ಗಂಗಾವತಿ ಬಾಲಕಿಯರ ಸ.ಹಿ.ಪ್ರಾ.ಶಾಲೆಯಲ್ಲಿ ಶ್ರೀ ಗುರುಕುಮಾರೇಶ್ವರ ಸಂಗೀತ ಮತ್ತು ಲಲಿತಕಲಾ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಸ್ವರ ಸಿಂಚನ ಸಂಗೀತ ಕಾರ್ಯಕ್ರಮವನ್ನು ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ನಿಜಲಿಂಗಪ್ಪ ಮೆಣಸಿಗೆ ಉದ್ಘಾಟಿಸಿದರು. ಮುಖ್ಯಶಿಕ್ಷಕ ರಮೇಶ ನರಗುಂದ, ಶಿಕ್ಷಕರಾದ ಬಿ.ಆರ್. ಜೋಶಿ, ಶ್ರೀನಿವಾಸ, ರಜಿನಿ, ಕಲಾವಿದರಾದ ಪಂಚಾಕ್ಷರಕುಮಾರ, ರಾಜಾಸಾಬ್ ಮುದ್ದಾಬಳ್ಳಿ ಇತರರಿದ್ದರು. 
ಜಿಲ್ಲೆ

ಸಂಗೀತಕ್ಕಿದೆ ಮನಸ್ಸು ನಿರ್ಮಲಗೊಳಿಸುವ ಶಕ್ತಿ

ಗಂಗಾವತಿ: ಸಂಗೀತ ಅಭ್ಯಾಸದಲ್ಲಿ ಮಕ್ಕಳನ್ನು ಹೆಚ್ಚು ತೊಡಗಿಸಬೇಕಿದ್ದು, ಸಂಗೀತ ಕಲಿಕೆ ಏಕಾಗ್ರತೆಗೆ ಪೂರಕವಾಗಿದೆ ಎಂದು ಕಸಾಪ ತಾಲೂಕು ಘಟಕದ ಮಾಜಿ ಅಧ್ಯಕ್ಷ ನಿಜಲಿಂಗಪ್ಪ ಮೆಣಸಿಗೆ ಹೇಳಿದರು.

ನಗರದ ಬಾಲಕಿಯರ ಸ.ಹಿ.ಪ್ರಾ.ಶಾಲೆಯಲ್ಲಿ ಶ್ರೀ ಗುರು ಕುಮಾರೇಶ್ವರ ಸಂಗೀತ ಮತ್ತು ಲಲಿತಕಲಾ ಸಂಸ್ಥೆಯಿಂದ ಶನಿವಾರ ಹಮ್ಮಿಕೊಂಡಿದ್ದ ಸ್ವರ ಸಿಂಚನ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒತ್ತಡದ ಬದುಕಿನಲ್ಲಿ ತಾಳ್ಮೆ, ಶಾಂತಿ ಮತ್ತು ನೆಮ್ಮದಿ ಕಳೆದುಕೊಳ್ಳುತ್ತಿದ್ದು, ಸಂಗೀತದಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳುವುದರಲ್ಲಿ ಒತ್ತಡ ನಿವಾರಣೆ ಸಾಧ್ಯ. ಏಕಾಗ್ರತೆ ಹೆಚ್ಚಿಸಿ, ಮನಸ್ಸು ನಿರ್ಮಲಗೊಳಿಸುವ ಸಾಮರ್ಥ್ಯ ಸಂಗೀತಕ್ಕಿದೆ. ಕಾರ್ಯಕ್ರಮ ಆಯೋಜನೆ ಮೂಲಕ ಕಲಾವಿದರಿಗೆ ವೇದಿಕೆ ಒದಗಿಸಿಕೊಡುವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಲಾವಿದರಾದ ರಾಮಾಂಜನೇಯಲು ಅವರಿಂದ ಕ್ಲಾರಿಯೋನೆಟ್, ರಾಜಾಸಾಬ್‌ರಿಗೆ ತಬಲಾ ಸೋಲೋ, ರಾಮಚಂದ್ರಪ್ಪ ಉಪ್ಪಾರರಿಂದ ಹಾರ್ಮೋನಿಯಂ ಸೊಲೋ ಜರುಗಿತು.

ಪಂಚಾಕ್ಷರ ಕುಮಾರ ಮತ್ತು ದೊಡ್ಡಬಸವ ನಾಗಲೀಕರಿಂದ ವಚನ ಗಾಯ, ಶಿವಪ್ಪ ಹುಳ್ಳಿ ಅವರಿಂದ ಭಕ್ತಿ ಸಂಗೀತ, ರವಿ ಕಾಶೆಟ್ಟಿಯರಿಂದ ದಾಸವಾಣಿ, ಶಿವರಂಜನಿ ಪಟ್ಟಣಶೆಟ್ಟಿ, ಸುಮೇಧಾ ಕುಲಕರ್ಣಿ, ಕಾವ್ಯಾ ಬಣಜಿಗರಿಂದ ಸಮೂಹಗಾಯನ ಪ್ರಸ್ತುತಪಡಿಸಲಾಯಿತು.

ಕಲಾವಿದರಾದ ಮಹ್ಮದ್‌ರಿಜ್ವಾನ್ ಮುದ್ದಾಬಳ್ಳಿ (ತಬಲಾ), ಯುವರಾಜ ಕುರುಗೋಡು (ಹಾರ್ಮೋನಿಯಂ), ಶಿವಕುಮಾರ ಗೆಜ್ಜಿ (ತಾಳ) ಮತ್ತು ಸಂಜನ್ ಬೆಲ್ಲದ್ (ರಿದಂಪ್ಯಾಡ್) ಭಾಗವಹಿಸಿದ್ದರು. ಮುಖ್ಯಶಿಕ್ಷಕ ರಮೇಶ ನರಗುಂದ, ಶಿಕ್ಷಕರಾದ ಬಿ.ಆರ್. ಜೋಶಿ, ಶ್ರೀನಿವಾಸ, ರಜಿನಿ, ಗೀತಾಂಜಲಿ ಇತರರಿದ್ದರು.