ಸದೇಶ್ ಕಾರ್ಮಾಡ್ ಮೈಸೂರು
ನಗರದ ಉದ್ಯಾನಗಳಿಗೆ ಜನರನ್ನು ಆಕರ್ಷಿಸುವ ಸಲುವಾಗಿ ನಗರ ಪಾಲಿಕೆ ನಗರದ ಉದ್ಯಾನಗಳಲ್ಲಿ ನಿರ್ಮಾಣ ಮಾಡಿದ ಸಂಗೀತ ಕಾರಂಜಿ ನಿರ್ವಹಣೆ ಕೊರತೆಯಿಂದ ಸ್ತಬ್ಧಗೊಂಡಿದೆ.
ಕೆಆರ್‌ಎಸ್ ಮಾದರಿಯಲ್ಲಿ ನಗರದ ಕುಪ್ಪಣ್ಣ ಉದ್ಯಾನದಲ್ಲಿ ತೋಟಗಾರಿಕಾ ಇಲಾಖೆ ಸಂಗೀತ ಕಾರಂಜಿಯನ್ನು ಕುಪ್ಪಣ್ಣ ಉದ್ಯಾನ ದಲ್ಲಿ ನಿರ್ಮಾಣ ಮಾಡಿತ್ತು. ಅದಾದ ನಂತರ ನಗರ ಪಾಲಿಕೆ ನಗರದ ವಿದ್ಯಾರಣ್ಯಪುರಂ ಹಾಗೂ ನಿವೇದಿತಾ ನಗರದಲ್ಲಿ ಇದೇ ಮಾದರಿಯಲ್ಲಿ ಸಂಗೀತ ಕಾರಂಜಿಯನ್ನು 2020ರಲ್ಲಿ ನಿರ್ಮಾಣ ಮಾಡಿತ್ತು. ಕೋವಿಡ್ ಸಂದರ್ಭದಲ್ಲಿ ಈ ನೃತ್ಯ ಕಾರಂಜಿ ಸ್ಥಗಿತಗೊ ಂಡಿತು. ಅದಾದ ನಂತರ ನಿರ್ವಹಣೆಯ ಕೊರತೆಯಿಂದ ನೃತ್ಯ ಕಾರಂಜಿ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ. ಈ ನೃತ್ಯ ಕಾರಂಜಿ ನಿರ್ಮಾಣಕ್ಕೆ ತಲಾ 40 ಲಕ್ಷ ರೂ.ಗಳನ್ನು ವಿನಿಯೋಗಿಸಲಾಗಿದೆ. ನೃತ್ಯ ಕಾರಂಜಿ ನಿರ್ಮಾಣಕ್ಕೆ ಪಾಲಿಕೆ ತೋರಿದ ಆಸಕ್ತಿಯನ್ನು ಅದರ ನಿರ್ವಹಣೆಗೆ ನೀಡದೆ ಇರುವುದು ಬೇಸರದ ಸಂಗತಿ.
ಪ್ರತಿ ಶನಿವಾರ, ಭಾನುವಾರ ಹಾಗೂ ರಜಾ ದಿನಗಳಲ್ಲಿ ಈ ಸಂಗೀತ ನೃತ್ಯ ಕಾರಂಜಿ ಪ್ರದರ್ಶನವನ್ನು ಸಂಜೆ 7 ರಿಂದ 7.30ರವರೆಗೆ ಹಮ್ಮಿಕೊಳ್ಳಲಾಗುತಿತ್ತು. ದೇಶಭಕ್ತಿ ಗೀತೆ, ಕನ್ನಡ ನಾಡಿಗೆ ಸಂಬಂಧಿಸಿದ ಗೀತೆಗಳನ್ನು ಹಾಕಲಾಗುತಿತ್ತು. ಈ ಹಾಡಿಗೆ ತಕ್ಕಂತೆ ಕಾರಂಜಿಯು ಚಿಮ್ಮುವ ಮೂಲಕ ಜನರಿಗೆ ಮುದ ನೀಡುತಿತ್ತು.
