆ ನಿರ್ವಿುಸಿ ಸಂಗೀತ ಕ್ಷೇತ್ರಕ್ಕೆ ಅನುಪಮ ಕೊಡುಗೆ ನೀಡುತ್ತಿರುವ ಶಿರನಾಲಾದ ಗೋಕುಲ ಗುರುಕುಲದ ಮೂಲಕ ಅನೇಕ ವಿದ್ಯಾರ್ಥಿಗಳು ಕಲಾವಿದರಾಗಿ ಹೊರಹೊಮ್ಮುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಉತ್ಸವ ಸಂಘಟನೆಗೆ ನೆರವು ನೀಡಿದ ದಾನಿಗಳನ್ನು ಗೌರವಿಸಲಾಯಿತು. ಆಕಾಶವಾಣಿ ಮತ್ತು ದೂರದರ್ಶನದ ‘ಬಿ’, ‘ಹೈ’ ಶ್ರೇಣಿಯ ಕಲಾವಿದರಾಗಿ ಮಾನ್ಯತೆ ಪಡೆದ ಗುರುಕುಲದ ವಿದ್ಯಾರ್ಥಿಗಳಾದ ನಿರಂಜನ ಹೆಗಡೆ, ರಾಷ್ಟ್ರಮಟ್ಟದ ಎಸ್.ಬಿ.ಎಫ್ ಯುವ ಸಂಗೀತೋತ್ಸವದಲ್ಲಿ ತೃತೀಯ ಸ್ಥಾನ ಪಡೆದ ಕಾರ್ತೀಕ ಭಟ್ಟ ಅವರನ್ನು ಸನ್ಮಾನಿಸಲಾಯಿತು.
ಟ್ರಸ್ಟಿನ ಅಧ್ಯಕ್ಷ ನಾಗರಾಜ ಹೆಗಡೆ ಸ್ವಾಗತಿಸಿದರು. ವಿದ್ಯಾರ್ಥಿ ಅಖಿಲಾ ಹೆಗಡೆ ವರದಿ ವಾಚಿಸಿದರು. ನಿವೃತ್ತ ಶಿಕ್ಷಕ ಸುಬ್ರಹ್ಮಣ್ಯ ಹೆಗಡೆ ನಿರ್ವಹಿಸಿದರು. ಟ್ರಸ್ಟಿ ಶ್ರೀಪಾದ ಹೆಗಡೆ ವಂದಿಸಿದರು. ನಂತರ ಹಿರಿ-ಕಿರಿಯ ಕಲಾವಿದರು ಪ್ರಸ್ತುತಪಡಿಸಿದ ಸಂಗೀತ ಕಾರ್ಯಕ್ರಮ ಸಂಗೀತ ಪ್ರೇಮಿಗಳ ಮನ ಗೆದ್ದಿತು.