ಜಿಲ್ಲೆ

ಸಂಗೀತಕ್ಕಿದೆ ಅದ್ಭುತ ಶಕ್ತಿ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಇಡೀ ವಿಶ್ವವೇ ಸಂಗೀತಕ್ಕೆ ತಲೆಬಾಗುತ್ತದೆ. ಅಂತಹ ಅದ್ಭುತವಾದ ಶಕ್ತಿ ಸಂಗೀತಕ್ಕಿದೆ. ನೆಮ್ಮದಿ, ಸುಖ, ಆನಂದ ಅನುಭವಿಸಲು ಸಂಗೀತ ಆಲಿಸಬೇಕು ಎಂದು ಪಂ. ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಟ್ರಸ್ಟಿ ಭಾರತಿದೇವಿ ರಾಜಗುರು ಹೇಳಿದರು.

ನಗರದ ಮಾಳಮಡ್ಡಿಯ ಸ್ವರಲಯ ಆರಾಧನೆ ಸಂಸ್ಥೆ ಹಾಗೂ ಸುಮಧ್ವ ಸಂಗೀತ ವಿದ್ಯಾಲಯ ವತಿಯಿಂದ ಇಲ್ಲಿನ ಆಲೂರು ವೆಂಕಟರಾವ್​ ಭವನದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಂಗೀತ ವಿದ್ಯಾಲಯದ ವಾರಿಷಿಕಾ ಸಂಗೀತೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಯುವ ಪೀಳಿಗೆಯಲ್ಲಿ ಸಂಗೀತದ ಬಗ್ಗೆ ಅಭಿರುಚಿ ಮೂಡಿಸುವ ನಿಟ್ಟಿನಲ್ಲಿ ಸ್ವರಲಯ ಆರಾಧನೆ ಸಂಸ್ಥೆ ಹಾಗೂ ಸುಮಧ್ವ ಸಂಗೀತ ವಿದ್ಯಾಲಯ ಗಮನಾರ್ಹ ಕೆಲಸ ಮಾಡಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ರಾಚಯ್ಯ ಹಿರೇಮಠ, ಇಂದಿನ ಮಕ್ಕಳಲ್ಲಿ ಕಲೆ ಹಾಗೂ ಸಂಸ್ಕೃತಿ ಸಂಗೀತದ ಬಗ್ಗೆ ಒಲವು ಮೂಡಿಸಲು ಶ್ರಮಿಸುತ್ತಿರುವ ಸಂಸ್ಥೆಯ ಕಾರ್ಯ ಶ್ಲಾನೀಯ. ನಮ್ಮ ಕಲೆ ಉಳಿಸುವಲ್ಲಿ ಮಕ್ಕಳು ಹಾಗೂ ಪಾಲಕರು ಕಾಳಜಿ ವಹಿಸಬೇಕು ಎಂದರು.

ಹಿರಿಯ ವಕೀಲ ಅರುಣ ಜೋಶಿ ಅಧ್ಯಕ್ಷತೆ ವಹಿಸಿದ್ದರು. ಡಾ. ರಾಚಯ್ಯ ಹಿರೇಮಠ, ಡಾ. ಮೃತ್ಯುಂಜಯ ಅಗಡಿ, ಡಾ. ವಿಜಯಲಕ್ಷ್ಮೀ, ಡಾ. ಶಿವಲೀಲಾ, ನಾಗರತ್ನ ಅವರಿಗೆ ಸನ್ಮಾನಿಸಲಾಯಿತು. ಸಂಗೀತ ವಿದ್ಯಾಲಯದ ಮಕ್ಕಳು, ವಿವಿಧ ಸಂಗೀತ, ತಬಲಾ ವಾದನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.

ಸಂಸ್ಥೆ ಅಧ್ಯಕ್ಷ ಜಯತೀರ್ಥ ಪಂಚಮುಖಿ, ಕಾರ್ಯದರ್ಶಿ ವೈಷ್ಣವಿ ಜಯತೀರ್ಥ ಪಂಚಮುಖಿ, ಪ್ರಸನ್ನ ಜೊಶಿ, ಸದಸ್ಯರು, ಪಾಲಕರು, ಮಕ್ಕಳು, ಇತರರು ಇದ್ದರು. ರವಿ ಕುಲಕರ್ಣಿ ನಿರೂಪಿಸಿದರು.