ಸಂಗೀತ ಕಾರಂಜಿಯನ್ನು ಆಗಿಂದಾಗೆ ನಿರ್ವಹಣೆ ಮಾಡದೆ ಇದ್ದರೆ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದಕ್ಕೆ ತಾಂತ್ರಿಕ ತಜ್ಞರ ತಂಡದ ಅವಶ್ಯಕ. ಸಂಗೀತ ಕಾರಂಜಿ ನಿರ್ಮಾಣ ಮಾಡಲು ಆಸಕ್ತಿ ತೋರಿದ ಪಾಲಿಕೆ ಅದರ ನಿರ್ವಹಣೆಗೆ ತಾಂತ್ರಿಕ ತಜ್ಞರ ತಂಡ ರಚಿಸುವ ಗೋಜಿಗೆ ಹೋಗದ ಹಿನ್ನೆಲೆಯಲ್ಲಿ ಸಂಗೀತ ಕಾರಂಜಿಗಳು ಸ್ತಬ್ಧಗೊಂಡಿವೆ. ಪಾಲಿಕೆ ಕೂಡಲೇ ಇದಕ್ಕೆ ತಜ್ಞರ ತಂಡ ರಚಿಸಲು ಮುಂದಾಗಬೇಕು ಅಥವಾ ಖಾಸಗಿ ಏಜೆನ್ಸಿಗೆ ನಿರ್ವಹಣೆಯ ಜವಾಬ್ದಾರಿ ವಹಿಸುವುದು ಸೂಕ್ತ.
ಸಂಗೀತ ಕಾರಂಜಿಗಳು ನಿರ್ವಹಣೆಯ ಕೊರತೆಯಿಂದ ಸ್ತಬ್ಧಗೊಂಡಿರುವುದು ಒಂದು ಕಡೆಯಾದರೆ ನಗರದಲ್ಲಿ ಸಾಕಷ್ಟು ಉದ್ಯಾನ ಗಳು ನಿರ್ವಹಣೆ ಕಾಣದೆ ಮೂಲೆಗುಂಪಾಗಿದೆ. ರಾಜಧಾನಿ ಬೆಂಗಳೂರು ಉದ್ಯಾನ ನಗರಿ ಎಂದೇ ಹೆಸರುವಾಸಿ. ಆದರೆ, ಉದ್ಯಾನಗಳ ವಿಚಾರದಲ್ಲಿ ಸಾಂಸ್ಕೃತಿಕ ನಗರಿ ಮೈಸೂರು ಬೆಂಗಳೂರು ನಗರವನ್ನೂ ಮೀರಿಸಿದೆ. ಬೆಂಗಳೂರು ನಗರದ ವಿಸ್ತೀರ್ಣ ಹಾಗೂ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ಮೈಸೂರಿನಲ್ಲಿಯೇ ಹೆಚ್ಚಿನ ಪ್ರಮಾಣದಲ್ಲಿ ಉದ್ಯಾನಗಳು ಇವೆ. ಸಾಕಷ್ಟು ಪ್ರಮಾಣದಲ್ಲಿ ಉದ್ಯಾನಗಳು ಇರುವ ಹಿನ್ನೆಲೆಯಲ್ಲಿ ಅವುಗಳನ್ನು ನಿರ್ವಹಣೆ ಮಾಡುವುದು ಹೇಗೆ ಎಂಬುದು ಪಾಲಿಕೆ ಮುಂದಿರುವ ಚಿಂತೆಯಾಗಿದ್ದು, ಸಂಗೀತ ಕಾರಂಜಿಗೆ ಹಣವನ್ನು ದುಂದುವೆಚ್ಚ ಮಾಡುವ ಬದಲು ಆ ಅನುದಾನವನ್ನು ಉದ್ಯಾನಗಳ ಅಭಿವೃದ್ಧಿ ಹಾಗೂ ನಿರ್ವಹಣೆಗೆ ಬಳಕೆ ಮಾಡಿಕೊಳ್ಳಬ ಹುದಿತ್ತು.
ಬೆಂಗಳೂರಿನಲ್ಲಿ ಒಟ್ಟು 1,247 ಉದ್ಯಾನಗಳು ಇದ್ದು, 1.31 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಮೈಸೂರು ನಗರದ ಜನಸಂಖ್ಯೆ ಕೇವಲ 12 ಲಕ್ಷ ಇದ್ದು, ಉದ್ಯಾನಗಳ ಸಂಖ್ಯೆ ಬರೋಬ್ಬರಿ 580 ಇವೆ. ಬೆಂಗಳೂರಿನ ವಿಸ್ತೀರ್ಣ ಹಾಗೂ ಜನಸಂಖ್ಯೆಗೆ ಹೋಲಿಕೆ ಮಾಡಿದರೆ ಮೈಸೂರು ನಗರದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಾನಗಳು ಇವೆ.
ನಗರದ ಎಲ್ಲ ಉದ್ಯಾನಗಳನ್ನು ನಿರ್ವಣೆ ಮಾಡುವಷ್ಟು ಅನುದಾನ ಪಾಲಿಕೆ ಬಳಿ ಇಲ್ಲ. ಹೀಗಾಗಿ ಹಲವಾರು ಉದ್ಯಾನಗಳು ನಿರ್ವಹಣೆಯ ಕೊರತೆ ಎದುರಿಸುತ್ತಿವೆ. ಉದ್ಯಾನಗಳು ಅಭಿವೃದ್ಧಿಗೊಂಡರೆ ಆ ಪ್ರದೇಶದ ಅಂದವೂ ಹೆಚ್ಚಾಗುತ್ತದೆ. ಹೀಗಾಗಿ ಉದ್ಯಾನಗಳ ಅಭಿವೃದ್ಧಿಗೆ ಪಾಲಿಕೆ ಹೆಚ್ಚಿನ ಗಮನ ಹರಿಸುವುದು ಸೂಕ್ತ.
ಮೈಸೂರಿನ ಸಾಕಷ್ಟು ಜನರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದಾರೆ. ಕುಕ್ಕರಹಳ್ಳಿ ಕೆರೆ ಹಾಗೂ ಚಾಮುಂಡಿಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ವಾಯು ವಿಹಾರಕ್ಕೆ ತೆರಳುತ್ತಾರೆ. ಆದರೆ, ಎಲ್ಲರಿಗೂ ಕುಕ್ಕರಹಳ್ಳಿ ಕೆರೆ, ಚಾಮುಂಡಿಬೆಟ್ಟಕ್ಕೆ ತೆರಳಲು ಸಾಧ್ಯವಿಲ್ಲ. ಹೀಗಾಗಿ ನಗರದ ವಿವಿಧ ಬಡಾವಣೆಗಳಲ್ಲಿರುವ ಉದ್ಯಾನಗಳಲ್ಲಿ ವಾಯು ವಿಹಾರಕ್ಕೆ ತೆರಳುವ ಹಿನ್ನೆಲೆಯಲ್ಲಿ ಬಡಾವಣೆಗಳಲ್ಲಿರುವ ಉದ್ಯಾನಗಳು ಅಭಿವೃದ್ಧಿಯ ಸ್ಪರ್ಶ ಕಾಣಬೇಕಾಗಿದೆ.
ನಗರದ ವಾರ್ಡ್‌ಗಳಲ್ಲಿ ನಿರ್ಮಾಣ ಮಾಡಲಾಗಿರುವ ಸಂಗೀತ ಕಾರಂಜಿಗಳು ನಿರ್ವಹಣೆಯ ಕೊರತೆಯಿಂದ ಕಾರ್ಯನಿರ್ವಹಿಸುತ್ತಿಲ್ಲ. ನಗರ ಪಾಲಿಕೆಯಿಂದ ಸಂಗೀತ ಕಾರಂಜಿಯ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಇದರ ಜವಾಬ್ದಾರಿಯನ್ನು ಖಾಸಗಿಯವರಿಗೆ ವಹಿಸುವುದು ಸೂಕ್ತ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.
ಶಿವಕುಮಾರ್, ಮೇಯರ್
ಕೆಲವು ತಾಂತ್ರಿಕ ಸಮಸ್ಯೆಯಿಂದ ವಿದ್ಯಾರಣ್ಯಪುರಂನಲ್ಲಿರುವ ಸಂಗೀತ ಕಾರಂಜಿ ಸ್ಥಗಿತಗೊಂಡಿದ್ದು, ದುರಸ್ತಿಗೆ ಕ್ರಮ ವಹಿಸಲಾಗುತ್ತಿದೆ. ಒಂದು ವಾರದ ಒಳಗೆ ಮತ್ತೆ ಸಂಗೀತ ಕಾರಂಜಿ ಪ್ರಾರಂಭಗೊಳ್ಳುವ ನಿರೀಕ್ಷೆ ಇದೆ. ಈ ಕಾರಂಜಿ ನಿರ್ವಹಣೆಗೆ ಪ್ರತ್ಯೇಕ ತಂಡ ರಚಿಸುವ ಅವಶ್ಯಕತೆ ಇದೆ. ಇಲ್ಲವಾದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣ ಬಗೆಹರಿಸಲು ಸಾಧ್ಯವಿಲ್ಲ. ಪ್ರಸ್ತುತ ಪಾಲಿಕೆ ಸಿಬ್ಬಂದಿ ಯೇ ಇದರ ಜವಾಬ್ದಾರಿ ವಹಿಸಿಕೊಂಡಿದ್ದು, ಅವರು ತಾಂತ್ರಿಕ ತಜ್ಞರು ಅಲ್ಲ. ಹೀಗಾಗಿ ಸಂಗೀತ ಕಾರಂಜಿ ನಿರ್ವಹಣೆಯ ಜವಾಬ್ದಾರಿಯನ್ನು ಯಾವುದಾದರೊಂದು ಏಜನ್ಸಿಗೆ ವಹಿಸುವುದು ಸೂಕ್ತ.
ಮ.ವಿ. ರಾಮಪ್ರಸಾದ್, ನಗರ ಪಾಲಿಕೆ ಸದಸ್ಯ